ಭಾರತ–ಅಮೆರಿಕ ವ್ಯಾಪಾರ ಬಿಕ್ಕಟ್ಟು ಶಮನ ಸನ್ನಿಹಿತ: ಗೋಯಲ್
PC: screengrab/x.com/ANI
ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಕಗ್ಗಂಟಾದ ಸಮಸ್ಯೆಗಳು ಇತ್ಯರ್ಥಗೊಂಡಿದ್ದು, ಒಪ್ಪಂದ ಅಂತಿಮ ಹಂತ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಭಾರತ ಮತ್ತು ಯುರೋಪಿಯನ್ ಒಕ್ಕೂಟ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಯಶಸ್ವಿಯಾಗಿ ಅಂತಿಮಗೊಂಡ ಬಳಿಕ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಭಾರತದ ವ್ಯಾಪಾರ ಕಾರ್ಯತಂತ್ರದಲ್ಲಿ ನಿರ್ದಿಷ್ಟ ಬದಲಾವಣೆ ಆಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಹಿಂದಿನ ಸಂರಕ್ಷಣಾತ್ಮಕ ಹಿಂಜರಿಕೆಯಿಂದ ಹೊರಬಂದು ಭಾರತ ಭವಿಷ್ಯದಲ್ಲಿ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಭಿವೃದ್ಧಿ ಹೊಂದಿದ ವಿಶ್ವದೊಂದಿಗೆ ವ್ಯಾಪಾರ ಒಪ್ಪಂದಗಳು ಐಚ್ಛಿಕವಲ್ಲ; ಪ್ರತ್ಯೇಕವಾಗಿ ಜೀವಿಸಲು ಸಾಧ್ಯವಿಲ್ಲ ಎಂದು ಗೋಯಲ್ ಅಭಿಪ್ರಾಯಪಟ್ಟರು.
ಭಾರತ 2022ರಲ್ಲಿ ಸಂಧಾನ ಮಾತುಕತೆಗಳನ್ನು ಆರಂಭಿಸಿದಾಗಿನಿಂದಲೇ ಈ ಒಪ್ಪಂದವನ್ನು ಪ್ರಾಮಾಣಿಕವಾಗಿ ಹಾಗೂ ಗಂಭೀರವಾಗಿ ಪರಿಗಣಿಸಲಾಗಿದೆ. ಭಾರತ ಜತೆ ವ್ಯಾಪಾರ ಮಾಡುವ ಮನಸ್ಥಿತಿಯನ್ನು ನಾವು ಬೆಳೆಸಿಕೊಂಡಿದ್ದೇವೆ ಎಂದು ಅವರು ಹೇಳಿದರು.
ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದದ ಕುರಿತು ಎಲ್ಲ ಸೂಕ್ಷ್ಮ ಅಂಶಗಳನ್ನು ಬದಿಗಿಟ್ಟಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 2026ರೊಳಗೆ ವ್ಯಾಪಾರ ಒಪ್ಪಂದ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೆಲ ಕಾನೂನಾತ್ಮಕ ಅಡೆತಡೆಗಳನ್ನು ಬಗೆಹರಿಸಲು ಸುಮಾರು ನಾಲ್ಕು ತಿಂಗಳು ಸಮಯ ಬೇಕಾಗಬಹುದು. ಅದರ ಬಳಿಕ ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.