ಭಾರತ- ಯುರೋಪ್ ಮುಕ್ತ ವ್ಯಾಪಾರ ಒಪ್ಪಂದ | ಅಟೊಮೊಬೈಲ್ ಆಮದು ಸುಂಕ ಇಳಿಸಿದ ಭಾರತ
ಜವಳಿ ಉದ್ಯಮಕ್ಕೆ ಯುರೋಪ್ ಮಾರುಕಟ್ಟೆ
ಸಾಂದರ್ಭಿಕ ಚಿತ್ರ (AI)
ಹೊಸದಿಲ್ಲಿ, ಜ. 27: ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ವೊಂದರ ಮಾತುಕತೆಗಳು ಸಮಾಪ್ತಿಯಾಗಿವೆ ಹಾಗೂ ಅಂತಿಮಗೊಂಡಿವೆ ಎಂದು ಭಾರತ ಮತ್ತು ಐರೋಪ್ಯ ಒಕ್ಕೂಟ (ಇಯು) ಮಂಗಳವಾರ ಘೋಷಿಸಿವೆ. ಈ ಸಂಬಂಧ ಇತ್ತಂಡಗಳು ದಾಖಲೆಯೊಂದಕ್ಕೆ ಸಹಿ ಹಾಕಿವೆ.
ಆದರೆ, ಒಪ್ಪಂದಕ್ಕೆ ಸಹಿ ಹಾಕಲಾಗಿಲ್ಲ. ಒಪ್ಪಂದವು ಅಂತಿಮಗೊಂಡು ಜಾರಿಗೆ ಬರಲು ಇನ್ನೂ ಹಲವು ತಿಂಗಳುಗಳು ಬೇಕಾಗಬಹುದು. ಆದರೆ, ಒಪ್ಪಂದಕ್ಕೆ ಈ ವರ್ಷದ ಕೊನೆಯಲ್ಲಿ ಸಹಿ ಬೀಳುವ ನಿರೀಕ್ಷೆಯಿದೆ ಹಾಗೂ ಮುಂದಿನ ವರ್ಷದ ಆರಂಭದಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ. ಸುದೀರ್ಘ 18 ವರ್ಷಗಳ ಬಳಿಕ ವ್ಯಾಪಾರ ಒಪ್ಪಂದ ಮಾತುಕತೆಗಳು ಸಂಪೂರ್ಣಗೊಂಡಿವೆ. 2007ರಲ್ಲಿ ಮಾತುಕತೆಗಳು ಆರಂಭಗೊಂಡಿದ್ದವು.
ಹೊಸದಿಲ್ಲಿಯಲ್ಲಿ ನಡೆದ ಭಾರತ-ಐರೋಪ್ಯ ಒಕ್ಕೂಟ ಶೃಂಗ ಸಮ್ಮೇಳನದಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ. ಸಮ್ಮೇಳನದಲ್ಲಿ ಐರೋಪ್ಯ ಒಕ್ಕೂಟ ಅಧ್ಯಕ್ಷ ಉರ್ಸುಲಾ ವೋನ್ ಡರ್ ಲೆಯನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಮಾತುಕತೆ ನಡೆಸಿದರು.
ಭಾರತ ಮತ್ತು ಐರೋಪ್ಯ ಒಕ್ಕೂಟವು ಮುಕ್ತ ವ್ಯಾಪಾರ ಒಪ್ಪಂದವೊಂದಕ್ಕೆ ಬಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಘೋಷಿಸಿದರು. ಇದು ಜಾಗತಿಕ ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದ 25 ಶೇಕಡಷ್ಟಾಗುತ್ತದೆ ಹಾಗೂ ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗದಷ್ಟಾಗುತ್ತದೆ ಎಂದು ಅವರು ಹೇಳಿದರು. ಇನ್ನೂರು ಕೋಟಿ ಜನರು ಒಪ್ಪಂದದ ವ್ಯಾಪ್ತಿಗೆ ಒಳಪಡುತ್ತಾರೆ.
