×
Ad

ಅಮೆರಿಕದಲ್ಲಿ ವಂಚನೆ ಪ್ರಕರಣ | ಡೊನಾಲ್ಡ್ ಟ್ರಂಪ್ ಪರ ವಾದಿಸುವ ವಾಲ್ ಸ್ಟ್ರೀಟ್ ವಕೀಲರನ್ನು ನೇಮಿಸಿಕೊಂಡ ಗೌತಮ್ ಅದಾನಿ

Update: 2026-01-30 22:58 IST

ಗೌತಮ್ ಅದಾನಿ|PC : PTI

ಮುಂಬೈ: ಅಮೆರಿಕ ಪ್ರಾಧಿಕಾರಗಳು ಸ್ಥಗಿತಗೊಂಡಿದ್ದ ತಮ್ಮ ವಿರುದ್ಧ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ಹೊರಿಸಿದ್ದ ವಂಚನೆ ಪ್ರಕರಣವನ್ನು ಮುಂದುವರಿಸಲು ಪಟ್ಟು ಹಿಡಿದಿರುವುದರಿಂದ, ಗೌತಮ್ ಅದಾನಿ ವಾಲ್ ಸ್ಟ್ರೀಟ್‌ನ ಪ್ರಖ್ಯಾತ ವಕೀಲರನ್ನು ತಮ್ಮ ಪರವಾಗಿ ಅಧಿಕೃತವಾಗಿ ನೇಮಿಸಿಕೊಂಡಿದ್ದಾರೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ಪ್ರಕಾರ, ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ, ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ದಾವೆಯಲ್ಲಿ ತಮ್ಮ ಪರ ವಾದಿಸಲು ಇತ್ತೀಚೆಗೆ ರಾಬರ್ಟ್ ಗಿಯುಫ್ರಾ ಜೂನಿಯರ್ ಅವರನ್ನು ನೇಮಿಸಿಕೊಂಡಿದ್ದಾರೆ. ಅತ್ಯಂತ ಪ್ರತಿಷ್ಠಿತ ಹಣಕಾಸು ಪ್ರಕರಣಗಳನ್ನು ಪ್ರತಿನಿಧಿಸುವ ರಾಬರ್ಟ್ ಗಿಯುಫ್ರಾ ಜೂನಿಯರ್, ಸುಲ್ಲಿವಾನ್ ಆ್ಯಂಡ್ ಕ್ರಾಮ್‌ವೆಲ್ ಕಾನೂನು ಸಂಸ್ಥೆಯ ಸಹ ಅಧ್ಯಕ್ಷರಾಗಿದ್ದು, ಡೊನಾಲ್ಡ್ ಟ್ರಂಪ್ ಅವರನ್ನು ಕ್ರಿಮಿನಲ್ ಅಪರಾಧದಿಂದ ಮುಕ್ತಗೊಳಿಸುವ ಪ್ರಕರಣದಲ್ಲೂ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ.

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಕುರಿತು ಸುಳ್ಳು ಹಾಗೂ ದಾರಿ ತಪ್ಪಿಸುವ ಭರವಸೆಗಳನ್ನು ನೀಡುವ ಮೂಲಕ ಅಮೆರಿಕ ಸೆಕ್ಯುರಿಟೀಸ್ ಕಾನೂನುಗಳನ್ನು ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಉಲ್ಲಂಘಿಸಿದ್ದಾರೆ ಎಂದು 2014ರಲ್ಲಿ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ದಾವೆ ಹೂಡಿತ್ತು. ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್‌ನ ಸಿವಿಲ್ ದಾವೆಯೊಂದಿಗೆ, ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್ ಪ್ರಾಸಿಕ್ಯೂಟರ್‌ಗಳು ಭಾರತದಲ್ಲಿ ಸೌರ ವಿದ್ಯುತ್ ಯೋಜನೆಯ ಗುತ್ತಿಗೆ ಪಡೆಯಲು 250 ದಶಲಕ್ಷ ಡಾಲರ್ ಲಂಚ ನೀಡುವ ಯೋಜನೆಗೆ ನೆರವು ನೀಡಿದ ಆರೋಪದಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ಮತ್ತಿತರರ ವಿರುದ್ಧ ದೋಷಾರೋಪ ಹೊರಿಸಿದ್ದರು.

ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಇಬ್ಬರೂ ಭಾರತದಲ್ಲೇ ಉಳಿದುಕೊಂಡಿರುವುದರಿಂದ ಕ್ರಿಮಿನಲ್ ಹಾಗೂ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ಪ್ರಕರಣಗಳೆರಡೂ ಸ್ಥಗಿತಗೊಂಡಿದ್ದವು. ಆದರೆ, ದಾವೆಯ ಕುರಿತು ಅದಾನಿಗಳಿಗೆ ಅಧಿಕೃತ ಅಧಿಸೂಚನೆ ಹೊರಡಿಸಲು ಪರ್ಯಾಯ ಕ್ರಮಗಳನ್ನು ಬಳಸುವಂತೆ ಕಳೆದ ವಾರ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ಅಮೆರಿಕ ನ್ಯಾಯಾಧೀಶರೊಬ್ಬರಿಗೆ ಸೂಚಿಸಿತ್ತು. ಇಮೇಲ್ ಬಳಸಿಕೊಳ್ಳಲು ಹಾಗೂ ಅದಾನಿಯನ್ನು ಪ್ರತಿನಿಧಿಸುತ್ತಿರುವ ವಕೀಲರಿಗೆ ನೋಟಿಸ್ ಜಾರಿಗೊಳಿಸಲು ಅನುಮತಿ ನೀಡುವಂತೆ ಅದು ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್‌ನ ಈ ನಡೆಯ ಹಿನ್ನೆಲೆಯಲ್ಲಿ ಜನವರಿ 23ರಂದು ಅದಾನಿ ಷೇರುಗಳ ಒಟ್ಟು ಮೌಲ್ಯದಲ್ಲಿ 13 ಶತಕೋಟಿ ಡಾಲರ್‌ನಷ್ಟು ಮೌಲ್ಯ ಕೊಚ್ಚಿಕೊಂಡು ಹೋಗಿತ್ತು. ಹೀಗಿದ್ದರೂ, ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರಗತಿಯಾಗಿಲ್ಲ.

ಅದಾನಿಗಳಿಗೆ ದಾವೆಯ ಅಧಿಕೃತ ನೋಟಿಸ್ ಜಾರಿಗೊಳಿಸುವ ಪ್ರಯತ್ನಗಳಿಗೆ ಭಾರತದಲ್ಲಿ ಹಿನ್ನಡೆಯಾಗಿದೆ ಎಂದು ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ಹೇಳಿದೆ. ಸಾಮಾನ್ಯವಾಗಿ, ದೂರನ್ನು ಪ್ರತಿವಾದಿಗಳಿಗೆ ಸೂಕ್ತವಾಗಿ ಅಧಿಸೂಚನೆ ಮಾಡುವವರೆಗೆ ದಾವೆಯನ್ನು ಮುಂದುವರಿಸಲು ಸಾಧ್ಯವಿಲ್ಲ.

“ಗಿಯುಫ್ರಾ ನಮ್ಮನ್ನು ಸಂಪರ್ಕಿಸಿದ್ದು, ನಾನು ಗೌತಮ್ ಅದಾನಿಯನ್ನು ಪ್ರತಿನಿಧಿಸುತ್ತೇನೆ ಹಾಗೂ ದಾವೆಯನ್ನು ಅವರ ಪರವಾಗಿ ಸ್ವೀಕರಿಸಲು ಬಯಸುತ್ತೇನೆ ಎಂದು ನಮಗೆ ತಿಳಿಸಿದ್ದಾರೆ” ಎಂದು ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ನ್ಯಾಯಾಲಯಕ್ಕೆ ತಿಳಿಸಿದೆ. ಬಳಿಕ, ಭಾರತದಲ್ಲಿರುವ ಇಬ್ಬರೂ ಅದಾನಿಗಳ ವಿರುದ್ಧ ವಿಚಾರಣೆಯನ್ನು ಹೇಗೆ ಮುಂದುವರಿಸಬೇಕು ಎಂಬ ಕುರಿತು ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್‌ನೊಂದಿಗೆ ಸಂಧಾನ ನಡೆಸಲು ಗಿಯುಫ್ರಾ ನ್ಯಾಯಾಲಯದ ಬಳಿ ಮತ್ತಷ್ಟು ಕಾಲಾವಕಾಶ ಕೋರಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಮೆರಿಕ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ನಿಕೊಲಾಸ್ ಗರುಫಿಯಾಸ್ ಅವರು, ಶುಕ್ರವಾರ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ಮನವಿಯ ಕುರಿತು ತೀರ್ಪು ನೀಡಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಲು ಗಿಯುಫ್ರಾ ಹಾಗೂ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ನಿರಾಕರಿಸಿವೆ.

ಸೌಜನ್ಯ:The Print

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News