ಹಲ್ಲುಗಳು ಚಾಚಿಕೊಂಡಿರುವ ಕಾರಣಕ್ಕೆ ʼಸಮವಸ್ತ್ರಾಧಾರಿತ ಹುದ್ದೆʼಗಳಿಗೆ ಅಭ್ಯರ್ಥಿಗಳ ಅನರ್ಹತೆ ರದ್ದು: ಕೇರಳ ಸರಕಾರ ಮಹತ್ವದ ನಿರ್ಧಾರ
ತಿರುವನಂತಪುರಂ: ಪೊಲೀಸ್, ಅಬಕಾರಿ, ಅರಣ್ಯ, ಸಾರಿಗೆ ಇಲಾಖೆಯಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿ ವೇಳೆ ಹಲ್ಲು ಚಾಚಿಕೊಂಡಿರುವ ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ನಿಯಮವನ್ನು ಕೇರಳ ಸರಕಾರ ರದ್ದುಗೊಳಿಸಲು ನಿರ್ಧರಿಸಿದೆ.
ಬುಧವಾರ ನಡೆದ ಕೇರಳ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲ್ಲುಗಳು ವಿರೂಪಗೊಂಡಿರುವ ಕಾರಣಕ್ಕೆ ಉದ್ಯೋಗ ನಿರಾಕರಿಸಲ್ಪಟ್ಟ ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ನಿಯಮವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ʼಪೊಲೀಸ್, ಅಬಕಾರಿ, ಅರಣ್ಯ ಮತ್ತು ಸಾರಿಗೆ ಇಲಾಖೆಯಲ್ಲಿ ʼಸಮವಸ್ತ್ರ ಧರಿಸಿದʼ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಿವಾಗ ಚಾಚಿಕೊಂಡಿರುವ ಹಲ್ಲುಗಳ ಕಾರಣಕ್ಕೆ ಅನರ್ಹಗೊಳಿಸುವ ನಿಯಮವನ್ನು ರದ್ದುಗೊಳಿಸಲಾಗುವುದುʼ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಪಾಲಕ್ಕಾಡ್‌ನ ಅಟ್ಟಪಾಡಿಯ ಬುಡಕಟ್ಟು ಯುವಕ ಮುತ್ತು ಅವರನ್ನು ಹಲ್ಲುಗಳು ಚಾಚಿಕೊಂಡಿರುವ ಕಾರಣಕ್ಕೆ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಅರಣ್ಯ ಅಧಿಕಾರಿ ಹುದ್ದೆಯ ದೈಹಿಕ ಪರೀಕ್ಷೆಯಲ್ಲಿ ಅನರ್ಹಗೊಳಿಸಲಾಗಿತ್ತು. ಬಾಲ್ಯದಲ್ಲಿ ನಡೆದ ಅಪಘಾತದಲ್ಲಿ ಮುತ್ತು ಅವರ ಹಲ್ಲುಗಳು ವಿರೂಪಗೊಂಡಿತ್ತು.
ಕೇರಳ ಸಾರ್ವಜನಿಕ ಸೇವಾ ಆಯೋಗ ಹಲ್ಲುಗಳು ಚಾಚಿಕೊಂಡಿರುವ ಕಾರಣಕ್ಕೆ ಮುತ್ತು ಅವರನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿಸಿತ್ತು.