ಎರಡು ದಶಕಗಳ ಬಳಿಕ ಇಯು-ಭಾರತ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳು ಸಂಪೂರ್ಣಗೊಂಡಿವೆ. ದ್ವಿಪಕ್ಷೀಯ ವ್ಯಾಪಾರ ಈಗಾಗಲೇ 136 ಬಿಲಿಯ ಡಾಲರ್ (ಸುಮಾರು 12.47 ಲಕ್ಷ ಕೋಟಿ ರೂಪಾಯಿ) ದಾಟಿದೆ ಹಾಗೂ ನೂತನ ಒಪ್ಪಂದವು ಜಗತ್ತಿನ ಅತಿ ದೊಡ್ಡ ದ್ವಿಪಕ್ಷೀಯ ಒಪ್ಪಂದಗಳ ಪೈಕಿ ಒಂದಾಗಲಿದೆ ಎನ್ನಲಾಗಿದೆ.
ಅಂತಿಮ ಒಪ್ಪಂದವು ಇನ್ನೂ ಕಾನೂನು ಪರಿಶೀಲನೆಗೆ ಒಳಪಡಲಿದೆ. ಒಪ್ಪಂದವನ್ನು ಇತ್ತಂಡಗಳು ವಿವರವಾದ ಕಾನೂನು ವಿಶ್ಲೇಷಣೆಗೆ ಒಳಪಡಿಸಲಿವೆ. ಈ ಪ್ರಕ್ರಿಯೆಗೆ ಕನಿಷ್ಠ ಐದರಿಂದ ಆರು ತಿಂಗಳುಗಳು ಬೇಕಾಗಬಹುದು.
ಮುಂದಿನ ಎರಡು ವಾರಗಳಲ್ಲಿ ಸಂಧಾನಕಾರರು ಒಪ್ಪಂದದ ಬರಹದ ಸ್ಪಷ್ಟ ಮತ್ತು ಸಮಗ್ರ ಮಾದರಿಯನ್ನು ಸಿದ್ಧಪಡಿಸುತ್ತಾರೆ. ಬಳಿಕ ಅದನ್ನು ಕಾನೂನು ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಔಪಚಾರಿಕವಾಗಿ ಸಹಿ ಹಾಕಬಹುದಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರಕಾರವು ಭಾರತ ಮತ್ತು ಐರೋಪ್ಯ ಒಕ್ಕೂಟದ ಮೇಲೆ ಅಗಾಧ ಸುಂಕ ಹೇರಿದ ಬಳಿಕ ಈ ಬೆಳವಣಿಗೆ ನಡೆದಿದೆ.
‘ಎಲ್ಲಾ ವ್ಯಾಪಾರ ಒಪ್ಪಂದಗಳ ತಾಯಿ’
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ‘‘ಎಲ್ಲಾ ವ್ಯಾಪಾರ ಒಪ್ಪಂದಗಳ ತಾಯಿ’’ ಎಂಬುದಾಗಿ ಬಣ್ಣಿಸಲಾಗಿದೆ. ಒಪ್ಪಂದವು ಇತ್ತಂಡಗಳಿಗೂ ಅತ್ಯಂತ ಮಹತ್ವದ ಆರ್ಥಿಕ ಭಾಗೀದಾರಿಕೆಯಾಗಿದೆ.
