ಹರಿದ್ವಾರ | ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ ನಡೆಸಿದ ಕನ್ವಾರಿಯಾ ಯಾತ್ರಿಕರು : ಎಫ್ಐಆರ್ ದಾಖಲು
Photo | freepressjournal
ಹರಿದ್ವಾರ : ಉತ್ತರಖಂಡದ ಹರಿದ್ವಾರದ ಮಂಗ್ಲೌರ್ ಪ್ರದೇಶದಲ್ಲಿ ಕನ್ವಾರಿಯಾ ಯಾತ್ರಿಕರ ಗುಂಪೊಂದು ಅಪಘಾತದ ಬಳಿಕ ಮುಸ್ಲಿಂ ಕುಟುಂಬವೊಂದರ ಮೇಲೆ ಹಲ್ಲೆ ನಡೆಸಿ ಅವರ ವಾಹನಕ್ಕೆ ಹಾನಿ ಮಾಡಿರುವ ಬಗ್ಗೆ ವರದಿಯಾಗಿದೆ.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮುಸ್ಲಿಂ ಕುಟುಂಬವಿದ್ದ ಕಾರು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆಲ ಕನ್ವಾರಿಯಾ ಯಾತ್ರಿಕರಿಗೆ ಆಕಸ್ಮಿಕವಾಗಿ ತಾಗಿದೆ. ಇದೇ ಕಾರಣಕ್ಕೆ ಕಾರನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ಕನ್ವಾರಿಯಾ ಯಾತ್ರಿಗಳ ಗುಂಪು ಕಾರಿನಲ್ಲಿದ್ದವರನ್ನು ಹೊರಗಿಳಿಯುವಂತೆ ಬಲವಂತಗೊಳಿಸುವುದು ಕಂಡು ಬಂದಿದೆ. ನಂತರ ಗುಂಪು ಬಲವಂತವಾಗಿ ಕಾರಿನ ಬಾಗಿಲು ಮುರಿದು ಕಾರಿನ ಚಾಲಕ ಸೇರಿದಂತೆ ಪುರುಷ ಪ್ರಯಾಣಿಕರನ್ನು ಬೆನ್ನಟ್ಟಿ ಅವರ ಮೇಲೆ ಹಲ್ಲೆ ನಡೆಸಿರುವುದು ಕಂಡು ಬಂದಿದೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಹರಿದ್ವಾರ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ʼಮಂಗ್ಲೋರ್ ಪ್ರದೇಶದಲ್ಲಿ ಕನ್ವಾರಿಯಾಗಳಿಗೆ ಕಾರು ತಾಗಿದಾಗ ಅವರು ಕೋಪಗೊಂಡು ವಾಹನಕ್ಕೆ ಹಾನಿ ಮಾಡಲು ಪ್ರಯತ್ನಿಸಿದರು. ಕಾರಿಗೆ ಹಾನಿ ಮತ್ತು ಪ್ರಯಾಣಿಕರ ಮೇಲೆ ಹಲ್ಲೆಗೆ ಸಂಬಂಧಿಸಿ ಮಂಗ್ಲೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆʼ ಎಂದು ಪೊಲೀಸರು ತಿಳಿಸಿದ್ದಾರೆ.