×
Ad

ಎಸ್‌ಐಆರ್ ಕಾನೂನುಬಾಹಿರವಾದರೆ ಸೆಪ್ಟಂಬರ್‌ ನಲ್ಲೂ ರದ್ದುಪಡಿಸಬಹುದು: ಸುಪ್ರೀಂ ಕೋರ್ಟ್

Update: 2025-08-12 20:52 IST

ಸುಪ್ರೀಂ ಕೋರ್ಟ್ | PTI 

ಹೊಸದಿಲ್ಲಿ, ಆ. 12: ಬಿಹಾರದಲ್ಲಿ ಪ್ರಸಕ್ತ ನಡೆಯುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಶೀಲನೆ’ (ಎಸ್‌ಐಆರ್)ಯು ಕಾನೂನುಬಾಹಿರ ಎನ್ನುವುದು ಸಾಬೀತಾದರೆ, ಅದರ ಫಲಿತಾಂಶವನ್ನು ಸೆಪ್ಟಂಬರ್‌ ನಲ್ಲೂ ರದ್ದುಪಡಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಕೇವಲ ತಿಂಗಳುಗಳು ಬಾಕಿಯಿರುವಾಗ ಚುನಾವಣಾ ಆಯೋಗವು ನಡೆಸುತ್ತಿರುವ ಈ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಹಲವರು ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇಂಥ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗಕ್ಕೆ ಸಾಂವಿಧಾನಿಕ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಸ್ವತಃ ಚುನಾವಣಾ ಆಯೋಗವೇ ನೀಡಿರುವ ಮತದಾರರ ಗುರುತುಚೀಟಿಯೂ ಓರ್ವ ಮತದಾರನು ತಾನು ಭಾರತೀಯ ಪ್ರಜೆ ಎನ್ನುವುದನ್ನು ಸಾಬೀತು ಪಡಿಸುವ ದಾಖಲೆಯಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಪೌರತ್ವವನ್ನು ನಿರ್ಧರಿಸುವುದು ಕೇಂದ್ರ ಗೃಹ ಸಚಿವಾಲಯದ ಕಾರ್ಯವ್ಯಾಪ್ತಿಗೆ ಬರುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

►ಆಧಾರ್ ಪೌರತ್ವಕ್ಕೆ ಪುರಾವೆ ಅಲ್ಲ

ಅದೇ ವೇಳೆ, ಆಧಾರನ್ನು ಪೌರತ್ವಕ್ಕೆ ಪುರಾವೆ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದ ನ್ಯಾಯಾಧೀಶ ಸೂರ್ಯಕಾಂತ್ ಹೇಳಿದರು.

ಮತದಾರರ ಪಟ್ಟಿಗೆ ನಾಗರಿಕರನ್ನು ಸೇರಿಸುವುದು ಮತ್ತು ನಾಗರಿಕರಲ್ಲದವರನ್ನು ಕೈಬಿಡುವುದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂಬುದಾಗಿಯೂ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

‘‘ಆಧಾರ್ ಕಾರ್ಡ್ ಪೌರತ್ವದ ಪುರಾವೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆಯೇ? ಪುರಾವೆ ಅಲ್ಲವೆಂದು ಆಧಾರ್ ಕಾಯ್ದೆ ಹೇಳುತ್ತದೆ’’ ಎಂದು ನ್ಯಾ. ಸೂರ್ಯಕಾಂತ್ ಹೇಳಿದರು.

‘‘ಪೌರತ್ವಕ್ಕೆ ನಿರ್ಣಾಯಕ ಪುರಾವೆಯಾಗಿ ಆಧಾರನ್ನು ಸ್ವೀಕರಿಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳುವುದು ಸರಿಯಾಗಿಯೇ ಇದೆ. ಅದನ್ನು ಪರಿಶೀಲಿಸಬೇಕಾಗಿದೆ. ಆಧಾರ್ ಕಾಯ್ದೆಯ 9ನೇ ಪರಿಚ್ಛೇದವನ್ನು ನೋಡಿ’’ ಎಂದು ನ್ಯಾಯಾಧೀಶರು ಹೇಳಿದರು.

ಪೌರತ್ವಕ್ಕೆ ಪುರಾವೆಯಾಗಿ ಚುನಾವಣಾ ಆಯೋಗ ಕೋರಿರುವ ದಾಖಲೆಗಳ ಪೈಕಿ ಹೆಚ್ಚಿನವು ಬಿಹಾರದ ಜನರಲ್ಲಿ ಇಲ್ಲ ಎಂಬ ಅರ್ಜಿದಾರರ ವಾದವನ್ನೂ ನ್ಯಾಯಾಲಯ ಒಪ್ಪಲಿಲ್ಲ. ‘‘ಇದೊಂದು ವಿಶ್ವಾಸ ಕೊರತೆಯ ಪ್ರಕರಣ, ಅಷ್ಟೆ’’ ಎಂದು ಹೇಳಿತು.

ತಪಾಸಣಾ ಕಸರತ್ತನ್ನು ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆಯೇ ಎನ್ನುವುದನ್ನು ಮೊದಲು ಇತ್ಯರ್ಥ ಪಡಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು. ‘‘ಅದಕ್ಕೆ ಈ ಅಧಿಕಾರ ಇಲ್ಲದಿದ್ದರೆ, ಅಲ್ಲಿಗೆ ಎಲ್ಲವೂ ಮುಗಿಯುತ್ತದೆ. ಆದರೆ, ಅವರಿಗೆ ಅಧಿಕಾರವಿದ್ದರೆ, ಬೇರೆ ಸಮಸ್ಯೆ ಇಲ್ಲ’’ ಎಂದು ನ್ಯಾ. ಸೂರ್ಯಕಾಂತ್ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News