1984ರ ಸಿಖ್ ವಿರೋಧಿ ದಂಗೆ ಪ್ರಕರಣ: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ನ ಮಾಜಿ ಸಂಸದ ಸಜ್ಜನ್ ಕುಮಾರ್ ನಿಧನ

Update: 2026-08-20 14:48 IST

 ಸಜ್ಜನ್ ಕುಮಾರ್ (File Photo: PTI)

ಹೊಸದಿಲ್ಲಿ: 1984ರ ಸಿಖ್ ವಿರೋಧಿ ದಂಗೆ ಸಂದರ್ಭದಲ್ಲಿ ಐವರು ಸಿಖ್ ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ (80) ಗುರುವಾರ ನಿಧನರಾದರು.

ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದನ್ನು ಘೋಷಿಸಿದರು. ಸಾವಿನ ನಿಖರ ಕಾರಣವನ್ನು ಆಸ್ಪತ್ರೆ ಇನ್ನೂ ಸ್ಪಷ್ಟಪಡಿಸಿಲ್ಲ.

ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದ ಸಜ್ಜನ್ ಕುಮಾರ್ ಔಟರ್ ದಿಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2018ರಲ್ಲಿ ದಂಗೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬಳಿಕ ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿದ್ದರು.

1984ರ ಅಕ್ಟೋಬರ್ 31ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಹತ್ಯೆ ಮಾಡಿದ ಬಳಿಕ ದಿಲ್ಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಿಖ್ ವಿರೋಧಿ ಹಿಂಸಾಚಾರ ಭುಗಿಲೆದ್ದಿತ್ತು. ಶಸ್ತ್ರಸಜ್ಜಿತ ಗುಂಪುಗಳು ಸಿಖ್ಖರನ್ನು ಗುರಿಯಾಗಿಸಿಕೊಂಡು ಮನೆ ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿದ್ದವು. ದೇಶದಾದ್ಯಂತ 3,000ಕ್ಕೂ ಹೆಚ್ಚು ಸಿಖ್ಖರು ಹತ್ಯೆಯಾಗಿದ್ದರು.

ಸಜ್ಜನ್ ಕುಮಾರ್ ವಿರುದ್ಧ ಮೂರು ದಶಕಗಳಿಗೂ ಹೆಚ್ಚು ಕಾಲ ಹಲವು ಕ್ರಿಮಿನಲ್ ಪ್ರಕರಣಗಳು ನಡೆದಿದ್ದವು. ಕೆಲವು ಪ್ರಕರಣಗಳಲ್ಲಿ ಅವರು ಖುಲಾಸೆಗೊಂಡಿದ್ದರೆ, ಇತರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದರು.

2013ರಲ್ಲಿ ವಿಚಾರಣಾ ನ್ಯಾಯಾಲಯ ಕುಮಾರ್ ಅವರನ್ನು ಖುಲಾಸೆಗೊಳಿಸಿತ್ತು. ಆದರೆ 2018ರ ಡಿಸೆಂಬರ್ 17ರಂದು ದೆಹಲಿ ಹೈಕೋರ್ಟ್ ಆ ತೀರ್ಪನ್ನು ರದ್ದುಗೊಳಿಸಿತು. ರಾಜ್ ನಗರ ಭಾಗ–I ಮತ್ತು ಪಾಲಂ ಕಾಲೋನಿಯಲ್ಲಿ ಐವರು ಸಿಖ್ ಪುರುಷರ ಹತ್ಯೆ ಹಾಗೂ ಗುರುದ್ವಾರಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕುಮಾರ್ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು.

ಕ್ರಿಮಿನಲ್ ಪಿತೂರಿ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪಗಳಲ್ಲಿ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದ ಹೈಕೋರ್ಟ್, ಅವರ ಉಳಿದ ಜೀವಿತಾವಧಿಯನ್ನು ಜೈಲಿನಲ್ಲೇ ಕಳೆಯುವಂತೆ ನಿರ್ದೇಶಿಸಿತ್ತು. 1984ರ ಸಿಖ್ ವಿರೋಧಿ ಹಿಂಸಾಚಾರವನ್ನು ‘ಮಾನವೀಯತೆಯ ವಿರುದ್ಧದ ಅಪರಾಧಗಳು’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಸಜ್ಜನ್ ಕುಮಾರ್ ಅವರ ದೋಷನಿರ್ಣಯ ಮತ್ತು ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

2026ರ ಜನವರಿಯಲ್ಲಿ ಜನಕ್‌ಪುರಿ ಮತ್ತು ವಿಕಾಸ್‌ಪುರಿ ಪ್ರದೇಶಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಿಲ್ಲಿ ನ್ಯಾಯಾಲಯ ಕುಮಾರ್ ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಇತರ ಪ್ರಕರಣಗಳಲ್ಲಿನ ಜೀವಾವಧಿ ಶಿಕ್ಷೆಯಿಂದಾಗಿ ಅವರಿಗೆ ಬಿಡುಗಡೆಯಾಗಿರಲಿಲ್ಲ.

2025ರ ಫೆಬ್ರವರಿಯಲ್ಲಿ ರೌಸ್ ಅವೆನ್ಯೂ ನ್ಯಾಯಾಲಯವು ಸರಸ್ವತಿ ವಿಹಾರ ಪ್ರಕರಣದಲ್ಲಿ ಕುಮಾರ್‌ಗೆ ಮತ್ತೊಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ತಂದೆ–ಮಗ ಜಸ್ವಂತ್ ಸಿಂಗ್ ಮತ್ತು ತರುಣ್‌ದೀಪ್ ಸಿಂಗ್ ಅವರನ್ನು ಜೀವಂತವಾಗಿ ಸುಟ್ಟುಹಾಕಿದ ಗುಂಪಿನ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು ದೋಷಿ ಎಂದು ಘೋಷಿಸಲಾಗಿತ್ತು.

ಪ್ರಾಸಿಕ್ಯೂಷನ್ ಮರಣದಂಡನೆ ವಿಧಿಸುವಂತೆ ಕೋರಿದ್ದರೂ, ಸಜ್ಜನ್ ಕುಮಾರ್ ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News