×
Ad

ಕಲ್ಯಾಣ ಕರ್ನಾಟಕದ ಕೂಲಿ ಕಾರ್ಮಿಕರು

Update: 2026-01-03 14:44 IST

ಕಲ್ಯಾಣ ಕರ್ನಾಟಕದಲ್ಲಿ ಯಾವುದೇ ಕಂಪನಿಗಳಿಲ್ಲ. ಇಲ್ಲಿಯ ಜನರು ರೈತರು, ಕೂಲಿ ಕಾರ್ಮಿಕರು, ಮಳೆ ಆಶ್ರಿತರಾಗಿ ಬದುಕು ಕಟ್ಟಿಕೊಳ್ಳುವ ಜನರು. ನಾಲ್ಕು ತಿಂಗಳ ಸುಗ್ಗಿ ಮುಗಿದ ನಂತರ ಮತ್ತೆ ಬದುಕು ಕಟ್ಟಿಕೊಳ್ಳಲು ಅವರು ಪಟ್ಟಣಕ್ಕೆ ವಲಸೆ ಹೋಗಬೇಕು. ಏಕೆಂದರೆ ಅವರಿಗೆ ಫಲವತ್ತಾದ ಜಮೀನುಗಳಿಲ್ಲ. ಅವಿಭಕ್ತ ಕುಟುಂಬವಿದ್ದು, ಕೂಲಿ ಕಾರ್ಮಿಕರಿಗೆ

ಕಡಿಮೆ ಸಂಬಳ ಇರುತ್ತದೆ. ಒಬ್ಬರ ದುಡಿಮೆಯಿಂದ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲಿರುವ ಮಹಿಳೆಯರು, ಮಕ್ಕಳು ಕೂಲಿ ಕಾರ್ಮಿಕರಾಗಿ ಕೆಲಸ ಮಾಡಬೇಕು. ಕುಟುಂಬ ತೂಗಿಸಿಕೊಂಡು ಹೋಗಲು ಆರ್ಥಿಕ ಸಹಾಯಬೇಕು.

ಕಲ್ಯಾಣ ನಾಡಿನಲ್ಲಿ ಕಿತ್ತು ತಿನ್ನುವ ಬಡತನವಿದೆ. ಪದವಿ ಪಡೆದ ನಿರುದ್ಯೋಗಿಗಳು, ಹೆಚ್ಚು ಅನಕ್ಷರಸ್ಥರು, ವಿದ್ಯಾಭ್ಯಾಸದಲ್ಲಿ ಹಿಂದುಳಿದವರು ಇಲ್ಲಿದ್ದಾರೆ. ಸರಕಾರಿ ನೌಕರರು ತುಂಬಾ ಕಡಿಮೆ. ಈ ಪ್ರದೇಶದಲ್ಲಿ ಕೂಡು ಕುಟುಂಬಗಳೇ ಹೆಚ್ಚು. ಇಲ್ಲಿಯ ಜನರು ಬೇರೆಯವರ ಮೇಲೆ ಹೆಚ್ಚು ಅವಲಂಬಿತ. ಇಂತಹ ಪರಿಸ್ಥಿತಿಯಲ್ಲಿ ದುಡಿಯಲೇಬೇಕಾದದ್ದು ಅನಿವಾರ್ಯ.

