×
Ad

ಷೇರು ಹೂಡಿಕೆಗೆ ಗ್ರಾಹಕರ 4.6 ಕೋಟಿ ರೂ. ಅಕ್ರಮ ವರ್ಗಾವಣೆ; ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕಿ ಬಂಧನ

Update: 2025-06-08 07:45 IST

PC:x.com/AlokSinghSays

ಕೋಟಾ; ಐಸಿಐಸಿಐ ಬ್ಯಾಂಕಿನ 41 ಗ್ರಾಹಕರಿಗೆ ಸೇರಿದ 110 ಖಾತೆಗಳಲ್ಲಿದ್ದ 4.6 ಕೋಟಿ ರೂಪಾಯಿಯನ್ನು 2020-23ರ ಅವಧಿಯಲ್ಲಿ ಅನಧಿಕೃತ ಷೇರು ಹೂಡಿಕೆಗೆ ವರ್ಗಾಯಿಸಿದ ಆರೋಪದಲ್ಲಿ ಬ್ಯಾಂಕಿನ ಸಂಪರ್ಕ ವ್ಯವಸ್ಥಾಪಕಿ ಸಾಕ್ಷಿ ಗುಪ್ತಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಹಲವು ಖಾತೆಗಳಲ್ಲಿ ಖಾತೆದಾರರ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಬದಲಿಸಿ ತನ್ನ ಸಂಬಂಧಿಕರ ಮೊಬೈಲ್ ಸಂಖ್ಯೆಗಳನ್ನು ದಾಖಲಿಸಿ ಕಾನೂನುಬಾಹಿರವಾಗಿ ನಗದನ್ನು ವರ್ಗಾವಣೆ ಮಾಡಿರುವುದನ್ನು ಸಾಕ್ಷಿ ಗುಪ್ತಾ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಮೂಲಕ ಹಣ ವರ್ಗಾವಣೆಯ ಸಂದೇಶಗಳು ಮತ್ತು ಒಟಿಪಿಗಳು ನೈಜ ಗ್ರಾಹಕರ ಬದಲಾಗಿ ಪರಿಷ್ಕøತ ಸಂಖ್ಯೆಯ ಮೊಬೈಲ್ಗಳಿಗೆ ಬರುವ ವ್ಯವಸ್ಥೆ ಮಾಡಿಕೊಂಡಿದ್ದುದು ತಿಳಿದುಬಂದಿದೆ.

ಕೋಟಾದ ಡಿಸಿಎಂ ಶಾಖೆಯಲ್ಲಿದ್ದ ಸಾಕ್ಷಿಯನ್ನು ಬಂಧನದ ಬಳಿಕ ಬ್ಯಾಂಕ್ ಸೇವೆಯಿಂದ ಅಮಾನತು ಮಾಡಿದೆ. ಆದರೆ ಇತರರು ಈ ದಂಧೆಯಲ್ಲಿ ಷಾಮೀಲಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಬ್ಯಾಂಕಿನಿಂದ ದಾಖಲೆಗಳನ್ನು ಕೋರಿದ್ದಾರೆ.

ಸಾಕ್ಷಿ ಗುಪ್ತಾ ಕಾನೂನುಬಾಹಿರವಾಗಿ ಡೆಬಿಟ್ ಕಾರ್ಡ್ಗಳನ್ನು, ಪಿಐಎನ್ ಹಾಗೂ ಓಟಿಪಿಗಳನ್ನು ದುರ್ಬಳಕೆ ಮಾಡಿಕೊಂಡು ಅನಧಿಕೃತ ವ್ಯವಹಾರ ನಡೆಸಿದ್ದಳು. ಜತೆಗೆ ಗ್ರಾಹಕರ ಒಪ್ಪಿಗೆ ಇಲ್ಲದೇ 40 ಖಾತೆಗಳಿಗೆ ಓವರ್ಡ್ರಾಫ್ಟ್ ಸೌಲಭ್ಯವನ್ನೂ ಪಡದುಕೊಂಡಿದ್ದಳು. 31 ಗ್ರಾಹಕರ ನಿಶ್ಚಿತ ಠೇವಣಿ ಖಾತೆಗಳನ್ನು ಮುಚ್ಚಿ 1.34 ಕೋಟಿ ರೂಪಾಯಿಗಳನ್ನು ಅನಧಿಕೃತ ಖಾತೆಗಳಿಗೆ ವರ್ಗಾಯಿಸಿದ್ದು ಕೂಡಾ ತನಿಖೆಯಿಂದ ದೃಢಪಟ್ಟಿದೆ. ಜತೆಗೆ 3.4 ಲಕ್ಷ ರೂಪಾಯಿ ವೈಯಕ್ತಿಕ ಸಾಲಗಳನ್ನು ಕೂಡಾ ಅಕ್ರಮವಾಗಿ ವಿತರಿಸಿದ್ದಾಗಿ ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News