ಒಪ್ಪಂದವು ಉಭಯ ಬಣಗಳ ಮಾರುಕಟ್ಟೆ ಪ್ರವೇಶವನ್ನು ಗಣನೀಯವಾಗಿ ವೃದ್ಧಿಸುವ ನಿರೀಕ್ಷೆಯಿದೆ. ಅದು ಭಾರತಕ್ಕೆ ಜವಳಿ, ಬಟ್ಟೆ, ಚರ್ಮದ ವಸ್ತುಗಳು, ಸಾಗರೋತ್ಪನ್ನಗಳು, ರತ್ನಗಳು ಮತ್ತು ಆಭರಣ ಹಾಗೂ ಇಂಜಿನಿಯರಿಂಗ್ ಮುಂತಾದ ಕಾರ್ಮಿಕ ಪ್ರಧಾನ ಕ್ಷೇತ್ರಗಳ ಉತ್ಪನ್ನಗಳನ್ನು ಸುಂಕರಹಿತವಾಗಿ ಅಥವಾ ಕಡಿಮೆ ಸುಂಕದೊಂದಿಗೆ ರಫ್ತು ಮಾಡಲು ಅವಕಾಶ ನೀಡುತ್ತದೆ. ಈ ಮೂಲಕ ಭಾರತದ ಉದ್ಯೋಗ ಮಾರುಕಟ್ಟೆಯ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುವ ನಿರೀಕ್ಷೆಯಿದೆ. ಮಾಹಿತಿ ತಂತ್ರಜ್ಞಾನ, ಸಮಾಲೋಚನೆ ಮತ್ತು ವೃತ್ತಿಪರ ಸೇವೆಗಳ ಕ್ಷೇತ್ರಗಳಲ್ಲಿ ಭಾರತೀಯ ಸೇವಾ ಕಂಪೆನಿಗಳು ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆಗಳಿವೆ.
ಯಂತ್ರಗಳು, ರಾಸಾಯನಿಕಗಳು, ವೈದ್ಯಕೀಯ ಉಪಕರಣಗಳು, ಸಂಸ್ಕರಿತ ಆಹಾರಗಳು ಮತ್ತು ಪಾನೀಯಗಳು ಹಾಗೂ ಸಾಧ್ಯವಿದ್ದರೆ ಮುಂದಕ್ಕೆ ವಾಹನಗಳು ಸೇರಿದಂತೆ ಐರೋಪ್ಯ ಒಕ್ಕೂಟವು ಭಾರತಕ್ಕೆ ಮಾಡುವ ವಿಶಾಲ ಶ್ರೇಣಿಯ ರಫ್ತುಗಳಿಗೆ ಈ ಒಪ್ಪಂದವು ಸುಂಕಗಳನ್ನು ತೆರವುಗೊಳಿಸುತ್ತದೆ ಅಥವಾ ಕಡಿಮೆಗೊಳಿಸುತ್ತದೆ.
ಈ ಒಪ್ಪಂದದ ಮೂಲಕ ಸಾಗಾಟ ಸರಪಳಿಗಳನ್ನು ಬಲಪಡಿಸುವ, ಪರಿಶುದ್ಧ ತಂತ್ರಜ್ಞಾನ ಸಹಕಾರವನ್ನು ವೃದ್ಧಿಸುವ ಮತ್ತು ಹೂಡಿಕೆ ಹರಿವುಗಳನ್ನು ಹೆಚ್ಚಿಸುವ ಉದ್ದೇಶಗಳನ್ನು ಉಭಯ ಬಣಗಳು ಹೊಂದಿವೆ.
ಒಪ್ಪಂದದಿಂದ 43,730 ಕೋಟಿ ರೂ. ಉಳಿತಾಯ: ಇಯು
ವ್ಯಾಪಾರ ಒಪ್ಪಂದವು ಪ್ರತಿ ವರ್ಷ 4 ಬಿಲಿಯ ಯುರೋ (ಸುಮಾರು 43,730 ಕೋಟಿ ರೂಪಾಯಿ) ಸುಂಕವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಐರೋಪ್ಯ ಒಕ್ಕೂಟ (ಇಯು) ಹೇಳಿಕೆಯೊಂದರಲ್ಲಿ ತಿಳಿಸಿದೆ. ಯುರೋಪ್‌ನಿಂದ ಆಮದು ಮಾಡಿಕೊಳ್ಳುವ 97 ಶೇಕಡ ವಸ್ತುಗಳ ಮೇಲಿನ ಸುಂಕವನ್ನು ತೆಗೆಯಲು ಅಥವಾ ಕಡಿಮೆ ಮಾಡಲು ಭಾರತ ಒಪ್ಪಿದೆ ಎಂದು ಅದು ಹೇಳಿದೆ.
