×
Ad

ಏರ್ ಇಂಡಿಯಾ ವಿಮಾನ ಅಪಘಾತದ ದಿನದಂದೇ ಚಿತ್ರ ನಿರ್ದೇಶಕ ನಾಪತ್ತೆ!

Update: 2025-06-16 12:14 IST

ಮಹೇಶ್ ಕಲಾವಾಡಿಯಾ (Photo: Instagram/@mahesh_jirawala)

ಅಹಮದಾಬಾದ್: ಕಳೆದ ವಾರ ಅಹಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ನಂತರ ಚಲನಚಿತ್ರ ನಿರ್ದೇಶಕರೊಬ್ಬರು ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಫೋನ್ ಲೊಕೇಶನ್, ಅಪಘಾತ ಸ್ಥಳದಿಂದ ಕೇವಲ 700 ಮೀಟರ್ ದೂರದಲ್ಲಿದ್ದಾರೆ ಎಂದು ಕೊನೆಯದಾಗಿ ತೋರಿಸಿದೆ. ಇದು ಸಹಜವಾಗಿ ಕುಟುಂಬದವರಿಗೆ ಆತಂಕ ಉಂಟು ಮಾಡಿದ್ದು, ಅವರ ಪತ್ತೆಗಾಗಿ ಕುಟುಂಬವು ಡಿಎನ್ಎ ಮಾದರಿಗಳನ್ನು ನೀಡಿದೆ ಎಂದು ತಿಳಿದುಬಂದಿದೆ.

ಜೂನ್ 12 ರಂದು ಮಧ್ಯಾಹ್ನ 1:39 ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಲಂಡನ್‌ಗೆ ತೆರಳಬೇಕಿದ್ದ ವಿಮಾನವು ಮೇಘನಿನಗರದ ವೈದ್ಯಕೀಯ ಕಾಲೇಜಿನ ಆವರಣಕ್ಕೆ ಅಪ್ಪಳಿಸಿತು. ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಮತ್ತು ವಸತಿ ಪ್ರದೇಶದಲ್ಲಿದ್ದ ಕನಿಷ್ಠ 29 ಜನರು ಮೃತಪಟ್ಟಿದ್ದಾರೆ.

ನರೋಡಾ ನಿವಾಸಿಯಾಗಿರುವ ಮಹೇಶ್ ಕಲಾವಾಡಿಯಾ, ಮಹೇಶ್ ಜಿರಾವಾಲಾ ಎಂದೂ ಕರೆಯಲ್ಪಡುವ ಮಹೇಶ್ ಅವರು ಸಂಗೀತ ಆಲ್ಬಮ್‌ಗಳನ್ನು ನಿರ್ದೇಶಿಸುತ್ತಾರೆ. ವಿಮಾನ ಅಪಘಾತ ನಡೆದ ದಿನ ಮಧ್ಯಾಹ್ನ ಲಾ ಗಾರ್ಡನ್ ಪ್ರದೇಶದಲ್ಲಿ ಯಾರನ್ನೋ ಭೇಟಿಯಾಗಲು ಮಹೇಶ್ ಹೋಗಿದ್ದರು ಎಂದು ಅವರ ಪತ್ನಿ ಹೇತಲ್ ಹೇಳಿದರು.

"ನನ್ನ ಪತಿ ಮಧ್ಯಾಹ್ನ 1:14 ಕ್ಕೆ ನನಗೆ ಕರೆ ಮಾಡಿ ತನ್ನ ಬೇಟಿ ಕಾರ್ಯಕ್ರಮ ಮುಗಿದು ಮನೆಗೆ ತೆರಳುತ್ತಿದ್ದೇನೆ ಇಂದು ಫೋನ್ ಕರೆ ಮಾಡಿ ತಿಳಿಸಿದ್ದರು. ಆದರೆ, ಅವರು ಮನೆಗೆ ಹಿಂತಿರುಗದಿದ್ದಾಗ ನಾನು ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ನಂತರ, ನನ್ನ ಪತಿಯ ಮೊಬೈಲ್ ಫೋನ್‌ನ ಕೊನೆಯ ಲೊಕೇಶನ್ ಅವರು ಅಪಘಾತದ ಸ್ಥಳದಿಂದ 700 ಮೀಟರ್ ದೂರದಲ್ಲಿ ಇದ್ದಾರೆ ಎಂದು ತೋರಿಸಿದೆ" ಎಂದು ಅವರು ಹೇಳಿದರು.

"ಮಧ್ಯಾಹ್ನ 1:40 ರ ಸುಮಾರಿಗೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಈಗ ನನ್ನ ಪತಿಯ ಸ್ಕೂಟರ್ ಮತ್ತು ಮೊಬೈಲ್ ಫೋನ್ ಕಾಣೆಯಾಗಿದೆ. ಇದೆಲ್ಲವೂ ಸೋಜಿಗವೆನಿಸಿದೆ. ಏಕೆಂದರೆ ಅವರು ಮನೆಗೆ ಬರಲು ಆ ಮಾರ್ಗವನ್ನು ಎಂದಿಗೂ ಬಳಸುತ್ತಿರಲಿಲ್ಲ. ಅಪಘಾತದಿಂದಾಗಿ ಆ ವಸತಿ ಪ್ರದೇಶದಲ್ಲಿದ್ದವರೂ ಮೃತಪಟ್ಟಿರುವುದರಿಂದ ಅದರಲ್ಲಿ ನನ್ನ ಪತಿ ಏನಾದರೂ ಇದ್ದಿರಬಹುದೇ ಎಂದು ಪರೀಕ್ಷಿಸಲು ನಾವು ಡಿಎನ್ಎ ಮಾದರಿಗಳನ್ನು ಸಲ್ಲಿಸಿದ್ದೇವೆ" ಎಂದು ಹೇತಲ್ ಹೇಳಿದರು.

ವಿಮಾನ ದುರಂತದಲ್ಲಿ ಹಲವು ಮೃತದೇಹಗಳು ಗುರುತಿಸಲಾಗದಷ್ಟು ಮಟ್ಟಿಗೆ ಸುಟ್ಟುಹೋಗಿವೆ. ಭೀಕರ ದುರಂತದ ಸಂತ್ರಸ್ಥರನ್ನು ಗುರುತಿಸಲು ಅಧಿಕಾರಿಗಳು ಡಿಎನ್ಎ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News