Assam ಸಿಎಂ ಹಿಮಂತ ಶರ್ಮರ ‘ಮಿಯಾ’ ಹೇಳಿಕೆ | ನಾಚಿಕೆಗೇಡು, ಅಪ್ರಾಮಾಣಿಕ : ಗೌರವ್ ಗೊಗೊಯಿ
Assam ಸಿಎಂ ಹಿಮಂತ ಶರ್ಮ, ಗೌರವ್ ಗೊಗೊಯಿ | Photo Credit : ANI
ಗುವಾಹಟಿ: ಬಾಂಗ್ಲಾದೇಶದಿಂದ ಅಕ್ರಮವಾಗಿ ಗಡಿ ನುಸುಳಿ ಬಂದವರನ್ನು ಉಲ್ಲೇಖಿಸಿ ‘ಮಿಯಾ’ ಎಂಬ ಪದ ಬಳಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ಹೇಳಿಕೆಯನ್ನು ನಾಚಿಕೆಗೇಡಾದದ್ದು ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ಶುಕ್ರವಾರ ಎಕ್ಸ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಪ್ರಿಲ್‌ನಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ ಈ ಹೇಳಿಕೆಯನ್ನು ಹಿಮಂತ ಬಿಸ್ವ ಶರ್ಮ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಹೆಸರನ್ನು ಹಿಮಂತ ಬಿಸ್ವ ಶರ್ಮ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಸಂಸದರೂ ಆದ ಗೌರವ್ ಗೊಗೊಯಿ, ಅವರು ಅಪ್ರಾಮಾಣಿಕರಾಗಿದ್ದಾರೆ ಎಂದಿದ್ದಾರೆ.
“ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದ ಮಾತುಗಳನ್ನೇ ನಾನು ಹೇಳಿದ್ದೇನೆ ಎಂದು ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಅದು ನಿರ್ಲಜ್ಜ ಸುಳ್ಳು” ಎಂದು ಅವರು ಟೀಕಿಸಿದ್ದಾರೆ.
“ಮಾನ್ಯ ನ್ಯಾಯಾಲಯವು ಆ ಶಬ್ದವನ್ನು ಬಳಸಿಲ್ಲ ಅಥವಾ ಅಂತಹ ಯಾವುದೇ ಕಾರ್ಯಕಾರಿ ವರದಿಯನ್ನು ಅನುಮೋದಿಸಿಲ್ಲ. ಈ ನ್ಯಾಯಾಂಗ ತೀರ್ಪನ್ನು ಬಳಸಿಕೊಳ್ಳುವುದು ಉದ್ದೇಶಪೂರ್ವಕ ನ್ಯಾಯಾಂಗ ನಿಂದನೆಯಾಗಿದೆ” ಎಂದು ಗೌರವ್ ಗೊಗೊಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮುಖ್ಯಮಂತ್ರಿಯೊಬ್ಬರು ನ್ಯಾಯಾಲಯದ ಪದಗಳು ಎಂದು ತಪ್ಪಾಗಿ ಹೇಳಿಕೆ ನೀಡುವುದು ನ್ಯಾಯಾಂಗ ನಿಂದನೆ ಮಾತ್ರವಲ್ಲ; ಅದು ಸಾಂವಿಧಾನಿಕ ಸಂಸ್ಥೆಗಳು ಹಾಗೂ ಸಾಂಸ್ಥಿಕ ಸಮಗ್ರತೆ ಮೇಲಿನ ದಾಳಿಯೂ ಹೌದು” ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಈ ವಾರದ ಆರಂಭದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಗೌರವ್ ಗೊಗೊಯಿ ಈ ತಿರುಗೇಟು ನೀಡಿದ್ದಾರೆ.