×
Ad

ದಿಲ್ಲಿಯಲ್ಲಿ ಕರ್ತವ್ಯ ಭವನ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಸೆಂಟ್ರಲ್ ವಿಸ್ಟಾ ಯೋಜನೆಯಡಿ ನಿರ್ಮಿತ ಈ ಹೈಟೆಕ್ ಕಟ್ಟಡದಲ್ಲಿ ಏನೆಲ್ಲಾ ವಿಶೇಷತೆಗಳಿವೆ?; ಇಲ್ಲಿದೆ ಮಾಹಿತಿ...

Update: 2025-08-06 15:14 IST

ಹೊಸದಿಲ್ಲಿ : ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ದಿಲ್ಲಿಯಲ್ಲಿ ನಿರ್ಮಿಸಲಾದ ಕರ್ತವ್ಯ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು.

ಸೆಂಟ್ರಲ್ ವಿಸ್ಟಾ ಯೋಜನೆಯಡಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಗೃಹ ಸಚಿವಾಲಯ ಮಾತ್ರ ಈಗ ಅದರ ಹಿಂದಿನ ನಾರ್ತ್ ಬ್ಲಾಕ್ ನಿಂದ ಕರ್ತವ್ಯ ಭವನ್ 3ಕ್ಕೆ ಸ್ಥಳಾಂತರಗೊಂಡಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯಗಳು ಸ್ಥಳಾಂತರಗೊಳ್ಳಲಿವೆ ಎಂದು ಹೇಳಲಾಗಿದೆ.

ಕರ್ತವ್ಯ ಭವನದ ಮೂರೂ ಕಟ್ಟಡಗಳ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ 3,690 ಕೋಟಿ ಮಂಜೂರು ಮಾಡಿತ್ತು. 2027ರ ಕರ್ತವ್ಯ ಭವನ ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ಹೇಳಲಾಗಿದೆ.

ಕರ್ತವ್ಯ ಭವನದಲ್ಲಿ 24 ಮುಖ್ಯ ಕಾನ್ಫರೆನ್ಸ್ ಕೊಠಡಿಗಳಿದ್ದು, ಒಂದೊಂದರಲ್ಲಿ 45 ಜನರು ಕುಳಿತುಕೊಳ್ಳಬಹುದಾಗಿದೆ. ತಲಾ 25 ಜನರಿಗೆ ಕುಳಿತುಕೊಳ್ಳಬಹುದಾದ 26 ಸಣ್ಣ ಕಾನ್ಫರೆನ್ಸ್ ಕೊಠಡಿಗಳು, ತಲಾ 9 ಜನರು ಕುಳಿತುಕೊಳ್ಳಬಹುದಾದ 67 ಸಣ್ಣ ಮೀಟಿಂಗ್ ಕೊಠಡಿಗಳು ಇರಲಿವೆ ಎಂದು ಹೇಳಲಾಗಿದೆ.

ಹಳೆಯ ಕೇಂದ್ರ ಸಚಿವಾಲಯ ಸಂಕೀರ್ಣ 22 ಕೇಂದ್ರ ಸಚಿವಾಲಯಗಳ ಕಚೇರಿಗಳನ್ನು ಹೊಂದಿದ್ದು, 41,000 ಉದ್ಯೋಗಿಗಳಿಗೆ ವಸತಿ ಕಲ್ಪಿಸಲಾಗಿದೆ. ಶಾಸ್ತ್ರಿ ಭವನ, ನಿರ್ಮಾಣ ಭವನ, ಉದ್ಯೋಗ ಭವನ, ಕೃಷಿ ಭವನ ಮತ್ತು ವಾಯು ಭವನದಲ್ಲಿ ಇರುವ ಕೇಂದ್ರ ಸಚಿವಾಲಯಗಳ ಕಚೇರಿಗಳು ಇವುಗಳಲ್ಲಿ ಸೇರಿವೆ.

ಕೇಂದ್ರ ಸರಕಾರದ ಬಹುತೇಕ ಸಚಿವಾಲಯಗಳು ಕರ್ತವ್ಯ ಭವನಕ್ಕೆ ಸ್ಥಳಾಂತರಗೊಂಡರೆ, ವಾಣಿಜ್ಯ ಸಚಿವಾಲಯದ ಕಚೇರಿಗಳಿರುವ ವಾಣಿಜ್ಯ ಭವನ ಮತ್ತು ವಿದೇಶಾಂಗ ಸಚಿವಾಲಯದ

