×
Ad

ಬಾಬಾ ಬುಡಾನ್‌ಗಿರಿ ವ್ಯಾಪ್ತಿಯಲ್ಲಿ ‘ಸೊನೇರಿಲಾ’ ಪ್ರಭೇದದ ಹೊಸ ಸಸ್ಯ ಪತ್ತೆ

ದಾವಣಗೆರೆ ವಿವಿ ವನಸ್ಪತಿ ವಿಭಾಗದ ತಂಡದ ಸಾಧನೆ

Update: 2025-10-20 15:03 IST

ಚಿಕ್ಕಮಗಳೂರು: ಜಿಲ್ಲೆಯ ಪಶ್ಚಿಮಘಟ್ಟ ಗಿರಿಶ್ರೇಣಿಗಳ ಸಾಲಿನಲ್ಲಿರುವ ಬಾಬಾ ಬುಡಾನ್‌ಗಿರಿ, ಮುಳ್ಳಯ್ಯನಗಿರಿ ಗಿರಿಶ್ರೇಣಿಗಳು ಅಪಾರ ಜೀವವೈವಿಧ್ಯತೆಯ ಬೀಡಾಗಿದ್ದು, ನಾಡಿನ ಪ್ರಮುಖ ಪ್ರವಾಸಿ ತಾಣಗಳಾಗಿವೆ.

ಸದ್ಯ ದಾವಣಗೆರೆ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರ ನೇತೃತ್ವದ ತಂಡ ಬಾಬಾ ಬುಡಾನ್‌ಗಿರಿ ಗಿರಿಶ್ರೇಣಿಯ ವ್ಯಾಪ್ತಿಯಲ್ಲಿ ‘ಸೊನೇರಿಲಾ’ ಸಸ್ಯ ಪ್ರಭೇದಕ್ಕೆ ಸೇರಿದ ಹೊಸ ಸಸ್ಯವೊಂದನ್ನು ಪತ್ತೆ ಹಚ್ಚಿದ್ದು, ಇದು ಬಾಬಾ ಬುಡಾನ್‌ಗಿರಿಯ ಕೀರ್ತಿಯನ್ನು ಮತ್ತಷ್ಟು ಬೆಳಗುವಂತೆ ಮಾಡಿದೆ.

ದಾವಣಗೆರೆ ವಿಶ್ವ ವಿದ್ಯಾನಿಲಯದ ವನಸ್ಪತಿ(ಸಸ್ಯಶಾಸ್ತ್ರ) ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿದ್ದಪ್ಪ ಭೀ ಕಕ್ಕಲಮೇಲಿ ಮತ್ತು ಸಂಶೋಧನಾ ವಿದ್ಯಾರ್ಥಿ ಪ್ರಶಾಂತ್ ಕಾರಡಕಟ್ಟಿ ತಂಡ ಪಶ್ಚಿಮಘಟ್ಟ ಪರ್ವತಗಳ ಸಾಲಿನಲ್ಲಿ ಸೊನೇರಿಲಾ ಸಸ್ಯ ಪ್ರಭೇದಕ್ಕೆ ಸೇರಿದ ಒಟ್ಟು ಮೂರು ವರ್ಗದ ಸಸ್ಯಗಳನ್ನು ಪತ್ತೆ ಮಾಡಿದ್ದು, ಒಂದು ಸಸ್ಯವನ್ನು ಬಾಬಾ ಬುಡಾನ್‌ಗಿರಿ ಶ್ರೇಣಿಯ ವ್ಯಾಪ್ತಿಯಲ್ಲಿ ಪತ್ತೆ ಮಾಡಿದ್ದಾರೆ. ಆದ್ದರಿಂದ ಈ ಸಸ್ಯಕ್ಕೆ ‘ಬಾಬಾಬುಡಾನ್ ಗಿರಿಯನ್ಸಿಸ್’ ಎಂದು ನಾಮಕರಣ ಮಾಡಲಾಗಿದೆ.

ಸೊನೇರಿಲಾ ಸಸ್ಯ ಪ್ರಭೇದಕ್ಕೆ ಸೇರಿದ ಉಳಿದೆರಡು ಸಸ್ಯಗಳನ್ನು ಕೊಡಗು ಜಿಲ್ಲೆಯಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಪ್ರೊ.ಸಿದ್ಧಪ್ಪಮತ್ತು ಪ್ರಶಾಂತ್ ಅವರ ತಂಡ ಪತ್ತೆ ಮಾಡಿದೆ. ಸದ್ಯ ಕರ್ನಾಟಕ ರಾಜ್ಯದಲ್ಲಿ ಸೊನೇರಿಲಾ ಸಸ್ಯ ಪ್ರಭೇದಕ್ಕೆ ಸೇರಿದ 12 ಜಾತಿಯ ಸಸ್ಯಗಳಿದ್ದು, ಸದ್ಯ ಪತ್ತೆಯಾಗಿರುವ ಸೊನೇರಿಲಾ ಪ್ರಭೇದಕ್ಕೆ ಸೇರಿದ ಮೂರು ಸಸ್ಯಗಳಿಂದಾಗಿ ಸೊನೇರಿಲಾ ಸಸ್ಯ ಪ್ರಭೇದಗಳ ಸಂಖ್ಯೆ 15ಕ್ಕೆ ಏರಿದಂತಾಗಿದೆ.

