ಅಮಿತ್‌ ಶಾ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿಗೆ ಆದೇಶಿಸಿದ್ದರು : ಸಂಸತ್ತಿನಲ್ಲಿ ರಾಹುಲ್ ಗಾಂಧಿ ಆರೋಪ

"ಗೃಹ ಸಚಿವ ಎಂದು ಕರೆಯಲ್ಪಡುವವರಿಗೆ ಲೋಕಸಭೆಗೆ ಬರಲು ಧೈರ್ಯವಿಲ್ಲ"

Update: 2026-07-29 14:38 IST

Photo | YouTube/PTI

ಹೊಸದಿಲ್ಲಿ: ಪ್ರತಿಭಟನಾ ನಿರತ ವಿದ್ಯಾರ್ಥಿಗಳು “ಅಂಧಭಕ್ತರು” ಆಗಲು ನಿರಾಕರಿಸಿದ್ದು, ತಮ್ಮ ಪೋಷಕರು ಎದುರಿಸುತ್ತಿರುವ ಭಯದ ನಡುವೆಯೂ ಬಿಜೆಪಿ ಮತ್ತು RSS ವಿರುದ್ಧ ದೃಢವಾಗಿ ನಿಂತಿರುವುದಕ್ಕೆ ಅವರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶ್ಲಾಘಿಸಿದರು.

ವಿದ್ಯಾರ್ಥಿಗಳು ತಮ್ಮ ವೃತ್ತಿ ಮತ್ತು ಭವಿಷ್ಯವನ್ನು ಬೆದರಿಸುವ ಪ್ರಯತ್ನಗಳು ನಡೆಯುತ್ತಿದ್ದರೂ ಅದಕ್ಕೆ ಮಣಿಯದೆ ಧೈರ್ಯ ಪ್ರದರ್ಶಿಸಿದ್ದಾರೆ ಎಂದು ಅವರು ಹೇಳಿದರು. ವಿವಿಧ ಧರ್ಮಗಳ ಜನರನ್ನು ಏಕೆ ಗುರಿಯಾಗಿಸಲಾಗುತ್ತಿದೆ ಮತ್ತು ಜನರು ತಾವು ಆಯ್ಕೆ ಮಾಡಿಕೊಂಡವರನ್ನು ಪ್ರೀತಿಸುವುದನ್ನು ಏಕೆ ತಡೆಯಲಾಗುತ್ತಿದೆ ಎಂದು ಪ್ರಶ್ನಿಸಿದರು.

ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, “ಗೃಹ ಸಚಿವ ಎಂದು ಕರೆಯಲ್ಪಡುವವರು” ಲೋಕಸಭೆಗೆ ಬಂದು ಕುಳಿತುಕೊಳ್ಳುವ ಧೈರ್ಯವಿಲ್ಲ ಎಂಬುದನ್ನು ನೋಡಿ ತಮಗೆ “ತುಂಬಾ ಸಂತೋಷವಾಗಿದೆ” ಎಂದು ಹೇಳಿದರು.

ಗೃಹ ಸಚಿವರು ಪೊಲೀಸರಿಗೆ ಗುಂಡು ಹಾರಿಸಲು ಆದೇಶ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಇದಕ್ಕೆ ತಕ್ಷಣ ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ಆ ಆದೇಶವನ್ನು ನಮಗೆ ತೋರಿಸಿ” ಎಂದು ಹೇಳುವ ಮೂಲಕ ತಮ್ಮ ಆರೋಪಕ್ಕೆ ಪೂರಕವಾದ ದಾಖಲೆ ಸಲ್ಲಿಸುವಂತೆ ರಾಹುಲ್ ಗಾಂಧಿಗೆ ಸವಾಲು ಹಾಕಿದರು.

ರಾಹುಲ್ ಗಾಂಧಿಯ ಈ ಹೇಳಿಕೆಗಳ ಬಳಿಕ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಕೋಲಾಹಲ ಉಂಟಾಯಿತು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News