ಇಲ್ಲಿ ಪ್ರತಿಯೊಬ್ಬರೂ ದುಡಿದರೂ ಉತ್ತಮ ಜೀವನ ನಡೆಸಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಹೊರಗೆ ಹೋಗಿ ದುಡಿಯುತ್ತಾರೆ. ಅದಕ್ಕೆ ಪುರುಷರು, ಮಹಿಳೆಯರು, ಮಕ್ಕಳು ಸೇರಿ ದುಡಿಯಲು ಪಟ್ಟಣಗಳಿಗೆ ವಲಸೆ ಹೋಗುತ್ತಾರೆ. ಪ್ರತಿದಿನ ರೈಲ್ವೆ ಬೋಗಿಗಳು ಕಾರ್ಮಿಕರಿಂದ ತುಂಬಿ ತುಳುಕುವ ಸ್ಥಿತಿ ನೋಡಿದರೆ ಮನಸ್ಸು ಕರಗುತ್ತದೆ. ಒಬ್ಬರ ಮೇಲೆ ಇನ್ನೊಬ್ಬರು ಕುಳಿತುಕೊಂಡು ಹೋಗುವ ದೃಶ್ಯಗಳು ಮಾಮೂಲಾಗಿ ಕಾಣುತ್ತೇವೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ವಿಜಯಪುರ ಜಿಲ್ಲೆಯ ಕೂಲಿ ಕಾರ್ಮಿಕರನ್ನು ಹೊತ್ತುಕೊಂಡು ಹೋಗುವ ಬೋಗಿ ನೋಡಿ ತುಂಬ ಜನ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಕೂಲಿ ಕಾರ್ಮಿಕರಾಗಿ ಹೋಟೆಲ್‌ಗಳು, ಕಾರ್ಖಾನೆಗಳು, ಗಾರ್ಮೆಂಟ್ಸ್, ಸಾಬೂನು ತಯಾರಿಕೆ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ವಸ್ತುಗಳನ್ನು ಖರೀದಿ ಮಾಡಿ, ವಿತರಣೆ ಮಾಡುವ ಹುಡುಗರು, ಹೂವು ಮಾರುವ ಮಕ್ಕಳು ಇದ್ದಾರೆ. ಮಹಿಳೆಯರು ಹೆಚ್ಚು ಮನೆ ಕೆಲಸಕ್ಕೆ ಹೋಗುತ್ತಾರೆ.

ಕಲ್ಯಾಣ ನಾಡಿನಲ್ಲಿ ಪ್ರತಿದಿನ ಹೋರಾಟದ ಬದುಕು. ಕೆಲವರು ಗುಳೇ ಹೋಗುತ್ತಾರೆ. ಇನ್ನೂ ಕೆಲವರು ಹೋಗಿ ಮರಳಿ ಮತ್ತೆ ಮೂಲ ಸ್ಥಾನಕ್ಕೆ ಬರುತ್ತಾರೆ. ಜೋಳ, ಅಕ್ಕಿ, ಬೇಳೆ ಇತ್ಯಾದಿ ಅಗತ್ಯ ಸಾಮಗ್ರಿ ಮೂಟೆಗಳನ್ನು ಕಟ್ಟಿಕೊಂಡು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಹೋಗಿ ಬಂದು ಮಾಡುತ್ತಾರೆ.

ವಾರಕ್ಕೆ, ತಿಂಗಳಿಗೆ ಹೋಗಿ ಬಂದು ಮಾಡುತ್ತಾರೆ. ಕೆಲವರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶಗಳು ಸಿಕ್ಕರೆ, ಇನ್ನೂ ಕೆಲವರು ಬದುಕಿಗಾಗಿ ಹೋರಾಡುತ್ತಿದ್ದಾರೆ. ಮಳೆಗಾಲ, ಚಳಿಗಾಲ, ಬೇಸಿಗೆಯೆನ್ನದೆ ದುಡಿಯಲು ಹೋಗುತ್ತಾರೆ. ಇದರಿಂದ ಮಹಿಳೆಯರಿಗೆ ತುಂಬ ಸಮಸ್ಯೆಗಳು ಆಗುತ್ತಿವೆ. ಅನಾರೋಗ್ಯ, ಅಪೌಷ್ಟಿಕತೆ, ರಕ್ತಹೀನತೆ, ಹೆರಿಗೆಯಾದ ಮೇಲೆ ವಿಶ್ರಾಂತಿ ಪಡೆಯಲು ಸಾಧ್ಯವಾಗದೆ ನಿದ್ರಾಹೀನತೆಯಂಥ ಸಮಸ್ಯೆಗಳು ಉದ್ಭವಿಸಿ ನಾನಾ ರೋಗಗಳಿಂದ ಬಳಲುತ್ತಿದ್ದಾರೆ.

ಕಲ್ಯಾಣ ನಾಡಿನ ಅಭಿವೃದ್ಧಿ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಈ ನಾಡಿನಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿದ್ದರೂ, ಅವ್ಯಾವು ಫಲಕೊಡದೆ ಕಾಟಾಚಾರಕ್ಕೆಂಬಂತೆ ರೂಪಿತವಾದಂತಿವೆ. ಒಟ್ಟಾರೆ ಈಗ ಭಾಗದ ಜನರಿಗೆ ಸಕಲ ಸರಕಾರಿ ಸವಲತ್ತುಗಳು ಸಿಗಬೇಕು. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಮಕ್ತುಂಬಿ ಎಂ. ಭಾಲ್ಕಿ

contributor

Similar News