ತೆಲಂಗಾಣ: ಮೊಂಥಾ ಚಂಡಮಾರುತಕ್ಕೆ ಆರು ಮಂದಿ ಬಲಿ; ಓರ್ವ ನಾಪತ್ತೆ
PC: x.com/TheSiasatDaily
ವಾರಂಗಲ್/ ಹೈದರಾಬಾದ್: ಮೊಂಥಾ ಚಂಡಮಾರುತದ ಅಬ್ಬರಕ್ಕೆ ತೆಲಂಗಾಣದ ಹನ್ನೆರಡು ಜಿಲ್ಲೆಗಳು ತತ್ತರಿಸಿದ್ದು, ಧಾರಾಕಾರ ಮಳೆ, ಪ್ರವಾಹ, ಸಂಚಾರ ಅಸ್ತವ್ಯಸ್ತ, ಮರಗಳು ಉರುಳಿ ಬಿದ್ದಿರುವ ಘಟನೆಗಳಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ.
ವಾರಂಗಲ್ ಹಾಗೂ ರಂಗಾರೆಡ್ಡಿ ಜಿಲ್ಲೆಯಲ್ಲಿ ತಲಾ ಇಬ್ಬರು ಮೃತಪಟ್ಟಿದ್ದರೆ, ಮೆಹಬೂಬಾಬಾದ್ ಮತ್ತು ಸೂರ್ಯಪೇಟೆ ಜಿಲ್ಲೆಗಳಲ್ಲಿ ತಲಾ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ಮತ್ತೊಬ್ಬ ರಸ್ತೆ ಮತ್ತು ಕಟ್ಟಡಗಳ ಇಲಾಖೆಯ ನಿವೃತ್ತ ಉದ್ಯೋಗಿ ಮೃತಪಟ್ಟಿರುವ ಶಂಕೆ ಇದ್ದು, ರಕ್ಷಣಾ ತಂಡಗಳು ಆತನಿಗಾಗಿ ಶೋಧ ಮುಂದುವರಿಸಿವೆ.
ವಾರಂಗಲ್ ಹಾಗೂ ಹನುಮಕೊಂಡಗಳಲ್ಲಿ ಕಳೆದ 24 ಗಂಟೆಗಳಲ್ಲಿ 300 ಮಿಲಿಮೀಟರ್ ಮಳೆ ದಾಖಲಾಗಿದ್ದು, ಇದು ಒಂದೇ ದಿನದಲ್ಲಿ ಈ ವರ್ಷ ದಾಖಲಾದ ಗರಿಷ್ಠ ಮಳೆಯಾಗಿದೆ.
ಮನೆಯ ಒಳಕ್ಕೆ ನೀರು ನುಗ್ಗಿ ಸಂಭವಿಸಿದ ದುರಂತದಲ್ಲಿ ಅಸ್ವಸ್ಥರಾಗಿದ್ದ 65 ವರ್ಷದ ಅಡಪ ಕೃಷ್ಣಮೂರ್ತಿ ಮೃತಪಟ್ಟಿದ್ದಾರೆ. "ವ್ಯಾಪಕ ಮಳೆಯಾಗುತ್ತಿದ್ದಾಗ ಅವರು ಗಾಢ ನಿದ್ದೆಯಲ್ಲಿದ್ದರು. ಮನೆಗೆ ಈ ಸಂದರ್ಭ ನೀರು ನುಗ್ಗಿದ್ದು, ಗುರುವಾರ ಬೆಳಿಗ್ಗೆ ಗ್ರಾಮಸ್ಥರು ಅವರ ಬಗ್ಗೆ ಮಾಹಿತಿ ನೀಡಿದ್ದರು. ರಕ್ಷಣಾ ತಂಡ ಅಲ್ಲಿಗೆ ಧಾವಿಸಿದಾಗ ಅವರು ಮೃತಪಟ್ಟಿರುವುದು ಕಂಡುಬಂದಿದೆ" ಎಂದು ಇನ್ಸ್ಪೆಕ್ಟರ್ ಜೆ.ಸುರೇಶ್ ವಿವರಿಸಿದ್ದಾರೆ.
ಜಿಲ್ಲೆಯ ಶಿವನಗರದಲ್ಲಿ ಆಟೊ ಚಾಲಕ ಪಿ.ಅನಿಲ್ ಎಂಬುವವರು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಗೀಸುಕೊಂಡ ಮುಖ್ಯರಸ್ತೆಯಲ್ಲಿ ಹರಿಯುತ್ತಿದ್ದ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೆರೆ ನೀರಿನಿಂದ ಮನೆಯ ಸಾಮಾನು ಸರಂಜಾಮುಗಳನ್ನು ರಕ್ಷಿಸುವ ಪ್ರಯತ್ನದಲ್ಲಿದ್ದ ಹನುಮಕೊಂಡ ಟಿವಿ ಟವರ್ ನಿವಾಸಿ ಪಿ.ಶ್ರೀನಿವಾಸ (63) ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬೇಕು ಎಂದು ಶಂಕಿಸಲಾಗಿದ್ದು, ಅವರ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಮನೆಯ ಗೋಡೆ ಕುಸಿದು ಮಹಬೂಬಾಬಾದ್ ನಲ್ಲಿ 80 ವರ್ಷ ವಯಸ್ಸಿನ ಕೋಲಾ ರಾಮಕ್ಕ ಮೃತಪಟ್ಟಿದ್ದರೆ, ಯಡಾದ್ರಿ ಭುವನಗಿರಿ ಜಿಲ್ಲೆಯ ನಂದನಮ್ ಎಂಬಲ್ಲಿ ನೀರಿನಲ್ಲಿ ಮುಳುಗಿ ಕೃಷ್ಣವೇಣಿ (45) ಎಂಬ ಮಹಿಳೆ ಜೀವ ಕಳೆದುಕೊಂಡಿದ್ದಾರೆ.