ಪ್ರೊ.ಸಿದ್ದಪ್ಪ ಮತ್ತವರ ಸಂಶೋಧನ ವಿದ್ಯಾರ್ಥಿಗಳ ತಂಡ ಸದ್ಯ ಪತ್ತೆಯಾಗಿರುವ ಸೊನೇರಿಲಾ ಸಸ್ಯ ಪ್ರಭೇದಕ್ಕೆ ಸೇರಿದ ಮೂರು ಸಸ್ಯಗಳ ಮೇಲೆ ಸಂಶೋಧನೆ ನಡೆಸುತ್ತಿದ್ದು, ಇವುಗಳಲ್ಲಿರುವ ಔಷಧೀಯ ಗುಣಗಳನ್ನು ತಿಳಿಯುವ ನಿಟ್ಟಿನಲ್ಲಿ ತಂಡ ಕಾರ್ಯೋನ್ಮುಖವಾಗಿದೆ.

ಬಾಬಾ ಬುಡಾನ್ ಗಿರಿಯನ್ಸಿಸ್ ಸಸ್ಯ ಸೇರಿದಂತೆ ಪಶ್ಚಿಮಘಟ್ಟ ಸಾಲಿನಲ್ಲಿ ಪತ್ತೆಯಾಗಿರುವ ಈ ಮೂರು ಸಸ್ಯಗಳು ಪ್ರಪಂಚದ ಬೇರೆ ಯಾವ ಭಾಗದಲ್ಲೂ ಪತ್ತೆಯಾಗಿಲ್ಲ ಎಂಬುದನ್ನು ಸಂಶೋಧಕರು ದೃಢಪಡಿಸಿದ್ದಾರೆ.

ದಾವಣಗೆರೆ ವಿವಿ ವನಸ್ಪತಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿದ್ದಪ್ಪ ಮತ್ತವರ ಸಂಶೋಧನಾ ವಿದ್ಯಾರ್ಥಿಗಳ ತಂಡ ಬಾಬಾ ಬುಡಾನ್‌ಗಿರಿ ವ್ಯಾಪ್ತಿಯಲ್ಲಿ ಸೊನೇರಿಲಾ ‘ಬಾಬಾಬುಡಾನ್‌ಗಿರಿಯನ್ಸಿಸ್’ ಎಂಬ ಹೊಸ ಸಸ್ಯ ಪ್ರಭೇದ ಅನ್ವೇಷಣೆ ಮಾಡಿರುವುದು ಸಂತಸದ ವಿಚಾರವಾಗಿದೆ. ಈ ಸಸ್ಯದ ಪತ್ತೆ ಕೇವಲ ವಿಜ್ಞಾನ ಕ್ಷೇತ್ರದ ಯಶಸ್ಸಲ್ಲ, ಇದು ಬಾಬಾ ಬುಡಾನ್‌ಗಿರಿ ಪರ್ವತಗಳ ಸಾಲಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪರಿಸರಾತ್ಮಕ ಮಹತ್ವವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದಂತಾಗಿದೆ. ರಾಜ್ಯ ಸರಕಾರ ಬಾಬಾ ಬುಡಾನ್‌ಗಿರಿ ಪರ್ವತ ಪ್ರದೇಶವನ್ನು ಪರಿಸರ ಮತ್ತು ಆಧ್ಯಾತ್ಮಿಕ ಪರಂಪರೆಯ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು, ಹೊಸದಾಗಿ ಪತ್ತೆಯಾದ ಸಸ್ಯ ಪ್ರಭೇದದ ಜಾಗದಲ್ಲಿ ಯಾವುದೇ ವ್ಯಾಪಾರಿಕ, ಪರಿಸರ ಹಾನಿಕಾರಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಇಲ್ಲಿನ ಜೀವ ವೈವಿಧ್ಯತೆಯನ್ನು ಸಂರಕ್ಷಣೆ ಮಾಡಬೇಕು.

  ಸೈಯದ್ ಫಕ್ರುದ್ದೀನ್ ಶಾ ಖಾದ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಲ್.ಶಿವು

contributor

Similar News