×
Ad

ಭಾರತದ ಅಣೆಕಟ್ಟುಗಳ ಮೇಲೆ ದಾಳಿ ಮಾಡಿದರೆ ಪಾಕಿಸ್ತಾನಕ್ಕೆ ತಕ್ಕ ಪ್ರತಿಕ್ರಿಯೆ : ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಎಚ್ಚರಿಕೆ

Update: 2025-05-08 18:39 IST

ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿ |Credit: YouTube/@Ministry of External Affairs, India

ಹೊಸದಿಲ್ಲಿ: ಸುಳ್ಳು ಮಾಹಿತಿಗಳನ್ನು ಇಟ್ಟುಕೊಂಡು ಭಾರತದ ಅಣೆಕಟ್ಟುಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನವು ಪ್ರಯತ್ನಿಸಿದರೆ ಅದರ ಪರಿಣಾಮಗಳಿಗೆ ಪಾಕಿಸ್ತಾನವೇ ನೇರ ಹೊಣೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಸಂಜೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಮಾಹಿತಿ ಹಂಚಿಕೊಳ್ಳಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಿನ್ನೆಯಿಂದ ನಡೆದ ದಾಳಿಯಲ್ಲಿ 16 ಮಂದಿ ಭಾರತೀಯ ನಾಗರೀಕರು ಮೃತಪಟ್ಟಿದ್ದಾರೆ. 59 ಮಂದಿಗೆ ಗಾಯಗಳಾಗಿದೆ. ಈಗ ನಡೆಯುತ್ತಿರುವ ದಾಳಿಯ ಕುರಿತು ಪಾಕಿಸ್ತಾನವು ಅಂತರಾಷ್ಟ್ರೀಯ ಮಟ್ಟದಲ್ಲಿ ಮಧ್ಯಸ್ತಿಕೆ ವಹಿಸಲು ಆಗ್ರಹಿಸುತ್ತಿದೆ. ಭಾರತ ಎಷ್ಟೇ ಶಾಂತಿ ಪಾಲಿಸಿದರೂ, ದೇಶಗಳ ನಡುವಿನ ಒಪ್ಪಂದವನ್ನು ಕಳೆದ 60 ವರ್ಷಗಳಿಂದಲೂ ಪಾಕಿಸ್ತಾನವು ಉಲ್ಲಂಘಿಸುತ್ತಿದೆ. ಈ ಹಿಂದೆಯೂ ಭಾರತದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ, ತನಿಖೆಯ ಬಳಿಕ ನಾವು ಒದಗಿಸುವ ಪುರಾವೆಗಳನ್ನು ಪಾಕಿಸ್ತಾನವು ಭಯೋತ್ಪಾದಕರನ್ನು ರಕ್ಷಿಸಲು ಬಳಸುತ್ತಿತ್ತುಮ, ಎಂದು ವಿಕ್ರಂ ಮಿಸ್ರಿ ಹೇಳಿದರು.

ಸಿಂಧೂ ಒಪ್ಪಂದದ ಕುರಿತು ಮರು ಮಾತುಕತೆ ನಡೆಸಲು ಭಾರತವು ಕಳೆದ ಒಂದೂವರೆ ಎರಡು ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಹಲವಾರು ಬಾರಿ ನೋಟಿಸ್ ನೀಡಿದೆ. ಆದರೆ ಪಾಕಿಸ್ತಾನದಿಂದ ಅದಕ್ಕೆ ಪ್ರತಿಕ್ರಿಯೆಯೇ ಬರಲಿಲ್ಲ ಎಂದು ಮಿಸ್ರಿ ಉಲ್ಲೇಖಿಸಿದರು.

"ಪಾಕಿಸ್ತಾನವು ಆಪರೇಷನ್‌ ಸಿಂಧೂರ್‌ ನಲ್ಲಿ ಹತರಾದ ಭಯೋತ್ಪಾದಕರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದೆ. ಈ ರೀತಿಯ ಆಚರಣೆ ಅಲ್ಲಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಪಾಕಿಸ್ತಾನದ ರಕ್ಷಣಾ ಸಚಿವ ಸೇರಿದಂತೆ ಮಾಜಿ ವಿದೇಶಾಂಗ ಸಚಿವರೂ, ಭಯೋತ್ಪಾದಕರಿಗೆ ಆಶ್ರಯ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ" ಎಂದು ಮಿಸ್ರಿ ಅವರು ಚಿತ್ರ ಸಹಿತ ಅಂತ್ಯಸಂಸ್ಕಾರದ ಪುರಾವೆ ಒದಗಿಸಿದರು.

►ಗುರುವಾರದ ಕಾರ್ಯಾಚರಣೆ ಹೇಗಿತ್ತು?

ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಶಿ, ”ನಾವು ಪಾಕಿಸ್ತಾನದ ಯಾವುದೇ ಸೇನಾ ನೆಲೆಗಳ ಮೇಲೆ ದಾಳಿ ಮಾಡಿಲ್ಲ. ಆದರೆ ಪಾಕಿಸ್ತಾನವು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಯತ್ನಸಿದೆ. ಮೇ 7-8ರ ರಾತ್ರಿ ಪಾಕಿಸ್ತಾನವು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ಗುರಿಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಲು ಪ್ರಯತ್ನಿಸಿತು. ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದರೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು. ಪಾಕಿಸ್ತಾನದ ದಾಳಿಗಳನ್ನು ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ತಡೆದವು”, ಎಂದರು.

"ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ, ಪೂಂಚ್, ಮೆಂಧರ್ ಮತ್ತು ರಾಜೌರಿ ವಲಯಗಳಲ್ಲಿ ಪಾಕಿಸ್ತಾನವು ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ. ಪಾಕಿಸ್ತಾನದ ಗುಂಡಿನ ದಾಳಿಯಿಂದಾಗಿ ಮೂವರು ಮಹಿಳೆಯರು ಮತ್ತು ಐವರು ಮಕ್ಕಳು ಸೇರಿದಂತೆ 16 ಅಮಾಯಕರು ಬಲಿಯಾಗಿದ್ದಾರೆ. ಪಾಕಿಸ್ತಾನದ ದಾಳಿ ನಿಲ್ಲಿಸಲು ಭಾರತೀಯ ಸೇನೆ ತಕ್ಕ ಪ್ರತಿಕ್ರಿಯೆ ನೀಡಿದೆ” ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News