×
Ad

ಉತ್ತರ ಪ್ರದೇಶ | ಫಿರೋಝಾಬಾದ್‌ನಲ್ಲಿ ಯುವಕನಿಗೆ ಗುಂಡಿಕ್ಕಿದ ಬಂದೂಕು ಬಿಜೆಪಿ ಯುವ ಘಟಕದ ಜಿಲ್ಲಾ ಮುಖ್ಯಸ್ಥನಿಗೆ ಸೇರಿದ್ದು : ಪೊಲೀಸ್ ತನಿಖೆಯಲ್ಲಿ ಬಯಲು

Update: 2025-10-24 17:40 IST

ಸತೀಶ್ ದಿವಾಕರ್ | Photo: X/@DrSatishDiwakar

ಲಕ್ನೋ : ಉತ್ತರ ಪ್ರದೇಶದ ಫಿರೋಝಾಬಾದ್‌ನಲ್ಲಿ 20ರ ಹರೆಯದ ಯುವಕನ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಗಾಯಗೊಳಿಸಿದ್ದರು. ಈ ಕುರಿತು ತನಿಖೆಯ ವೇಳೆ ಗುಂಡಿನ ದಾಳಿಗೆ ಬಳಸಿದ ಬಂದೂಕು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಜಿಲ್ಲಾಧ್ಯಕ್ಷನಿಗೆ ಸೇರಿದ್ದು ಎಂದು ಬಯಲಾಗಿದೆ.

ಬಿಜೆವೈಎಂ ಜಿಲ್ಲಾಧ್ಯಕ್ಷ ಅಂಕಿತ್ ತಿವಾರಿ ಪ್ರಕರಣದಲ್ಲಿ ನೇರ ಭಾಗಿಯಾಗಿರುವುದು ಇಲ್ಲಿಯವರೆಗೆ ಬೆಳಕಿಗೆ ಬಂದಿಲ್ಲವಾದರೂ, ಆತನ ವಿರುದ್ಧ ಮತ್ಸೇನಾ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 30ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಫಿರೋಝಾಬಾದ್ ಪೊಲೀಸರು ತಿಳಿಸಿದ್ದಾರೆ.

ಫಿರೋಝಾಬಾದ್ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ದಿವಾಕರ್ ಅವರು ತಿವಾರಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಅವರಿಗೆ ಯಾವುದೇ ಪಾತ್ರವಿಲ್ಲ ಎಂದು ಹೇಳಿದರು.

ಪೊಲೀಸರ ಪ್ರಕಾರ, ಅಕ್ಟೋಬರ್ 20ರಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಮನ್ವೇಂದ್ರ ಅಲಿಯಾಸ್ ಮೋನು ಎಂಬಾತ ತನ್ನ ತಂದೆ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ ನರ್ಸಿಂಗ್ ಕಾಲೇಜಿಗೆ ಹೋಗಿದ್ದ. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಗುಂಡಕ್ಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಮನ್ವೇಂದ್ರ ಅವರ ಬೆನ್ನಿಗೆ ಗುಂಡು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸ್ಥಳೀಯ ನಿವಾಸಿಗಳಾದ ಸುಮಿತ್ ಕುಮಾರ್ ಮತ್ತು ಸಂಜಯ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ಸೇನಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದ ಆರೋಪದಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿಚಾರಣೆಯ ಸಮಯದಲ್ಲಿ ದಾಳಿಗೆ ಬಳಸಿದ ಶಸ್ತ್ರಾಸ್ತ್ರ ತಿವಾರಿ ಅವರಿಗೆ ಸೇರಿದ್ದು ಎಂದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಿರೋಝಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ದೀಕ್ಷಿತ್ ಈ ಕುರಿತು ಪ್ರತಿಕ್ರಿಯಿಸಿ, ಗುಂಡಿನ ದಾಳಿಯಲ್ಲಿ ತಿವಾರಿ ನೇರವಾಗಿ ಭಾಗಿಯಾಗಿರುವುದು ಇಲ್ಲಿಯವರೆಗೆ ದೃಢಪಟ್ಟಿಲ್ಲ. ಆದರೆ ಪರವಾನಗಿ ಪಡೆದ ಆಯುಧವನ್ನು ಬಳಸಿರುವುದರಿಂದ ಅದನ್ನು ಸುರಕ್ಷಿತವಾಗಿರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News