ಒಪ್ಪಂದವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ‘‘ಇದು ವ್ಯಾಪಾರ, ಹೂಡಿಕೆ ಮತ್ತು ಸಂಶೋಧನೆಗೆ ಒತ್ತು ನೀಡುತ್ತದೆ ಹಾಗೂ ರಕ್ಷಣಾ ಸಂಬಂಧವನ್ನು ಬಲಪಡಿಸುತ್ತದೆ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ. ‘‘ಸ್ಥಿರ, ಸಮೃದ್ಧ ಮತ್ತು ಭವಿಷ್ಯಕ್ಕೆ ಸಿದ್ಧಗೊಳಿಸುವ ಆರ್ಥಿಕ ಸಂಬಂಧವೊಂದನ್ನು ರೂಪಿಸುವ ನಮ್ಮ ಪರಸ್ಪರ ನಿರ್ಧಾರವನ್ನು ಒಪ್ಪಂದವು ಬಿಂಬಿಸುತ್ತದೆ’’ ಎಂದು ಹೇಳಿದ್ದಾರೆ.
ಒಪ್ಪಂದದ ಪ್ರಮುಖ ಅಂಶಗಳು
ಐರೋಪ್ಯ ಒಕ್ಕೂಟದ ರಫ್ತುದಾರರಿಗೆ ಭಾರತದ ಬೃಹತ್ ಮಾರುಕಟ್ಟೆಗೆ ಮುಕ್ತ ಪ್ರವೇಶ. ಯಾವುದೇ ವ್ಯಾಪಾರಿ ಭಾಗೀದಾರನಿಗೆ ಈವರೆಗೆ ನೀಡದಷ್ಟು ಪ್ರವೇಶವನ್ನು ಭಾರತ ಐರೋಪ್ಯ ಒಕ್ಕೂಟಕ್ಕೆ ನೀಡಿದೆ.
ಹಣಕಾಸು ಸೇವೆಗಳು ಮತ್ತು ಸಾಗರ ಸೇವೆಗಳು ಸೇರಿದಂತೆ ಮಹತ್ವದ ಕ್ಷೇತ್ರಗಳಲ್ಲಿ ಐರೋಪ್ಯ ಒಕ್ಕೂಟದ ಸೇವಾ ಪೂರೈಕೆದಾರರಿಗೆ ಭಾರತೀಯ ಮಾರುಕಟ್ಟೆಗೆ ಹೆಚ್ಚಿನ ಪ್ರವೇಶ.
ರಫ್ತುಗಳನ್ನು ಕ್ಷಿಪ್ರ ಮತ್ತು ಸುಲಭಗೊಳಿಸಲು ಸುಂಕ ವಿಧಿವಿಧಾನಗಳ ಸರಳೀಕರಣ.
ಟ್ರೇಡ್‌ಮಾರ್ಕ್ ಮುಂತಾದ ಇಯು ಬೌದ್ಧಿಕ ಆಸ್ತಿಯ ರಕ್ಷಣೆ.
ಐರೋಪ್ಯ ಒಕ್ಕೂಟದ ಸಣ್ಣ ಉದ್ಯಮಗಳಿಗಾಗಿ ಅವುಗಳಿಗೆಂದೇ ಮೀಸಲಾದ ವಿಭಾಗ.
ಯುರೋಪ್ ಕಾರುಗಳ ಮೇಲಿನ ಸುಂಕ ಭಾರೀ ಕಡಿತ?
