×
Ad

ಸಂಘಪರಿವಾರದಿಂದ ದೂರು; ಉತ್ತರ ಪ್ರದೇಶ ಸರಕಾರದಿಂದ ಅಯೋಧ್ಯೆ, ಬಾರಾಬಂಕಿಯಲ್ಲಿ ಉರೂಸ್‌ ಗೆ ತಡೆ

Update: 2025-06-14 20:53 IST

ಯೋಗಿ ಆದಿತ್ಯನಾಥ್ | PC : PTI 

ಹೊಸದಿಲ್ಲಿ: ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ತಲೆದೋರಲಿದೆ ಎಂಬ ಕಾರಣ ಮುಂದೊಡ್ಡಿ, ಉತ್ತರ ಪ್ರದೇಶ ಸರಕಾರದ ಪ್ರಾಧಿಕಾರಗಳು ಅಯೋಧ್ಯೆ ಹಾಗೂ ಬಾರಾಬಂಕಿಯಲ್ಲಿ ನಡೆಯಬೇಕಿದ್ದ ವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿವೆ ಎಂದು ವರದಿಯಾಗಿದೆ.

ಸಂಘಪರಿವಾರದ ವಿಶ್ವ ಹಿಂದೂ ಪರಿಷತ್ ದೂರು ನೀಡಿದ ನಂತರ, ಅಯೋಧ್ಯೆಯ ಖಾನ್ಪುರ್ ಮಸೋಧಾ ಪ್ರದೇಶದ ದಾದಾ ಮಿಯಾ ಮಸೀದಿಯಲ್ಲಿ ನಡೆಯಬೇಕಿದ್ದ ಉರೂಸ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು The Times of India ವರದಿ ಮಾಡಿದೆ.

ಮತ್ತೊಂದೆಡೆ, ಫೂಲ್ಪುರ್ ಪ್ರದೇಶದಲ್ಲಿ ನಡೆಯಬೇಕಿದ್ದ ಸೈಯದ್ ಶಕೀಲ್ ಬಾಬಾರ ಉರೂಸ್‌ ನಿಂದ ಭಾರಿ ಪ್ರಮಾಣದ ಅಶಾಂತಿ ತಲೆದೋರುವ ಸಾಧ್ಯತೆ ಇದೆ ಎಂಬ ಕಾರಣವನ್ನು ಮುಂದೊಡ್ಡಿ ಅನುಮತಿ ನಿರಾಕರಿಸಲಾಗಿದೆ ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಯೋಧ್ಯೆಯಲ್ಲಿ ಘಜ್ನಿ ಆಡಳಿತಗಾರ ಮಹ್ಮೂದ್‌ ಸೋದರಳಿಯ ಎಂದೇ ವ್ಯಾಪಕವಾಗಿ ನಂಬಲಾಗಿರುವ 11ನೇ ಶತಮಾನದ ಅರೆ ದಂತಕತೆ ಯೋಧ ಹಾಗೂ ಘಾಝಿ ಬಾಬಾ ಎಂದೇ ಹೆಸರಾಗಿರುವ ಸೈಯದ್ ಸಲಾರ್ ಮಸೂದ್ ಅವರ ಹೆಸರಿನಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ದೂರುದಾರರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಯೋಧ್ಯೆಯ ವೃತ್ತಾಧಿಕಾರಿ ಅಶುತೋಷ್ ತಿವಾರಿ, ಉರೂಸ್ ದಾದಾ ಮಿಯಾ ಹೆಸರಿನಲ್ಲಿ ಉರೂಸ್ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತಾದರೂ, ಈ ಕಾರ್ಯಕ್ರಮವನ್ನು ಘಾಝಿ ಬಾಬಾ ಹೆಸರಿನಲ್ಲಿ ಆಯೋಜಿಸುತ್ತಿರುವುದು ಕಂಡು ಬಂದಿರುವುದರಿಂದ, ಅನುಮತಿಯನ್ನು ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ, ಕಳೆದ ಮಾರ್ಚ್ ತಿಂಗಳಲ್ಲಿ ಸೈಯದ್ ಸಲಾರ್ ಮಸೂದ್ ಘಾಝಿ ಸ್ಮರಣಾರ್ಥ ಮುಸ್ಲಿಂ ಸಮುದಾಯ ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ನೇಜಾ ಮೇಳ ಉತ್ಸವಕ್ಕೆ ಸಂಭಾಲ್ ಪೊಲೀಸರು ಅನುಮತಿ ನಿರಾಕರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News