×
Ad

ಏರ್‌ ಇಂಡಿಯಾ ವಿಮಾನ ಪತನದ ತನಿಖೆ ನಿಷ್ಪಕ್ಷಪಾತವಾಗಿದೆ: ನಾಗರಿಕ ವಿಮಾನ ಯಾನ ಸಚಿವ

Update: 2025-07-21 16:13 IST

ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ರಾಮ್ ಮೋಹನ್ ನಾಯ್ಡು (PTI)

ಹೊಸದಿಲ್ಲಿ: ಜೂನ್ 12ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದ ಕುರಿತು ನಡೆಯುತ್ತಿರುವ ತನಿಖೆಯ ಪ್ರಾಥಮಿಕ ವರದಿಯ ಕುರಿತ ಊಹಾಪೋಹಗಳು ಪಕ್ಷಪಾತದಿಂದ ಕೂಡಿವೆ ಎಂದು ಸೋಮವಾರ ತಿರುಗೇಟು ನೀಡಿದ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ರಾಮ್ ಮೋಹನ್ ನಾಯ್ಡು, “ಪಾಶ್ಚಿಮಾತ್ಯ ಮಾಧ್ಯಮಗಳು ತಮ್ಮದೇ ಆದ ನಿರೂಪಣೆಗಳನ್ನು ಹರಡುತ್ತಿವೆ” ಎಂದು ಟೀಕಿಸಿದರು.

ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ರಾಮ್ ಮೋಹನ್ ನಾಯ್ಡು, “ಏರ್ ಇಂಡಿಯಾ ವಿಮಾನ ಅಪಘಾತದ ಕುರಿತ ಅಂತಿಮ ವರದಿ ಅಪಘಾತದ ಕುರಿತು ಮತ್ತಷ್ಟು ಸ್ಪಷ್ಟ ಚಿತ್ರಣ ನೀಡಲಿದ್ದು, ಅಲ್ಲಿಯವರೆಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳು ಯಾವುದೇ ನಿರ್ಣಯಗಳಿಗೆ ತಲುಪಬಾರದು” ಎಂದು ಮನವಿ ಮಾಡಿದರು.

“ವಿಮಾನ ಅಪಘಾತ ತನಿಖಾ ದಳವು ತನಿಖೆಯನ್ನು ಪಾರದರ್ಶಕವಾಗಿ ನಡೆಸುತ್ತಿದೆ. ನಾನು ಭಾರತೀಯ ಮಾಧ್ಯಮಗಳಲ್ಲದೆ, ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿನ ಲೇಖನಗಳನ್ನೂ ಗಮನಿಸಿದ್ದು, ಅವೆಲ್ಲ ತಮ್ಮದೇ ಆದ ದೃಷ್ಟಿಕೋನವನ್ನು ಹರಡಲು ಪ್ರಯತ್ನಿಸುತ್ತಿವೆ” ಎಂದು ಅವರು ಆರೋಪಿಸಿದರು.

ಈ ವೇಳೆ, ಸದನದಲ್ಲಿ ವಿರೋಧ ಪಕ್ಷಗಳ ಸದಸ್ಯರಿಂದ ಘೋಷಣೆಗಳು ಕೇಳಿ ಬಂದವು.

ಜೂನ್ 12ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ಜುಲೈ 8ರಂದು ತನ್ನ ಪ್ರಾಥಮಿಕ ವರದಿ ಸಲ್ಲಿಸಿದ್ದ ವಿಮಾನ ಅಪಘಾತಗಳ ತನಿಖಾ ದಳ, ಅವಳಿ ಇಂಜಿನ್ ಗಳ ಇಂಧನ ಪೂರೈಕೆ ಸ್ವಿಚ್ ಗಳೆರಡೂ ಕೆಲ ಕಾಲ ಕಟ್ ಆಫ್ ಆಗಿರುವುದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಿತ್ತು. ಇದರ ಬೆನ್ನಿಗೇ, ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವರದಿ ಮಾಡಿದ್ದ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಸುದ್ದಿ ಸಂಸ್ಥೆ, ವಿಮಾನದ ಓರ್ವ ಪೈಲಟ್ ಅವಳಿ ಇಂಜಿನ್ ಗಳ ಇಂಧನ ಪೂರೈಕೆ ಸ್ವಿಚ್ ಗಳೆರಡನ್ನು ಕಟ್ ಆಫ್ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಿತ್ತು. ಈ ವರದಿಯು ಭಾರತದಲ್ಲಿ ತೀವ್ರ ಸ್ವರೂಪದ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News