ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ | ಅಮೆರಿಕ ದಾಳಿಗೆ ಪ್ರತಿಯಾಗಿ ಜೋರ್ಡಾನ್, ಬಹರೈನ್, ಕುವೈತ್, ಖತರ್ ಮೇಲೆ ದಾಳಿ: ಇರಾನ್ ಹೇಳಿಕೆ
ಸಾಂದರ್ಭಿಕ ಚಿತ್ರ (X/@RT_India_news)
ಟೆಹ್ರಾನ್, ಜು. 12: ಅಮೆರಿಕವು ಈ ವಾರ ಇರಾನ್ ವಿರುದ್ಧ ಮೂರನೇ ಸುತ್ತಿನ ವಾಯುದಾಳಿಗಳನ್ನು ಘೋಷಿಸಿದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಜೋರ್ಡಾನ್, ಬಹರೈನ್, ಕುವೈತ್ ಹಾಗೂ ಖತರ್ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ತನ್ನತ್ತ ಬಂದ ಇರಾನಿನ ಕ್ಷಿಪಣಿಗಳು ಹಾಗೂ ಡ್ರೋನ್ ಬೆದರಿಕೆಗಳನ್ನು ತಡೆದಿರುವುದಾಗಿ ವರದಿಯಾಗಿದೆ.
ಹಾರ್ಮುಝ್ ಜಲಸಂಧಿಯಲ್ಲಿ ಸೈಪ್ರಸ್ ಧ್ವಜ ಹೊಂದಿದ್ದ ಕಂಟೇನರ್ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಆರೋಪಿಸಿ ಅಮೆರಿಕ ಮೂರನೇ ಸುತ್ತಿನ ದಾಳಿಗಳನ್ನು ಘೋಷಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ.
ಕುವೈತ್‌ನ ಸಶಸ್ತ್ರ ಪಡೆಗಳು ತಮ್ಮ ವಾಯುಪ್ರದೇಶಕ್ಕೆ ಪ್ರವೇಶಿಸಿದ್ದ ಪ್ರತಿಕೂಲ ವೈಮಾನಿಕ ಗುರಿಗಳನ್ನು ತಡೆದಿರುವುದಾಗಿ ತಿಳಿಸಿವೆ. ಆದರೆ, ಎಷ್ಟು ಗುರಿಗಳನ್ನು ತಡೆದಿವೆ ಅಥವಾ ಅವು ಯಾವ ದೇಶದಿಂದ ಬಂದಿದ್ದವು ಎಂಬ ಕುರಿತು ಅಧಿಕಾರಿಗಳು ಯಾವುದೇ ವಿವರ ನೀಡಿಲ್ಲ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹಾರ್ಮುಝ್ ಜಲಸಂಧಿಯಲ್ಲಿ ಎರಡನೇ 'ಆಕ್ರಮಣಕಾರಿ ಹಡಗು' ಮೇಲೆ ದಾಳಿ ನಡೆಸಿ ಅದನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿದೆ. ಅಮೆರಿಕ ಮತ್ತು ಇಸ್ರೇಲ್‌ನ 'ಆಕ್ರಮಣ' ಮುಂದುವರಿದರೆ ಇನ್ನಷ್ಟು ವಿನಾಶಕಾರಿ ಪ್ರತಿಕ್ರಿಯೆ ನೀಡಲಾಗುವುದು ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ ಎಂದು Aljazeera ವರದಿ ಮಾಡಿದೆ.
ಐಆರ್‌ಜಿಸಿ ಮತ್ತೊಂದು ಹೇಳಿಕೆಯಲ್ಲಿ, ಖತರ್‌ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿರುವುದಾಗಿ ತಿಳಿಸಿದೆ. ದಾಳಿಯಲ್ಲಿ ಯುದ್ಧ ವಿಮಾನ ನಿರ್ವಹಣಾ ಕೇಂದ್ರ ಹಾಗೂ ಕಮಾಂಡ್-ಆ್ಯಂಡ್-ಕಂಟ್ರೋಲ್ ಕೇಂದ್ರ ನಾಶಗೊಂಡಿವೆ ಎಂದು ಅದು ಹೇಳಿಕೊಂಡಿದೆ.
ಈ ನಡುವೆ, ಯುಎಇ ಮತ್ತು ಖತರ್ ಕ್ಷಿಪಣಿ ಬೆದರಿಕೆಗಳಿಗೆ ಪ್ರತಿಕ್ರಿಯಿಸಿವೆ. ಕುವೈತ್ ಹಾಗೂ ಬಹರೈನ್ ನಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿರುವುದಾಗಿ ವರದಿಗಳು ತಿಳಿಸಿವೆ.