×
Ad

ರಶ್ಯದಿಂದ ರಿಯಾಯಿತಿ ದರದಲ್ಲಿ ಅಗಾಧ ಪ್ರಮಾಣದಲ್ಲಿ ಕಚ್ಚಾತೈಲ ಆಮದು

Update: 2025-08-11 20:58 IST

 ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಆ. 9: 2025ರಲ್ಲೂ ರಶ್ಯವು ಭಾರತದ ಅತಿ ದೊಡ್ಡ ಕಚ್ಚಾತೈಲ ಪೂರೈಕೆದಾರನಾಗಿ ಮುಂದುವರಿದಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರ ಎನರ್ಜಿ ಮುಂತಾದ ಖಾಸಗಿ ತೈಲ ಶುದ್ಧೀಕರಣ ಘಟಕಗಳು ಬೃಹತ್ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು ಭರ್ಜರಿ ಲಾಭ ಮಾಡಿಕೊಂಡಿವೆ.

ಈ ತೈಲ ಶುದ್ಧೀಕರಣ ಘಟಕಗಳು ರಿಯಾಯಿತಿ ದರದಲ್ಲಿ ಪಡೆದುಕೊಂಡಿರುವ ರಶ್ಯ ತೈಲವನ್ನು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನವಾಗಿ ಪರಿವರ್ತಿಸಿ ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ಮುಂತಾದ ಶ್ರೀಮಂತ ಮಾರುಕಟ್ಟೆಗಳಿಗೆ ರಫ್ತು ಮಾಡಿವೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿಜಾಲ ತಾಣದ ವರದಿ ತಿಳಿಸಿದೆ.

ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ರಶ್ಯದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತೀಯ ತೈಲ ಶುದ್ಧೀಕರಣ ಘಟಕಗಳು 16 ಬಿಲಿಯ ಡಾಲರ್ (ಸುಮಾರು 1.40 ಲಕ್ಷ ಕೋಟಿ ರೂಪಾಯಿ) ಹೆಚ್ಚುವರಿ ಲಾಭವನ್ನು ಮಾಡಿಕೊಂಡಿವೆ. ಈ ಹೆಚ್ಚುವರಿ ಲಾಭದ ಪೈಕಿ ಸುಮಾರು 6 ಬಿಲಿಯ ಡಾಲರ್ (ಸುಮಾರು 52,640 ಕೋಟಿ ರೂಪಾಯಿ) ರಿಲಯನ್ಸ್ ಇಂಡಸ್ಟ್ರೀಸ್‌ ಗೆ ಹೋಗಿದೆ.

ಭಾರತವು 2025ರ ಮೊದಲ ಆರು ತಿಂಗಳಲ್ಲಿ 23.1 ಕೋಟಿ ಬ್ಯಾರಲ್ ಉರಾಲ್ (ರಶ್ಯ) ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಜಾಗತಿಕ ಸರಕು ಮತ್ತು ಸಾಗಾಟ ಉದ್ದಿಮೆಗಳಿಗೆ ಮಾರುಕಟ್ಟೆ ಮಾಹಿತಿಗಳನ್ನು ಒದಗಿಸುವ ಸಂಸ್ಥೆ ಕೆಪ್ಲರ್ ಹೇಳಿದೆ. ಭಾರತದ ಉರಾಲ್ ತೈಲ ಆಮದಿನ 45 ಶೇಕಡ ಜಾಮನಗರದಲ್ಲಿ ಜಗತ್ತಿನ ಅತಿ ದೊಡ್ಡ ತೈಲ ಶುದ್ಧೀಕರಣ ಘಟಕವನ್ನು ಹೊಂದಿರುವ ರಿಲಯನ್ಸ್ ಮತ್ತು ರಶ್ಯದ ರೋಸ್‌ನೆಫ್ಟ್ ಬೆಂಬಲಿತ ನಯಾರಕ್ಕೆ ಹೋಗುತ್ತದೆ. 2022ರಲ್ಲಿ, ರಿಲಯನ್ಸ್ ಮತ್ತು ನಯಾರ, ಜಾಗತಿಕ ಉರಾಲ್ ಆಮದಿನಲ್ಲಿ ಕಿರು ಪಾಲುಗಳನ್ನು ಹೊಂದಿತ್ತು. ರಿಲಯನ್ಸ್ ಸುಮಾರು 8 ಶೇಕಡ ಪಾಲು ಹೊಂದಿದ್ದರೆ, ನಯಾರ ಸುಮಾರು 7 ಶೇ. ಹೊಂದಿತ್ತು.

ದಿನಕ್ಕೆ 5,00,000 ಬ್ಯಾರಲ್‌ ವರೆಗೆ ಕಚ್ಚಾತೈಲವನ್ನು ಆಮದು ಖರೀದಿಸುವ ಒಪ್ಪಂದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ 2025 ಜನವರಿಯಲ್ಲಿ ಸಹಿ ಹಾಕಿತು. ಅಂದಿನಿಂದ ಅದು 7.7 ಕೋಟಿ ಬ್ಯಾರಲ್ ಉರಾಲ್ ಕಚ್ಚಾತೈಲವನ್ನು ಖರೀದಿಸಿದೆ. ಈಗ ರಿಲಯನ್ಸ್‌ನ ಒಟ್ಟು ಕಚ್ಚಾತೈಲ ಆಮದಿನ 36 ಶೇ. ಭಾಗ ಉರಾಲ್ ತೈಲ ಆಗಿದೆ. 2022ರಲ್ಲಿ ಅದು 10 ಶೇಕಡ ಆಗಿತ್ತು.

ರಶ್ಯದ ರೋಸ್‌ನೆಫ್ಟ್ ಸಹ ಮಾಲೀಕ ಆಗಿರುವ ನಯಾರ ಎನರ್ಜಿ 2025ರಲ್ಲಿ ಆಮದು ಮಾಡಿಕೊಂಡಿರುವ ತೈಲದ 72 ಶೇಕಡ ಉರಾಲ್ ಕಚ್ಚಾತೈಲ ಆಗಿದೆ. ಇದು 2022ರಲ್ಲಿ ಇದ್ದಿದುದಕ್ಕಿಂತ 27 ಶೇ. ಹೆಚ್ಚಾಗಿದೆ.

2024-25ರ ಹಣಕಾಸು ವರ್ಷದಲ್ಲಿ, ಈ ಎರಡು ತೈಲ ಶುದ್ಧೀಕರಣ ಘಟಕಗಳು ಸಂಯುಕ್ತವಾಗಿ 60 ಬಿಲಿಯ ಡಾಲರ್ (ಸುಮರು 5.26 ಲಕ್ಷ ಕೋಟಿ ರೂ.) ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿವೆ. 2025ರ ಮೊದಲಾರ್ಧದಲ್ಲಿ ಈ ಕಂಪೆನಿಗಳು 15 ಬಿಲಿಯ ಡಾಲರ್ (ಸುಮಾರು 1.31 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಉತ್ಪನ್ನಗಳನ್ನು ಯುರೋಪಿಯನ್ ಒಕ್ಕೂಟಕ್ಕೆ ರಫ್ತು ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News