ಉತ್ತರ ಪ್ರದೇಶ | ಮರ್ಯಾದೆಗೇಡು ಹತ್ಯೆ; ಗುಂಡು ಹಾರಿಸಿ ಬಾಲಕಿಯ ಹತ್ಯೆಗೈದ ತಂದೆ
ಸಾಂದರ್ಭಿಕ ಚಿತ್ರ | PC ; AI
ಮುಝಪ್ಫರ್ ನಗರ್, ಸೆ. 29: ಹದಿನೇಳು ವರ್ಷದ ಬಾಲಕಿಯನ್ನು ಆಕೆಯ ತಂದೆ ಹಾಗೂ ಅಪ್ರಾಪ್ತ ಸಹೋದರ ಗುಂಡು ಹಾರಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಇದು ಮರ್ಯಾದೆಗೇಡು ಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.
ಕಾಂಧಲ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೆಹ್ಟಾ ಗ್ರಾಮದಲ್ಲಿ ರವಿವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠ ಎನ್.ಪಿ. ಸಿಂಗ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೃತಪಟ್ಟ ಬಾಲಕಿಯನ್ನು ಮುಸ್ಕಾನ್ ಎಂದು ಗುರುತಿಸಲಾಗಿದೆ. ಈಕೆ 12 ನೇ ತರಗತಿಯ ವಿದ್ಯಾರ್ಥಿನಿ. ಈಕೆಯನ್ನು ತಂದೆ ಜುಲ್ಫಂ ಹಾಗೂ 15 ವರ್ಷದ ಸಹೋದರ ಮನೆಯ ಮೇಲಿನ ಮಹಡಿಗೆ ಕರೆದೊಯ್ದು, ಅಲ್ಲಿ ಪಿಸ್ತೂಲ್ ನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.
ಝುಲ್ಫಂ ಹಾಗೂ ಆತನ ಅಪ್ರಾಪ್ತ ಪುತ್ರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದೆ ಹಾಗೂ ಅವರು ಅಪರಾಧಕ್ಕೆ ಬಳಸಿದ ಪಿಸ್ತೂಲ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
‘‘ಕುಟುಂಬದ ಹೆಸರು ಹಾಳು ಮಾಡುತ್ತಿರುವುದಕ್ಕೆ ಮಗಳನ್ನು ಹತ್ಯೆಗೈದಿರುವುದಾಗಿ ಆರೋಪಿ ತಂದೆ ಒಪ್ಪಿಕೊಂಡಿದ್ದಾನೆ’’ ಎಂದು ಸಿಂಗ್ ತಿಳಿಸಿದ್ದಾರೆ.
ಮುಸ್ಕಾನ್ ಆ ಪ್ರದೇಶದ ಹುಡುಗನೊಂದಿಗೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದಳು. ಆದರೆ, ಕುಟುಂಬದವರು ಇದನ್ನು ವಿರೋಧಿಸಿದ್ದರು. ಫೋನ್ ನಲ್ಲಿ ಚಾಟ್ ಮಾಡುತ್ತಿದ್ದ ಆಕೆಯನ್ನು ರವಿವಾರ ಸಂಜೆ ತಂದೆ ಪತ್ತೆ ಹಚ್ಚಿದರು. ಇದು ಈ ದುರ್ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.