×
Ad

ಎಲ್ಲಾ ತಪ್ಪುಗಳನ್ನೂ ವಿರೋಧ ಪಕ್ಷಗಳ ಮೇಲೆ ಹಾಕುತ್ತಾರೆ: ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

Update: 2025-12-22 00:12 IST

ಮಲ್ಲಿಕಾರ್ಜುನ ಖರ್ಗೆ | PC : PTI

ಹೊಸದಿಲ್ಲಿ: ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರ ಹಾವಳಿ ಹೆಚ್ಚಾಗಲು ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಕಾರಣ ಎಂಬ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಪ್ರಧಾನಿ ನರೇಂದ್ರ ಮೋದಿ ತಮ್ಮ ವೈಫಲ್ಯಗಳ ಹೊಣೆ ಹೊರುವ ಬದಲು, ವಿರೋಧ ಪಕ್ಷಗಳನ್ನು ದೂಷಿಸುತ್ತಾರೆ” ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿ ಪದೇ ಪದೇ ಡಬಲ್ ಇಂಜಿನ್ ಸರಕಾರದ ಬಗ್ಗೆ ಮಾತನಾಡುತ್ತದೆ. ಹೀಗಿದ್ದೂ ನುಸುಳುವಿಕೆಯ ದೂಷಣೆಯನ್ನು ಕಾಂಗ್ರೆಸ್ ಮೇಲೇಕೆ ವರ್ಗಾಯಿಸುತ್ತಿದೆ ಎಂದು ಅವರು ಚಾಟಿ ಬೀಸಿದ್ದಾರೆ.

“ಅವರೇಕೆ ವಿರೋಧ ಪಕ್ಷಗಳನ್ನು ದೂಷಿಸುತ್ತಿದ್ದಾರೆ? ಡಬಲ್ ಇಂಜಿನ್ ಸರಕಾರ ಎನ್ನಲಾಗುವ ಅವರ ಸರಕಾರ ಕೇಂದ್ರದಲ್ಲೂ ಇದೆ ಹಾಗೂ ಅಸ್ಸಾಂನಲ್ಲೂ ಇದೆ. ಅವರು ಗಡಿಯನ್ನು ರಕ್ಷಿಸಲು ವಿಫಲರಾದರೆ, ಅದಕ್ಕೆ ವಿರೋಧ ಪಕ್ಷಗಳನ್ನೇಕೆ ದೂಷಿಸಬೇಕು? ನಾವೇನಾದರೂ ಅಲ್ಲಿ ಆಡಳಿತ ನಡೆಸುತ್ತಿದ್ದೇವೆಯೆ?” ಎಂದು ಅವರು ಸರಣಿ ಪ್ರಶ್ನೆಗಳನ್ನೆಸೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಸರಕಾರದ ವೈಫಲ್ಯಗಳನ್ನು ವಿರೋಧ ಪಕ್ಷಗಳ ಮೇಲೆ ಹಾಕುವುದನ್ನು ಚಟ ಮಾಡಿಕೊಂಡಿದ್ದಾರೆ ಎಂದೂ ಅವರು ತೀವ್ರವಾಗಿ ಖಂಡಿಸಿದ್ದಾರೆ.

“ಅವರೇನಾದರೂ ವಿಫಲಗೊಂಡರೆ, ಅದೆಲ್ಲವನ್ನೂ ವಿರೋಧ ಪಕ್ಷಗಳ ಮೇಲೆ ಹಾಕುತ್ತಾರೆ. ನಾನು ಇಂತಹ ಹೇಳಿಕೆಯನ್ನು ಖಂಡಿಸುತ್ತೇನೆ. ಅವರು ದೇಶ ದ್ರೋಹಿಗಳೇ ಹೊರತು ನಾವಲ್ಲ. ನಾವು ಯಾರನ್ನೂ ರಕ್ಷಿಸುತ್ತಲೂ ಇಲ್ಲ. ನಾವೆಂದೂ ಭಯೋತ್ಪಾದಕರು, ನುಸುಳುಕೋರರು ಅಥವಾ ಇನ್ನಿತರರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಅವರು ಭಯೋತ್ಪಾದಕರು, ನುಸುಳುಕೋರರನ್ನು ತಡೆಯುವಲ್ಲಿ ವಿಫಲರಾಗಿರುವುದರಿಂದ ಅವರು ದೂಷಿಸುತ್ತಿದ್ದಾರೆ” ಎಂದೂ ಅವರು ಹರಿಹಾಯ್ದಿದ್ದಾರೆ.

ಶನಿವಾರ ನಡೆದ ಗುವಾಹಟಿ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಕಾಂಗ್ರೆಸ್ ಪಕ್ಷವು ದಶಕಗಳ ಕಾಲ ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷಿಸಿತ್ತು. ಈ ಪ್ರಾಂತ್ಯದಲ್ಲಿ ನುಸುಳುಕೋರರು ನೆಲೆಸಲು ಅವಕಾಶ ನೀಡಿತ್ತು. ಆ ಮೂಲಕ, ಈ ಪ್ರಾಂತ್ಯದ ಭದ್ರತೆ ಹಾಗೂ ಸಾಂಸ್ಕೃತಿಕ ಅಸ್ಮಿತೆಗೆ ಬೆದರಿಕೆ ತಂದೊಡ್ಡಿತ್ತು” ಎಂದು ಆರೋಪಿಸಿದ್ದರು.

ಇದೇ ವೇಳೆ ಮತಪಟ್ಟಿಗಳ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಕುರಿತು ಉಲ್ಲೇಖಿಸಿದ್ದ ಪ್ರಧಾನಿ ಮೋದಿ, “ಈ ಅಭಿಯಾನ ನುಸುಳುಕೋರರನ್ನು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಿಂದ ಹೊರಗಿಡುವ ಗುರಿ ಹೊಂದಿದೆ” ಎಂದು ಹೇಳಿದ್ದರು.

“ದೇಶದ್ರೋಹಿಗಳು ನುಸುಳುಕೋರರಿಗೆ ರಕ್ಷಣೆ ನೀಡಲು ಯತ್ನಿಸುತ್ತಿದ್ದಾರೆ. ಆದರೆ, ನುಸುಳುವಿಕೆಯನ್ನು ತಪ್ಪಿಸಲು ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ತ್ತಿದೆ” ಎಂದೂ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News