×
Ad

ಬಿಜೆಪಿ ಸಂಸದ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೋರಿದ್ದ ಪಿಐಎಲ್‌ಗೆ ಸುಪ್ರೀಂ ಕೋರ್ಟ್ ತಿರಸ್ಕಾರ

Update: 2025-05-05 20:51 IST

ಹೊಸದಿಲ್ಲಿ: ದೇಶದ ಅತ್ಯುನ್ನತ ನ್ಯಾಯಾಲಯ ಮತ್ತು ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ)ರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಬಿಜೆಪಿ ಸಂಸದ ನಿಶಿಕಾಂತ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ತಾನು ವಿಚಾರಣೆಗೆ ಅಂಗೀಕರಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಿಳಿಸಿದೆ.

ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ‘ಸರ್ವೋಚ್ಚ ನ್ಯಾಯಾಲಯವು ದೇಶವನ್ನು ಅರಾಜಕತೆಯತ್ತ ತಳ್ಳುತ್ತಿದೆ ಮತ್ತು ದೇಶದಲ್ಲಿ ನಡೆಯುತ್ತಿರುವ ಅಂತರ್ಯುದ್ಧಗಳಿಗೆ ಸಿಜೆಐ ಸಂಜೀವ ಖನ್ನಾ ಅವರೇ ಹೊಣೆಗಾರರಾಗಿದ್ದಾರೆ ಎಂದು ಹೇಳುವ ಮೂಲಕ ದುಬೆ ವಿವಾದವನ್ನು ಸೃಷ್ಟಿಸಿದ್ದರು.

ಸಂಸ್ಥೆಯ ಘನತೆಯನ್ನು ರಕ್ಷಿಸಬೇಕಿದೆ, ಇದು ಹೀಗೆಯೇ ಮುಂದುವರಿಯಲು ಸಾಧ್ಯವಿಲ್ಲ ಎಂದು ಅರ್ಜಿದಾರರಾದ ವಕೀಲ ವಿಶಾಲ ತಿವಾರಿಯವರು ಸಿಜೆಐ ನೇತೃತ್ವದ ಪೀಠಕ್ಕೆ ತಿಳಿಸಿದರು.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸೇರಿದಂತೆ ಹಲವಾರು ಹಿರಿಯ ವಕೀಲರು ದುಬೆಯವರ ಹೇಳಿಕೆಯನ್ನು ಖಂಡಿಸಿದ್ದಾರೆ ಎನ್ನುವುದನ್ನು ಅವರು ಪೀಠದ ಗಮನಕ್ಕೆ ತಂದರು.

‘ನಾವು ಸಂಕ್ಷಿಪ್ತ ಆದೇಶವೊಂದನ್ನು ಹೊರಡಿಸುತ್ತೇವೆ,ನಾವು ಕೆಲವು ಕಾರಣಗಳನ್ನೂ ನೀಡುತ್ತೇವೆ. ಅರ್ಜಿಯನ್ನು ನಾವು ಅಂಗೀಕರಿಸುವುದಿಲ್ಲ,ಆದರೆ ಸಂಕ್ಷಿಪ್ತ ಆದೇಶವನ್ನು ನೀಡುತ್ತೇವೆ’ ಎಂದು ಸಿಜೆಐ ಖನ್ನಾ ಹೇಳಿದರು.

ಜಾರ್ಖಂಡ್‌ನ ಗೊಡ್ಡಾ ಕ್ಷೇತ್ರದ ಸಂಸದರಾದ ನಿಶಿಕಾಂತ ದುಬೆ ಅವರು ಸಿಜೆಐ ಖನ್ನಾ ಮತ್ತು ದೇಶದ ಅತ್ಯುನ್ನತ ನ್ಯಾಯಾಲಯದ ವಿರುದ್ಧ ಅತ್ಯಂತ ಪ್ರಚೋದನಕಾರಿ, ದ್ವೇಷಪೂರಿತ ಮತ್ತು ನಿಂದನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಅವರ ಸಂದರ್ಶನವು ನ್ಯಾಯಾಂಗ ಮತ್ತು ಸರ್ವೋಚ್ಚ ನ್ಯಾಯಾಲಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಂದ ತುಂಬಿದೆ. ಇಂತಹ ಕೃತ್ಯವು ಭಾರತೀಯ ನ್ಯಾಯ ಸಂಹಿತಾ(ಬಿಎನ್‌ಎಸ್) ಮತ್ತು 1971ರ ನ್ಯಾಯಾಲಯ ನಿಂದನೆ ಕಾಯ್ದೆಯ ಕಲಂ 15ರಡಿ ಶಿಕ್ಷಾರ್ಹ ಅಪರಾ‘ವಾಗಿದೆ ಎಂದು ಪಿಐಎಲ್‌ನಲ್ಲಿ ವಾದಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯ ಮತ್ತು ಅದರ ನ್ಯಾಯಾಧೀಶರ ಘನತೆಯ ರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿರುವ ಪಿಐಎಲ್, ಸಂವಿಧಾನದ ವಿಧಿ 129ರಡಿ ಅಧಿಕಾರವನ್ನು ಬಳಸಿಕೊಂಡು ನ್ಯಾಯಾಂಗ ನಿಂದನೆಗಾಗಿ ಸಂಸದ ದುಬೆಯವರನ್ನು ಶಿಕ್ಷಿಸುವಂತೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News