×
Ad

Rajasthan | ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಸ್ವಘೋಷಿತ ಗೋರಕ್ಷಕರಿಂದ ಹಲ್ಲೆ ಆರೋಪ; ಮೂವರ ಬಂಧನ

Update: 2026-01-07 23:34 IST

Photo Credit : X

 

ಝಾಲಾವರ್ (ರಾಜಸ್ಥಾನ): ಹಸುವನ್ನು ಕೊಂದು ಗೋಮಾಂಸ ಸೇವಿಸಿರುವ ಶಂಕೆಯಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರ ಮೇಲೆ ಸ್ವಯಂಘೋಷಿತ ಗೋರಕ್ಷಕರು ಹಲ್ಲೆ ನಡೆಸಿರುವ ಘಟನೆ ಜನವರಿ 1ರಂದು ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಹಸಿಲ್‌ನ ಕಿಶನ್‌ಪುರ ಗ್ರಾಮದಲ್ಲಿ ನಡೆದಿದೆ ಎಂದು altnews.in ವರದಿ ಮಾಡಿದೆ.

ಹಲ್ಲೆಗೆ ಒಳಗಾದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿವೆ. ಒಂದು ವೀಡಿಯೊದಲ್ಲಿ ಕಸದ ರಾಶಿಯ ಸಮೀಪ ನೆಲದ ಮೇಲೆ ಕುಳಿತಿರುವ ವ್ಯಕ್ತಿಯು ಕಾಣಿಸಿಕೊಂಡಿದ್ದು, ಹತ್ತಿರದಲ್ಲೇ ದನದ ಅವಶೇಷಗಳಂತೆ ಕಾಣುವ ವಸ್ತುಗಳು ಗೋಚರಿಸುತ್ತವೆ. ಗುಂಪಿನಲ್ಲಿದ್ದವರು ಆತನನ್ನು ಪ್ರಶ್ನಿಸುತ್ತಾ, “ಹಸು ನಮ್ಮ ತಾಯಿ” ಎಂದು ಹೇಳುವಂತೆ ಒತ್ತಾಯಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಕೆಲವರು ಆ ವ್ಯಕ್ತಿ ಹೊರಗಿನವನು ಎಂದು ಹೇಳುತ್ತಿರುವುದೂ ಕೇಳಿಸುತ್ತದೆ.

ಮತ್ತೊಂದು ವೀಡಿಯೊದಲ್ಲಿ, ಆರೋಪಿಗಳು ಆತನನ್ನು ರಸ್ತೆಯ ಮಧ್ಯಕ್ಕೆ ಎಳೆದುಕೊಂಡು ಹೋಗಿ ಥಳಿಸುವುದು, ಅವಮಾನಿಸುವುದು ಮತ್ತು ಮುಂದೆ ಬರುತ್ತಿದ್ದ ಟ್ರಕ್ ಅನ್ನು ಆತನ ಮೇಲೆ ಓಡಿಸಲು ಪ್ರಯತ್ನಿಸಿರುವ ದೃಶ್ಯಗಳು ಕಂಡುಬಂದಿವೆ. ನೋವಿನಿಂದ ಆತ “ಅಯ್ಯೋ ಅಪ್ಪಾ!” ಎಂದು ಕೂಗುತ್ತಾನೆ. ಈ ವೇಳೆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ “ಅವನು ಕೊನೆಗೂ ಮುಸ್ಲಿಂ” ಎಂದು ಹೇಳಿರುವುದು ಕೇಳಿಸುತ್ತದೆ. “ಅಯ್ಯೋ ಅಪ್ಪಾ” ಎಂಬ ಪದ ಬಳಕೆಯಿಂದ ಸಂತ್ರಸ್ತ ದಕ್ಷಿಣ ಭಾರತದ ಭಾಗದವನು ಇರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ.

ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಅವರನ್ನು Alt News ಸಂಪರ್ಕಿಸಿದಾಗ, ವೈರಲ್ ವೀಡಿಯೊಗಳ ಆಧಾರದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಅವರು ತಿಳಿಸಿದ್ದಾರೆ. ಹಸುವನ್ನು ಹತ್ಯೆ ಮಾಡಿ ಗೋಮಾಂಸ ಸೇವಿಸಿದ್ದಾನೆ ಎಂಬ ಶಂಕೆಯ ಮೇರೆಗೆ ಹಲ್ಲೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂತ್ರಸ್ತ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಸತ್ತ ಹಸುವಿನ ಅವಶೇಷಗಳ ಬಳಿ ಕುಳಿತಿದ್ದನು ಅಕ್ಲೇರಾ ಪೊಲೀಸ್ ಇನ್ಸ್‌ಪೆಕ್ಟರ್ ಧರ್ಮರಾಮ್ ತಿಳಿಸಿದ್ದಾರೆ. ಆತ ಅಲೆಮಾರಿಯಾಗಿದ್ದರಿಂದ ಹಲ್ಲೆಯ ಬಳಿಕ ಸ್ಥಳದಿಂದ ಹೊರಟುಹೋಗಿದ್ದು, ಇನ್ನೂ ಪತ್ತೆಯಾಗಿಲ್ಲ. ಹಲ್ಲೆ ನಡೆಸಿದ ಆರೋಪಿಗಳನ್ನು ರಾಕೇಶ್, ರೋಹನ್ ಮತ್ತು ಅಜಯ್ ಎಂದು ಗುರುತಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ʼದೈನಿಕ್ ಭಾಸ್ಕರ್ʼ ಪತ್ರಿಕೆಯ ವರದಿ ಪ್ರಕಾರ, ಬಂಧಿತರ ಹೆಸರುಗಳು ರಾಕೇಶ್ ರಾವ್, ಅಜಯ್ ಪರೇಟಾ ಮತ್ತು ರೋಹನ್ ಸೇನ್ ಎಂದು ತಿಳಿದು ಬಂದಿದೆ.

