ರಾಜಸ್ಥಾನ | ಪೊಲೀಸ್ ಭದ್ರತೆಯಲ್ಲಿ ದಲಿತ ವರನ ವಿವಾಹ ಮೆರವಣಿಗೆ
Photo | indianexpress
ಜೈಪುರ : ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ(National Commission for Scheduled Castes)ದ ಮಧ್ಯಪ್ರವೇಶದ ಬಳಿಕ ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯ ತಾರ್ವಾಡಾ ಗ್ರಾಮದ ದಲಿತ ಕುಟುಂಬವೊಂದು ಪೊಲೀಸ್ ಭದ್ರತೆಯಲ್ಲಿ ವಿವಾಹ ಮೆರವಣಿಗೆ ನಡೆಸಿತು.
ವರನ ಸಹೋದರ ಸುರೇಶ್ ಬಮಾನಿಯಾ ಅವರು ತಮ್ಮ ಸಹೋದರನ ವಿವಾಹ ಮೆರವಣಿಗೆಗೆ ಪೊಲೀಸ್ ರಕ್ಷಣೆ ಕೋರಿ ಜಿಲ್ಲಾ ಪೊಲೀಸರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಪರಿಶಿಷ್ಟ ಜಾತಿ ಸಮಿತಿಯು ಈ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. 2022ರಲ್ಲಿ ದಲಿತ ವ್ಯಕ್ತಿಯ ವಿವಾಹ ಮೆರವಣಿಗೆಗೆ ಅಡ್ಡಿಪಡಿಸಿದ ಘಟನೆಯನ್ನು ಬಮಾನಿಯಾ ಪತ್ರದಲ್ಲಿ ಉಲ್ಲೇಖಿಸಿದ್ದರು.
ರಾಜ್ಸಮಂದ್ ಪೊಲೀಸ್ ವರಿಷ್ಠಾಧಿಕಾರಿಗೆ ಶುಕ್ರವಾರ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಪತ್ರ ಬರೆದಿದೆ. ಪತ್ರದಲ್ಲಿ ವಿವಾಹ ಮೆರವಣಿಗೆಗೆ ದಲಿತ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಇದಲ್ಲದೆ ಈ ಕುರಿತು 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು.
ರಾಜ್ಸಮಂದ್ ಎಸ್ಪಿ ಮನೀಶ್ ತ್ರಿಪಾಠಿ ಈ ಬಗ್ಗೆ ಪ್ರತಿಕ್ರಿಯಿಸಿ, ಶನಿವಾರ ಪೊಲೀಸ್ ಭದ್ರತೆಯಲ್ಲಿ ವಿವಾಹ ಮೆರವಣಿಗೆ ನಡೆದಿದೆ. ಗ್ರಾಮದಲ್ಲಿ 170 ಪೊಲೀಸ್ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಡ್ರೋನ್‌ಗಳನ್ನು ಬಳಸಲಾಗಿದೆ. ಎಸ್ಸಿ ಸಮಿತಿಯ ನಿರ್ದೇಶನದಂತೆ ಪೊಲೀಸರು 15 ದಿನಗಳಲ್ಲಿ ಈ ಕುರಿತು ವರದಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ ನಡೆಸಲಾಗಿತ್ತು. ಇದಾದ ಒಂದು ವಾರದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.