ಕಚೇರಿಗಳಿರುವ ಜವಾಹರಲಾಲ್ ನೆಹರು ಭವನದಂಥ ಕೆಲವು ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಸಚಿವಾಲಯದ ಸಂಕೀರ್ಣದಲ್ಲಿರುವ ಇತರ ಕಟ್ಟಡಗಳಲ್ಲಿ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಅಂಬೇಡ್ಕರ್ ಸಭಾಂಗಣ ಸೇರಿವೆ. ಹಲವಾರು ಗ್ರೀನ್ ಫೀಚರ್‌ಗಳನ್ನು ಹೊಂದಿರುವ ಹೊಸ ಭವನ ಶೇ. 30 ಇಂಧನ ಉಳಿತಾಯಕ್ಕೆ ನೆರವಾಗುವಂತೆ ಎಲ್ಇಡಿ ಲೈಟಿಂಗ್, ಆಕ್ಯುಪೆನ್ಸಿ ಸೆನ್ಸರ್‌ಗಳು ಮತ್ತು ಹಗಲು ಬೆಳಕಿನ ಸೆನ್ಸರ್‌ಗಳನ್ನು ಒಳಗೊಂಡಿದೆ ಎನ್ನಲಾಗಿದೆ.

ಅಧಿಕಾರಿಗಳಿಗೆ, ಸಂದರ್ಶಕರಿಗೆ, ಐಡಿ ಕಾರ್ಡ್ ಇದ್ದರಷ್ಟೇ ಕರ್ತವ್ಯ ಭವನದ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಭದ್ರತೆಗಾಗಿ ಕಾಂಪೌಂಡ್ ಗೋಡೆಯ ಮೇಲೆ ವಿದ್ಯುತ್ ಬೇಲಿಯನ್ನು ಕೂಡ ಹಾಕಲಾಗಿದೆ. ಸೆಂಟ್ರಲ್ ವಿಸ್ಟಾಗೆ ಸಂಯೋಜಿಸಲಾದ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವಿದ್ದು, ಅಲ್ಲಿಂದ ಆ ಪ್ರದೇಶದ ಎಲ್ಲಾ ಚಲನವಲನಗಳ ಮೇಲ್ವಿಚಾರಣೆ ನಡೆಯಲಿದೆ.

ಕರ್ತವ್ಯ ಭವನದಲ್ಲಿ ಕೆಲಸದ ಸ್ಥಳಗಳು ಇಕ್ಕಟ್ಟಾಗಿದ್ದು, ಗೌಪ್ಯತೆಗೆ ಧಕ್ಕೆ ತರುವಂತಿವೆ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ. ಈ ಕುರಿತು ಕೇಂದ್ರ ಸಚಿವಾಲಯ ಸೇವೆಯ (ಸಿಎಸ್ಎಸ್) ನೌಕರರು ಪ್ರಧಾನಿ ಕಾರ್ಯಾಲಯ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಕರ್ತವ್ಯ ಭವನ 3 ರಲ್ಲಿನ ಆಸನ ವ್ಯವಸ್ಥೆ ವಿವಿಧ ವಿಭಾಗಗಳಿಗೆ ಅಗತ್ಯವಾದ ಪ್ರತ್ಯೇಕತೆಯನ್ನು ಹೊಂದಿಲ್ಲ ಎಂದು ಪತ್ರದಲ್ಲಿ ದೂರಲಾಗಿದೆ. ಕೆಲಸದ ಗೌಪ್ಯತೆ ಮತ್ತು ಪ್ರಾಮುಖ್ಯತೆಯ ಖಾತರಿಗಾಗಿ ಅಧಿಕಾರಿಗಳ ಕೆಲಸದ ಸ್ಥಳಗಳನ್ನು ಮುಚ್ಚಿದ ಕೊಠಡಿಗಳಾಗಿ ವಿನ್ಯಾಸಗೊಳಿಸುವುದು ಕಡ್ಡಾಯವಾಗಿದೆ. ಆದರೆ ಇಲ್ಲಿನ ಇಕ್ಕಟ್ಟಾದ ಕೆಲಸದ ಸ್ಥಳಗಳಲ್ಲಿ ಸಂದರ್ಶಕರಿಗೂ ಆಸನಗಳಿಲ್ಲ ಎನ್ನಲಾಗಿದೆ. ಒಂದೇ ಶ್ರೇಣಿಯ ಹುದ್ದೆಯಲ್ಲಿರುವ ಅಧಿಕಾರಿಗಳಿಗೂ ಸ್ಥಳ ಹಂಚಿಕೆಯಲ್ಲಿ ಸಮಾನತೆ ಇಲ್ಲದಿರುವುದು ಅಧಿಕಾರಿಗಳ ನೈತಿಕತೆಯನ್ನು ಕುಗ್ಗಿಸುವಂತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News