ಗ್ರೆಟಾ ಥಂಬರ್ಗ್ ಇದ್ದ ಗಾಝಾಕ್ಕೆ ತೆರಳುತ್ತಿದ್ದ ಬೋಟ್‌ಗಳ ಗುಂಪಿಗೆ ಅಪ್ಪಳಿಸಿದ ಡ್ರೋನ್
ಆರೋಪ ನಿರಾಕರಿಸಿದ ಅಧಿಕಾರಿಗಳು
Screengrab | PC : X
ಟೆಹ್ರಾನ್: ನಾಗರಿಕ ಬೋಟ್‌ಗಳ ಮೂಲಕ ಯುದ್ಧಗ್ರಸ್ತ ಗಾಝಾಕ್ಕೆ ಮಾನವೀಯ ನೆರವು ಒದಗಿಸಲು ಅಂತರರಾಷ್ಟ್ರೀಯ ಉಪಕ್ರಮ ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ(ಜಿಎಸ್‌ಎಫ್) ಟ್ಯುನಿಷಿಯಾ ಸಮುದ್ರದಲ್ಲಿ ಸಾಗುತ್ತಿದ್ದ ತನ್ನ ಬೋಟ್‌ವೊಂದಕ್ಕೆ ಡ್ರೋನ್ ಅಪ್ಪಳಿಸಿದೆ, ಅದರಲ್ಲಿದ್ದ ಎಲ್ಲ ಆರು ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ ಎಂದು ಮಂಗಳವಾರ ತಿಳಿಸಿದೆ.
ಸ್ವೀಡನ್‌ನ ಸಾಮಾಜಿಕ ಕಾರ್ಯಕರ್ತೆ ಗ್ರೆಟಾ ಥಂಬರ್ಗ್ ಮತ್ತು ಪೋರ್ಚುಗೀಸ್‌ನ ಎಡಪಂಥೀಯ ರಾಜಕಾರಣಿ ಮರಿಯಾನಾ ಮೊರ್ಟಾಗುವಾ ಸೇರಿದಂತೆ 44 ದೇಶಗಳ ನಿಯೋಗಗಳು ಫ್ಲೋಟಿಲ್ಲಾದೊಂದಿಗೆ ಕೈಜೋಡಿಸಿವೆ.
ಹಡಗಿನೊಳಗೆ ಸ್ಫೋಟ ಸಂಭವಿಸಿತ್ತು ಎಂದು ಟ್ಯುನಿಷಿಯಾ ಅಧಿಕಾರಿಗಳು ಹೇಳಿದ್ದರೆ, ಬೋಟ್ ಮೇಲೆ ಡ್ರೋನ್ ದಾಳಿ ನಡೆದಿದೆ ಎಂಬ ವರದಿಗಳು ಆಧಾರರಹಿತವಾಗಿವೆ ಎಂದು ಟ್ಯುನಿಷಿಯಾದ ನ್ಯಾಷನಲ್ ಗಾರ್ಡ್‌ನ ವಕ್ತಾರರು ತಿಳಿಸಿದ್ದಾರೆ.
ಥಂಬರ್ಗ್ ಸೇರಿದಂತೆ ಫ್ಲೋಟಿಲ್ಲಾದ ಸಂಚಾಲನ ಸಮಿತಿಯ ಸದಸ್ಯರನ್ನು ಹೊತ್ತೊಯ್ಯುತ್ತಿದ್ದ ಪೋರ್ಚುಗೀಸ್ ಧ್ವಜವನ್ನು ಹೊಂದಿರುವ ಬೋಟ್‌ನ ಮುಖ್ಯ ಡೆಕ್ ಮತ್ತು ಡೆಕ್‌ನಡಿಯ ಸಂಗ್ರಹ ಸ್ಥಳಕ್ಕೆ ಬೆಂಕಿಯಿಂದ ಹಾನಿಯುಂಟಾಗಿದೆ ಎಂದು ಜಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಡ್ರೋನ್ ದಾಳಿಯ ಬಳಿಕ ಫ್ಲೋಟಿಲ್ಲಾದ ಬೋಟ್‌ಗಳು ನಿಂತಿದ್ದ ಟ್ಯುನಿಷಿಯಾದ ಸಿದಿ ಬೌ ಸೈದ್ ಬಂದರಿನ ಹೊರಗೆ ಡಝನ್‌ಗಟ್ಟಲೆ ಜನರು ಜಮಾಯಿಸಿದ್ದು,ಫೆಲೆಸ್ತೀನ್ ಧ್ವಜಗಳನ್ನು ಬೀಸುತ್ತಿದ್ದ ಅವರು ‘ಫೆಲೆಸ್ತೀನ್ ಮುಕ್ತಗೊಳಿಸಿ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದರು.
2007ರಲ್ಲಿ ಹಮಾಸ್ ಗಾಝಾದ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಇಸ್ರೇಲ್ ಕರಾವಳಿ ಪ್ರದೇಶದಲ್ಲಿ ನೌಕಾ ನಿರ್ಬಂಧವನ್ನು ಹೇರಿದೆ.
ಡ್ರೋನ್ ದಾಳಿಯ ಕುರಿತು ತನಿಖೆ ನಡೆಯುತ್ತಿದೆ ಮತ್ತು ವರದಿ ಲಭ್ಯವಾದ ಬಳಿಕ ಅದನ್ನು ಬಿಡುಗಡೆ ಮಾಡಲಾಗುವುದು ಎಂದೂ ಹೇಳಿಕೆಯಲ್ಲಿ ತಿಳಿಸಿರುವ ಜಿಎಸ್‌ಎಫ್, ‘ನಮ್ಮ ಧ್ಯೇಯಕ್ಕೆ ಬೆದರಿಕೆಯೊಡ್ಡುವ ಮತ್ತು ಹಳಿ ತಪ್ಪಿಸುವ ಉದ್ದೇಶದ ಆಕ್ರಮಣಕಾರಿ ಕೃತ್ಯಗಳು ನಮ್ಮನ್ನು ತಡೆಯುವುದಿಲ್ಲ. ಗಾಝಾದ ಮೇಲಿನ ಮುತ್ತಿಗೆಯನ್ನು ಭೇದಿಸುವ ಮತ್ತು ಅದರ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವ ನಮ್ಮ ಶಾಂತಿಯುತ ಅಭಿಯಾನವು ದೃಢ ನಿಶ್ಚಯ ಮತ್ತು ಸಂಕಲ್ಪದೊಂದಿಗೆ ಮುಂದುವರಿಯುತ್ತದೆʼ ಎಂದು ಹೇಳಿದೆ.