 

 

 

 

 

 

 

 

ತನಿಖೆಯ ವೇಳೆ ಆರೋಪಿಗಳು ಬಜರಂಗ ದಳದ ಜತೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ತಮ್ಮನ್ನು ಸ್ವಯಂ ಗೋರಕ್ಷಕರು ಎಂದು ಗುರುತಿಸಿಕೊಂಡಿದ್ದು, ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಆಯುಧಗಳ ಪ್ರದರ್ಶನ, ರಸ್ತೆಗಳಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸುವ ವೀಡಿಯೊಗಳು ಕಂಡುಬಂದಿವೆ ಎಂದು altnews.in ವರದಿ ಮಾಡಿದೆ.

ರಾಕೇಶ್ ಮೆಹ್ತಾ ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ “ಬಜರಂಗ ದಳ ಜಿಲ್ಲಾ ಸಂಯೋಜಕ” ಹಾಗೂ “ವಿಎಚ್‌ಪಿ ಬಜರಂಗ ದಳ ಗೋ ಸೇವಾ ಸಮಿತಿ, ಅಕ್ಲೇರಾ” ಜತೆ ಸಂಬಂಧ ಹೊಂದಿರುವುದಾಗಿ ಉಲ್ಲೇಖಿಸಿದ್ದಾನೆ. ರೋಹನ್ ಸೇನ್ ತನ್ನನ್ನು “ವಿಎಚ್‌ಪಿ ಬಜರಂಗ ದಳ ನಗರ ಗೋ ರಕ್ಷಣಾ ಪ್ರಮುಖ್” ಎಂದು ಪರಿಚಯಿಸಿಕೊಂಡಿದ್ದಾನೆ. ಅಜಯ್ ಬಜರಂಗಿಯೂ ಬಜರಂಗ ದಳದೊಂದಿಗೆ ಸಂಪರ್ಕ ಹೊಂದಿರುವುದು ಕಂಡುಬಂದಿದೆ.

 

 

 

ವೈರಲ್ ವೀಡಿಯೊಗಳಲ್ಲಿ ಕಾಣಿಸಿಕೊಂಡ ವ್ಯಕ್ತಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಚಿತ್ರಗಳನ್ನು ಹೋಲಿಸಿದಾಗ, ಈ ಮೂವರೇ ಹಲ್ಲೆಯಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ. ಘಟನೆಯ ದಿನ ಧರಿಸಿದ್ದ ಬಟ್ಟೆಗಳಲ್ಲೇ ಆರೋಪಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಪ್ರಕಟಿಸಿರುವುದು ಪತ್ತೆಯಾಗಿದೆ.

ಆರೋಪಿಗಳಲ್ಲಿ ಇಬ್ಬರು, ವೃದ್ಧ ವ್ಯಕ್ತಿ ಯಾರು ಅಥವಾ ಎಲ್ಲಿಂದ ಬಂದವರು ಎಂಬುದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಕಳೆದ ಎರಡು ದಿನಗಳಿಂದ ಆತ ಗೋಮಾಂಸ ಸೇವಿಸುತ್ತಿದ್ದಾನೆ ಎಂಬ ಮಾಹಿತಿ ಬಂದ ಬಳಿಕ ಸ್ಥಳೀಯರು ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಸಂತ್ರಸ್ತ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂಬುದು ತಿಳಿದುಬಂದಿತು ಎಂದು ಅವರು ಹೇಳಿದ್ದಾರೆ.

 

 

 

ಮತ್ತೊಬ್ಬ ಆರೋಪಿಯು, ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೂ ಸುಮಾರು ಒಂದೂವರೆ ಗಂಟೆಗಳ ಕಾಲ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾನೆ. ಗೋಮಾಂಸ ಸೇವನೆ ಆರೋಪದ ಕುರಿತು ಸಂತ್ರಸ್ಥ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಆದರೆ ಹಲ್ಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಅವರಿಗೆ ಜನವರಿ 5ರಂದು ಜಾಮೀನು ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಪೆ: altnews.in



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News