ಗೋವಾ ವಿಧಾನ ಸಭಾ ಕ್ಷೇತ್ರದಲ್ಲಿ ಎಸ್ಟಿಗೆ ಮೀಸಲಾತಿ; ಲೋಕಸಭೆಯಲ್ಲಿ ಮಸೂದೆ ಅಂಗೀಕಾರ
ಲೋಕಸಭೆ | PTI
ಹೊಸದಿಲ್ಲಿ, ಜು. 5: ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಪ್ರತಿಭಟನೆಗಳು ನಿರಂತರ ಮುಂದುವರಿದಿದ್ದರೂ ಗೋವಾ ವಿಧಾನ ಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡುವ ಮಸೂದೆಯನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿತು.
ಸದನದ ಗದ್ದಲದ ನಡುವೆ ಕಾನೂನು ಸಚಿವ ಅರ್ಜುನ್ ರಾಮ್ ಮೇಘಾವಲ್ ಅವರು ಗೋವಾ ರಾಜ್ಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಪಾತಿನಿಧ್ಯದ ಮರು ಹೊಂದಾಣಿಕೆ ಮಸೂದೆ-2025 ಅನ್ನು ಮಂಡಿಸಿದರು. ಅನಂತರ ಅದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಆಕಸ್ಮಿಕವಾಗಿ 2014ರಲ್ಲಿ ಇದೇ ದಿನ ಕೆಳಮನೆಯಲ್ಲಿ ಈ ಮಸೂದೆ ಮಂಡಿಸಲಾಗಿತ್ತು. ಅಂದಿನಿಂದ ಅದು ಬಾಕಿ ಇದೆ.
ಪ್ರಸಕ್ತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಅಂಗೀಕರಿಸಿದ ಮೊದಲ ಮಸೂದೆ ಇದಾಗಿದೆ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳ ಪ್ರತಿಭಟನೆ ಕಲಾಪಗಳಿಗೆ ಅಡ್ಡಿ ಉಂಟು ಮಾಡಿದೆ.
ಪ್ರತಿಪಕ್ಷದ ಸಂಸದರ ಪ್ರತಿಭಟನೆ ನಿರಂತರ ಮುಂದುವರಿದುದರಿಂದ ಮಸೂದೆ ಅಂಗೀಕರಿಸಿದ ಬಳಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಧ್ಯಾ ರಾಯ್ ಅವರು ಕಲಾಪವನ್ನು ಒಂದು ದಿನಕ್ಕೆ ಮುಂದೂಡಿದರು.
2001 ಜನಗಣತಿ ಸಂಖ್ಯೆಗೆ ಹೋಲಿಸಿದರೆ, 2011ರ ಜನಗಣತಿ ಪ್ರಕಾರ ಗೋವಾದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಮಸೂದೆ ಹೇಳಿದೆ.