×
Ad

10 ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಭಾರತ-ಅಮೆರಿಕ ಅಂಕಿತ

Update: 2025-10-31 21:39 IST

ರಾಜನಾಥ್ ಸಿಂಗ್ | Photo Credit : PTI 

ಕೌಲಾಲಂಪುರ,ಅ.31: ಭಾರತ ಹಾಗೂ ಅಮೆರಿಕ ನಡುವೆ ಸುಂಕ ಬಿಕ್ಕಟ್ಟು ಮುಂದು ವರಿದಿರುವ ನಡುವೆಯೂ, ಉಭಯದೇಶಗಳು ಶುಕ್ರವಾರ 10 ವರ್ಷಗಳ ರಕ್ಷಣಾ ಕಾರ್ಯಚೌಕಟ್ಟು ಒಪ್ಪಂದಕ್ಕೆ ಅಂಕಿತ ಹಾಕಿವೆ.

ಈ ಒಪ್ಪಂದವು ಎರಡೂ ದೇಶಗಳ ನಡುವೆ ವ್ಯೆಹಾತ್ಮಕ ಬಾಂಧವ್ಯ ವೃದ್ಧಿಸುತ್ತಿರುವುದರ ಸಂಕೇತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

ಮಲೇಶ್ಯದ ರಾಜಧಾನಿ ಕೌಲಾಲಂಪುರದಲ್ಲಿ ನಡೆದ ಮಾತುಕತೆಯ ಸಂದರ್ಭ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಅಮೆರಿಕದ ಯುದ್ಧ ಇಲಾಖೆಯ ಕಾರ್ಯದರ್ಶಿ ಪೀಟರ್ ಹೆಗ್‌ಸೆಥ್ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಭಾರತೀಯ ಸರಕುಗಳ ಮೇಲೆ ಅಮೆರಿಕವು ಶೇ.50ರಷ್ಟು ಸುಂಕವನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಹದಗೆಟ್ಟಿರುವ ಬಾಂಧವ್ಯವನ್ನು ಮರಳಿ ಹಳಿಗೆ ತರಲು ಪ್ರಯತ್ನಗಳು ನಡೆಯುತ್ತಿರುವ ಮಧ್ಯೆ ಈ ಒಪ್ಪಂದ ಏರ್ಪಟ್ಟಿದೆ.

ರಾಜ್‌ನಾಥ್ ಸಿಂಗ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹೇಳಿಕೆಯೊಂದನ್ನು ನೀಡಿ, ‘‘ ಭಾರತ-ಅಮೆರಿಕ ಪ್ರಮುಖ ರಕ್ಷಣಾ ಪಾಲುದಾರಿಕೆ ಕುರಿತ 10 ವರ್ಷಗಳ ಕಾರ್ಯಚೌಕಟ್ಟು ಒಡಂಬಡಿಕೆಗೆ ನಾವು ಸಹಿಹಾಕಿದ್ದೇವೆ. ಈ ಒಪ್ಪಂದವು ಪ್ರಾದೇಶಿಕ ಸ್ಥಿರತೆ ಹಾಗೂ ಪ್ರತಿರೋಧತೆಗೆ ತಳಹದಿಯಾಗಲಿದೆ. ಈ ಒಪ್ಪಂದದೊಂದಿಗೆ ಉಭಯದೇಶಗಳು ಸಮನ್ವಯತೆ, ಮಾಹಿತಿ ಹಂಚಿಕೆ ಹಾಗೂ ತಾಂತ್ರಿಕ ಸಹಕಾರವನ್ನು ಹೆಚ್ಚಿಸುತ್ತಿದ್ದೇವೆ. ಈ ಒಪ್ಪಂದವು ಸಮಗ್ರ ಭಾರತ-ಅಮೆರಿಕ ರಕ್ಷಣಾ ಬಾಂಧವ್ಯದ ನೀತಿಗೆ ಮಾರ್ಗದರ್ಶಿಯಾಗಲಿದೆ ’’ ಎಂದು ಹೇಳಿದ್ದಾರೆ.

ದ್ವಿಪಕ್ಷೀಯ ಬಾಂಧವ್ಯಗಳಿಗೆ ರಕ್ಷಣಾ ಕ್ಷೇತ್ರವು ಪ್ರಮುಖ ಆಧಾರಸ್ತಂಭವಾಗಿದೆ. ನಮ್ಮಿಬ್ಬರ ಪಾಲುದಾರಿಕೆಯು ಸ್ವತಂತ್ರ, ಮುಕ್ತ ಹಾಗೂ ನಿಯಮಾಧಾರಿತ ಇಂಡೊ-ಪೆಸಿಫಿಕ್ ಪ್ರಾಂತವನ್ನು ಖಾತರಿಪಡಿಸುವಲ್ಲಿ ನಿರ್ಣಾಯಕವಾಗಲಿದೆ. ಈ ರಕ್ಷಣಾ ಒಪ್ಪಂದವು ಈಗಾಗಲೇ ಬಲಿಷ್ಠಗೊಂಡಿರುವ ರಕ್ಷಣಾ ಪಾಲುದಾರಿಕೆಯಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ’’ ಎಂದು ಸಿಂಗ್ ಹೇಳಿದರು.

ಅಸಿಯಾನ್ ಸದಸ್ಯ ರಾಷ್ಟ್ರಗಳು ಹಾಗೂ ಅದರ ಕೆಲವು ಹಿತೈಷಿ ರಾಷ್ಟ್ರಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೆಗ್‌ಸೆಥ್ ಹಾಗೂ ರಾಜನಾಥ್ ಸಿಂಗ್ ಕೌಲಾಲಂಪುರಕ್ಕೆ ಆಗಮಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News