ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಇಂದು ಪ್ರಮಾಣ ವಚನ ಸ್ವೀಕಾರ: ವರದಿ
ಮುಂಬೈ : ಅಜಿತ್ ಪವಾರ್ ಅವರ ಪತ್ನಿಸುನೇತ್ರಾ ಪವಾರ್ ಅವರು ಇಂದು (ಶನಿವಾರ) ಸಂಜೆ 5 ಗಂಟೆಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎನ್‌ಸಿಪಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಫೆಬ್ರವರಿ 7ರಂದು ನಡೆಯಲಿರುವ ಪುಣೆ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಮುಂದಿನ ರಾಜಕೀಯ ದಿಕ್ಕು ನಿರ್ಧರಿಸುವ ಉದ್ದೇಶದಿಂದ ಹಿರಿಯ ನಾಯಕರು ಸುನೇತ್ರಾ ಪವಾರ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಈ ಪ್ರಸ್ತಾವನೆಯ ಬಳಿಕ ಪವಾರ್ ಕುಟುಂಬದೊಳಗೆ ಚರ್ಚೆಗಳು ನಡೆದಿದ್ದು, ಬಳಿಕ ಸುನೇತ್ರಾ ಪವಾರ್ ಉಪ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಲು ಸಮ್ಮತಿಸಿದ್ದಾರೆ. ಅಜಿತ್ ಪವಾರ್ ವಹಿಸಿಕೊಂಡಿದ್ದ ಅಬಕಾರಿ ಹಾಗೂ ಕ್ರೀಡಾ ಖಾತೆಗಳನ್ನು ಸುನೇತ್ರಾ ಪವಾರ್ ಅವರು ಮುಂದುವರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಕುರಿತು ಎನ್‌ಸಿಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ನಾಯಕ ಛಗನ್ ಭುಜಬಲ್, ಸುನೇತ್ರಾ ಪವಾರ್ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ಬಜೆಟ್ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ಹಣಕಾಸು ಖಾತೆಯನ್ನು ತಾತ್ಕಾಲಿಕವಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಬಳಿಯೇ ಉಳಿಸಲಾಗುತ್ತದೆ. ಬಜೆಟ್ ಅಧಿವೇಶನದ ನಂತರ ಈ ಖಾತೆಯನ್ನು ಎನ್‌ಸಿಪಿಗೆ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.