ಅಸ್ಸಾಂ ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ: ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ
Update: 2023-08-03 17:57 IST
Photo: thewire.in
ಗುವಹಾಟಿ: ಅಸ್ಸಾಂನ ದರ್ರಂಗ್ ಜಿಲ್ಲೆಯ ಶಾಲೆಯೊಂದರಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ಆಯೋಜಿಸಿದ್ದ ಇಬ್ಬರು ಬಜರಂಗದಳ ಸದಸ್ಯರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಬಿಜೊಯ್ ಘೋಷ್ ಮತ್ತು ಗೋಪಾಲ್ ಬೋರೋ ಎಂದು ಗುರುತಿಸಲಾಗಿದೆ ಎಂದು ದರ್ರಂಗ್ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸೋನೋವಾಲ್ ತಿಳಿಸಿದ್ದಾರೆ.
ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಶಾಮೀಲಾಗಿರುವ ಇತರರನ್ನು ಬಂಧಿಸಲು ತನಿಖೆ ಜಾರಿಯಲ್ಲಿದೆ ಎಂದು ಅವರು ಹೇಳಿದರು.
ಶಿಬಿರವು ಮಂಗಲದೋಯಿ ಪಟ್ಟಣದ ಮಹರ್ಷಿ ವಿದ್ಯಾ ಮಂದಿರ ಶಾಲೆಯಲ್ಲಿ ಜುಲೈ 24ರಿಂದ 30ರ ತನಕ ನಡೆದಿತ್ತು ಹಾಗೂ 350ಕ್ಕೂ ಅಧಿಕ ಮಂದಿ ಇದರಲ್ಲಿ ಭಾಗವಹಿಸಿದ್ದರು.
ಈ ಶಿಬಿರದಲ್ಲಿ ಯುವಕರು ಬಂದೂಕುಗಳನ್ನು ಬಳಸಲು ತರಬೇತಿ ಪಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ವಿಚಾರ ವಿಪಕ್ಷಗಳಿಂದ ಟೀಕೆಗೂ ಗುರಿಯಾಗಿತ್ತು.