ಮುಕ್ತ ವ್ಯಾಪಾರ ಒಪ್ಪಂದವು ಹಂತ ಹಂತವಾಗಿ ಐರೋಪ್ಯ ಕಾರುಗಳ ಮೇಲಿನ ಸುಂಕವನ್ನು ಈಗಿನ 110 ಶೇಕಡದಿಂದ 10 ಶೇಕಡಕ್ಕೆ ಇಳಿಸಲಿದೆ ಎನ್ನಲಾಗಿದೆ. ಅದೇ ವೇಳೆ, ವೈನ್‌ಗಳ ಮೇಲಿನ ಸುಂಕವು ನಿಧಾನವಾಗಿ 150 ಶೇ.ದಿಂದ 20 ಶೇ.ಕ್ಕೆ ಇಳಿಯಲಿದೆ.
ಈಗ, ಪಾಸ್ತಾ ಮತ್ತು ಚಾಕೊಲೇಟ್ ಸೇರಿದಂತೆ ಭಾರತಕ್ಕೆ ಆಮದಾಗುವ ಸಂಸ್ಕರಿತ ಆಹಾರಗಳ ಮೇಲೆ 50 ಶೇ. ಸುಂಕ ಚಾಲ್ತಿಯಲ್ಲಿದೆ. ಅದು ಸಂಪೂರ್ಣ ಹೋಗಲಿದೆ.
ಮುಖ್ಯಾಂಶಗಳು
93 ಶೇಕಡ ಭಾರತೀಯ ಉತ್ಪನ್ನಗಳಿಗೆ ಏಳು ವರ್ಷಗಳ ಅವಧಿಯಲ್ಲಿ ಶೂನ್ಯ ಸುಂಕ.
6 ಶೇ. ಭಾರತೀಯ ಉತ್ಪನ್ನಗಳಿಗೆ ಆಂಶಿಕ ಸುಂಕ ಕಡಿತ ಮತ್ತು ವಿಶೇಷ ಕೊಟ.
99.5 ಶೇ. ದ್ವಿಪಕ್ಷೀಯ ವ್ಯಾಪಾರಕ್ಕೆ ಒಂದಲ್ಲ ಒಂದು ರೀತಿಯ ಸುಂಕ ವಿನಾಯಿತಿ.
ಸಂಪೂರ್ಣ ಸುಂಕ ವಿನಾಯಿತಿಯಿಂದ ಮೋಟಾರು ವಾಹನಗಳು ಮತ್ತು ಕೃಷಿಯನ್ನು ಹೊರಗಿಟ್ಟ ಭಾರತ.
ಐರೋಪ್ಯ ಒಕ್ಕೂಟದ ಸರಾಸರಿ ಸುಂಕ ದರ 3.8 ಶೇ.ದಿಂದ 0.1 ಶೇ.ಕ್ಕೆ ಇಳಿಕೆ.
ಸಮುದ್ರ ಉತ್ಪನ್ನಗಳು (ಹಾಲಿ ಸುಂಕ 26 ಶೇ,), ರಾಸಾಯನಿಕಗಳು (12.8 ಶೇ.), ಪ್ಲಾಸ್ಟಿಕ್/ರಬ್ಬರ್ (6.5 ಶೇ.), ಚರ್ಮ/ಚಪ್ಪಲಿ (17 ಶೇ.), ಜವಳಿ (12 ಶೇ.), ಬಟ್ಟೆ (4 ಶೇ.), ಸಾಮಾನ್ಯ ಲೋಹಗಳು (10 ಶೇ.) ಹಾಗೂ ಮುತ್ತು ಮತ್ತು ಆಭರಣಗಳು (4 ಶೇ.) ಮುಂತಾದ ಪ್ರಮುಖ ಭಾರತೀಯ ಉತ್ಪನ್ನಗಳ ಮೇಲಿನ ಸುಂಕವು ಶೂನ್ಯಕ್ಕೆ ಇಳಿಯಲಿದೆ.