×
Ad

ಅದಾನಿ ಸಮೂಹಕ್ಕೆ ಲಾಭ ಮಾಡಿಕೊಡಲು ಎಲ್ಐಸಿಯ 30 ಕೋಟಿ ಪಾಲಿಸಿದಾರರ ಉಳಿತಾಯ ದುರುಪಯೋಗ: ಕಾಂಗ್ರೆಸ್ ಆರೋಪ

Update: 2025-10-25 12:58 IST

Photo credit: aajtak.in

ಹೊಸದಿಲ್ಲಿ : ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) 30 ಕೋಟಿ ಪಾಲಿಸಿದಾರರ ಉಳಿತಾಯವನ್ನು ಅದಾನಿ ಸಮೂಹಕ್ಕೆ ಲಾಭವಾಗುವಂತೆ ಯೋಜಿತವಾಗಿ ದುರುಪಯೋಗ ಮಾಡಲಾಗಿದೆ ಕಾಂಗ್ರೆಸ್ ಆರೋಪಿಸಿದೆ.

ಎಲ್ಐಸಿಯನ್ನು ಅದಾನಿ ಕಂಪೆನಿಗಳಲ್ಲಿ ಹೂಡಿಕೆ ಮಾಡಲು ಬಲವಂತ ಮಾಡಿರುವ ಬಗ್ಗೆ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ತನಿಖೆ ಮಾಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಕಾಂಗ್ರೆಸ್ ಆರೋಪಗಳಿಗೆ ಅದಾನಿ ಸಮೂಹ ಅಥವಾ ಸರಕಾರ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಾಂಗ್ರೆಸ್‌ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಈ ಕುರಿತು ಪ್ರತಿಕ್ರಿಯಿಸಿ, ‘ಮೊದಾನಿ’ ಜಂಟಿ ಯೋಜನೆ ಎಲ್ಐಸಿಯ ಹಣವನ್ನು ಮತ್ತು 30 ಕೋಟಿ ಪಾಲಿಸಿದಾರರ ಉಳಿತಾಯವನ್ನು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ಗೊಂದಲದ ವರದಿಗಳು ಹೊರಬಂದಿವೆ. 2025ರ ಮೇ ತಿಂಗಳಲ್ಲಿ ಎಲ್ಐಸಿಯ ಸುಮಾರು 33,000 ಕೋಟಿ ರೂ. ಹಣವನ್ನು ಅದಾನಿ ಸಮೂಹದ ವಿವಿಧ ಕಂಪೆನಿಗಳಲ್ಲಿ ಹೂಡಿಕೆ ಮಾಡಲು ಭಾರತೀಯ ಅಧಿಕಾರಿಗಳು ಪ್ರಸ್ತಾವನೆ ರೂಪಿಸಿರುವುದನ್ನು ಆಂತರಿಕ ದಾಖಲೆಗಳು ಬಹಿರಂಗಪಡಿಸುತ್ತದೆ ಎಂದು ಹೇಳಿದ್ದಾರೆ

ಆರ್ಥಿಕ ವ್ಯವಹಾರಗಳ ಸಚಿವಾಲಯ ಮತ್ತು ನೀತಿ ಆಯೋಗದ ಅಧಿಕಾರಿಗಳು ಯಾವ ಒತ್ತಡದಡಿ ಖಾಸಗಿ ಕಂಪೆನಿಗೆ ನೆರವು ನೀಡಲು ನಿರ್ಧರಿಸಿದರು? ಗಂಭೀರ ಅಪರಾಧ ಆರೋಪಗಳನ್ನು ಎದುರಿಸುತ್ತಿದ್ದ ಕಂಪೆನಿಗೆ ಸರಕಾರ ಸಹಾಯ ಮಾಡುವುದು ‘ಮೊಬೈಲ್ ಫೋನ್ ಬ್ಯಾಂಕಿಂಗ್’ ನ ಮಾದರಿ ಉದಾಹರಣೆಯಲ್ಲವೆ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದರು.

2024ರ ಸೆಪ್ಟೆಂಬರ್ 21ರಂದು ಅಮೆರಿಕದಲ್ಲಿ ಗೌತಮ್ ಅದಾನಿ ಮತ್ತು ಇತರರ ವಿರುದ್ಧ ದೋಷಾರೋಪಣೆ ಬಳಿಕ ಕೇವಲ ನಾಲ್ಕು ಗಂಟೆಗಳ ವ್ಯವಹಾರದಲ್ಲಿ ಎಲ್ಐಸಿಗೆ 7,850 ಕೋಟಿ ನಷ್ಟವಾಯಿತು. ಅದಾನಿಯವರ ಮೇಲೆ ಭಾರತದಲ್ಲಿ ಸೌರ ವಿದ್ಯುತ್ ಒಪ್ಪಂದ ಪಡೆಯಲು 2,000 ಕೋಟಿ ಲಂಚ ನೀಡಿದ ಆರೋಪವಿದೆ. ಮೋದಿ ಸರಕಾರ ಸುಮಾರು ಒಂದು ವರ್ಷದಿಂದ ಅದಾನಿ ಸಮೂಹಕ್ಕೆ ಯುಎಸ್ ಎಸ್ಇಸಿ ಸಮನ್ಸ್ ನೀಡಲು ನಿರಾಕರಿಸಿದೆ ಎಂದು ರಮೇಶ್ ಹೇಳಿದರು.

ಮೋದಾನಿ ಮೆಗಾ ಹಗರಣ ಬಹಳ ವ್ಯಾಪಕವಾಗಿದೆ. ಈಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಇತರ ಖಾಸಗಿ ಕಂಪೆನಿಗಳಿಗೆ ತಮ್ಮ ಆಸ್ತಿಗಳನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ವಿಮಾನ ನಿಲ್ದಾಣಗಳು ಮತ್ತು ಬಂದರುಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಅದಾನಿ ಗುಂಪಿನ ಲಾಭಕ್ಕಾಗಿ ಖಾಸಗೀಕರಣ ಮಾಡಲಾಗಿದೆ. ಭಾರತದ ರಾಜತಾಂತ್ರಿಕ ಸಂಪನ್ಮೂಲಗಳನ್ನೂ ದುರುಪಯೋಗ ಮಾಡಿ ವಿಶೇಷವಾಗಿ ಭಾರತದ ನೆರೆ ಹೊರೆಯ ದೇಶಗಳಲ್ಲಿ ಅದಾನಿ ಸಮೂಹಕ್ಕೆ ಒಪ್ಪಂದಗಳನ್ನು ತಲುಪುವಂತೆ ಮಾಡಲಾಗಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದರು.

ಈ ಮೋದಾನಿ ಮೆಗಾ ಹಗರಣವನ್ನು ಸಂಸತ್ತಿನ ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆ ಮಾಡಬೇಕು, ಈ ಬಗ್ಗೆ ನಾವು ಕಳೆದ ಮೂರು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ ಎಂದು ಜೈರಾಮ್ ರಮೇಶ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News