×
Ad

UPSC ಪರೀಕ್ಷೆ: 301ನೇ ರ‍್ಯಾಂಕ್‌ಗೆ ಒಂದೇ ಹೆಸರಿನ ಇಬ್ಬರು ಅಭ್ಯರ್ಥಿಗಳಿಂದ ಹಕ್ಕು ಮಂಡನೆ : ವಿವಾದ ಸೃಷ್ಟಿ

Update: 2026-03-08 20:35 IST

Photo Credit :  ITG

ಪಾಟ್ನಾ,ಮಾ.8: ಯುಪಿಎಸ್‌ಸಿ ಫಲಿತಾಂಶ ಘೋಷಣೆಯ ಬಳಿಕ ಎರಡು ವಿಭಿನ್ನ ರಾಜ್ಯಗಳ ಇಬ್ಬರು ಮಹಿಳೆಯರು ಒಂದೇ ಶ್ರೇಯಾಂಕದ ಮೇಲೆ ಹಕ್ಕು ಮಂಡಿಸಿರುವುದು ವಿವಾದವನ್ನು ಸೃಷ್ಟಿಸಿದೆ. 301ನೇ ರ್ಯಾಂಕ್ ವಿವಾದದ ಕೇಂದ್ರಬಿಂದುವಾಗಿದ್ದು,ಆಕಾಂಕ್ಷಾ ಸಿಂಗ್ ಹೆಸರಿನ ಇಬ್ಬರು ಅಭ್ಯರ್ಥಿಗಳು ರ್ಯಾಂಕ್ ತನಗೇ ಬಂದಿದೆ ಎಂದು ಪ್ರತಿಪಾದಿಸಿದ್ದಾರೆ.

ಒಂದೆಡೆ ನಿಷೇಧಿತ ಸಂಘಟನೆ ರಣವೀರ ಸೇನಾದ ಸ್ಥಾಪಕ ಬ್ರಹ್ಮೇಶ್ವರ ಸಿಂಗ್ ಅವರ ಮೊಮ್ಮಗಳು, ಬಿಹಾರದ ಆರಾ ನಿವಾಸಿ ಆಕಾಂಕ್ಷಾ ಸಿಂಗ್ 301ನೇ ರ್ಯಾಂಕ್ ಪಡೆದಿದ್ದಾರೆ ಎಂದು ವ್ಯಾಪಕವಾಗಿ ವರದಿಯಾಗಿದ್ದರೆ, ಇನ್ನೊಂದೆಡೆ ಉತ್ತರ ಪ್ರದೇಶದ ಘಾಝಿಪುರ ನಿವಾಸಿ ಆಕಾಂಕ್ಷಾ ಸಿಂಗ್ ಹೆಸರಿನ ಇನ್ನೋರ್ವ ಅಭ್ಯರ್ಥಿ ಈ ರ್ಯಾಂಕ್ ತನಗೆ ಸೇರಿದ್ದು ಎಂದು ಪ್ರತಿಪಾದಿಸಿದ್ದಾರೆ.

ಒಂದೇ ಹೆಸರು ಮತ್ತು ರೋಲ್ ನಂಬರ್ ಇರುವ ಪ್ರವೇಶ ಪತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ವಿವಾದವು ತೀವ್ರಗೊಂಡಿದ್ದು, ವಿಷಯವು ಇನ್ನಷ್ಟು ಜಟಿಲಗೊಂಡಿದೆ. ಈಗ ಎಲ್ಲರ ಗಮನ ಯುಪಿಎಸ್‌ಸಿಯ ಅಧಿಕೃತ ಸ್ಪಷ್ಟನೆಯ ಮೇಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮೇಶ್ವರ ಸಿಂಗ್ ಮೊಮ್ಮಗಳು ಆಕಾಂಕ್ಷಾ,‘ನನ್ನ ಎರಡನೇ ಪ್ರಯತ್ನದಲ್ಲಿ 2025ರ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 301ನೇ ರ್ಯಾಂಕ್ ಪಡೆದಿದ್ದೇನೆ. ಇದು ನನ್ನ ಅಜ್ಜನ ಕನಸಾಗಿತ್ತು,ಅವರು ನನ್ನಲ್ಲಿ ಬಹಳಷ್ಟು ನಂಬಿಕೆಯಿಟ್ಟಿದ್ದರು’ಎಂದು ಹೇಳಿದರು. ಬ್ರಹ್ಮೇಶ್ವರ ಸಿಂಗ್ ಅವರನ್ನು 2012ರಲ್ಲಿ ಹತ್ಯೆ ಮಾಡಲಾಗಿತ್ತು.

ಈ ನಡುವೆ ಘಾಜಿಪುರದ ಆಕಾಂಕ್ಷಾ ಸಿಂಗ್ ‘ನನ್ನ ರ್ಯಾಂಕ್ ಮತ್ತು ಗುರುತನ್ನು ಬೇರೊಬ್ಬರು ತನ್ನದೆಂದು ಹೇಳಿಕೊಳ್ಳುತಿರುವುದು ಬೆಳಕಿಗೆ ಬಂದಿದೆ ’ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ. ತನ್ನ ಮೂಲ ಐಡಿ ಮತ್ತು ಇ-ಸಮನ್ ಎಂದು ಹೇಳಿಕೊಂಡಿರುವ ಎರಡು ದಾಖಲೆಗಳನ್ನು ಅವರು ಪೋಸ್ಟ್‌ನೊಂದಿಗೆ ಲಗತ್ತಿಸಿದ್ದಾರೆ.

ಇಬ್ಬರೂ ಅಭ್ಯರ್ಥಿಗಳ ಹೆಸರು ಮತ್ತು ರೋಲ್ ನಂಬರ್‌ಗಳು ಒಂದೇ ಆಗಿದ್ದರೂ ತಂದೆಯ ಹೆಸರುಗಳು ಭಿನ್ನವಾಗಿವೆ.

ಹೆಚ್ಚಿನ ಪ್ರತಿಕ್ರಿಯೆಗಾಗಿ ಘಾಝಿಪುರದ ಆಕಾಂಕ್ಷಾರನ್ನು ಸಂಪರ್ಕಿಸಲು ಸುದ್ದಿಸಂಸ್ಥೆಯು ಪ್ರಯತ್ನಿಸಿತ್ತಾದರೂ ಅದು ಸಾಧ್ಯವಾಗಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News