×
Ad

‘ಸಾವಿರದ ಸರಕಾರ’ ಸಮಾವೇಶಕ್ಕೆ ಸಿದ್ದರಾಮಯ್ಯ ಸಜ್ಜು!

Update: 2026-01-02 12:37 IST

ಬೆಂಗಳೂರು : ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಸರಕಾರ ಸಾವಿರ ದಿನಗಳು ಪೂರೈಸುತ್ತಿದ್ದಂತೆ ಫೆಬ್ರವರಿ 16ರಂದು ‘ಸಾವಿರದ ಸರಕಾರ’ ಎಂಬ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಪದೇ ಪದೇ ತಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳಿದರೂ, ತಲಾ ಎರಡೂವರೆ ವರ್ಷಕ್ಕೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿಲ್ಲ ಎಂದು ಹೇಳಿದ್ದರೂ (ಬೆಳಗಾವಿ ಅಧಿವೇಶನದಲ್ಲಿ) ನಾಯಕತ್ವ ಬದಲಾವಣೆ ಚರ್ಚೆ ನಿಲ್ಲುತ್ತಿಲ್ಲ. ಹೈಕಮಾಂಡ್ ಕೂಡ ಇಂಥ ಚರ್ಚೆಗೆ ಇತಿಶ್ರೀ ಹಾಡಲು ಪ್ರಯತ್ನಿಸುತಿಲ್ಲ ಎನ್ನುವ ಕಾರಣಕ್ಕೆ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲು ಸನ್ನದ್ಧರಾಗುತ್ತಿದ್ದಾರೆ ಎಂದು ಹೇಳಲಾಗಿದೆ.

ಯಾವ ರೀತಿಯಲ್ಲಿ ಶಕ್ತಿ ಪ್ರದರ್ಶನ ಮಾಡಬೇಕು ಎಂಬ ಬಗ್ಗೆ ಆಪ್ತರ ಜೊತೆ ಹಲವು ಆಯಾಮಗಳಲ್ಲಿ ಚಿಂತನೆ ನಡೆಸಲಾಗಿತ್ತು. ಅಂತಿಮವಾಗಿ ಎರಡು ರೀತಿಯಲ್ಲಿ ಮಾಡಬಹುದಾಗಿ ನಿರ್ಧರಿಸಲಾಗಿತ್ತು. ಮೊದಲನೆಯದಾಗಿ ಸರಕಾರ ಸಾವಿರ ದಿನಗಳು ತುಂಬಿದ ಫೆಬ್ರವರಿ 16ರಂದೇ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಬೇಕು, ಆ ಬಜೆಟ್‌ನಲ್ಲಿ ಜನಪರವಾದ, ಜನಪ್ರಿಯವೂ ಆಗುವ, ಸರಕಾರದ ವರ್ಚಸ್ಸನ್ನು ವೃದ್ಧಿಸಬಲ್ಲ ಕಾರ್ಯಕ್ರಮವೊಂದನ್ನು ಘೋಷಿಸಬೇಕು ಎನ್ನುವುದು. ಎರಡನೆಯದಾಗಿ ಸರಕಾರಕ್ಕೆ ಸಾವಿರ ದಿನಗಳು ತುಂಬಿದ ದಿನದಂದು ಸಿದ್ದರಾಮಯ್ಯೋತ್ಸವ ಮಾದರಿಯಲ್ಲಿ ಅಥವಾ 20 ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ನಡೆಸಿದ ರೀತಿಯಲ್ಲಿ ಶಕ್ತಿ ಪ್ರದರ್ಶನ ಮಾಡಬೇಕು ಎನ್ನುವುದು.

ಅಂತಿಮವಾಗಿ ಸಿದ್ದರಾಮಯ್ಯ ಎರಡನೇ ಪ್ರಸ್ತಾವವನ್ನು ಒಪ್ಪಿಕೊಂಡು ಅದೇ ರೀತಿ ಫೆಬ್ರವರಿ 16ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ. ಜೊತೆಗೆ ಬಜೆಟ್‌ನಲ್ಲಿ ಕೊಡಬೇಕೆಂದುಕೊಂಡಿರುವ ತಮ್ಮ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಬಗ್ಗೆ ಹಾವೇರಿ ಸಮಾವೇಶದಲ್ಲೇ ಘೋಷಿಸಲಿದ್ದಾರೆ. ಸಮಾವೇಶದಲ್ಲಿ ಘೋಷಿಸುವ ಮೂಲಕ ಅದು ಸಾರ್ವಜನಿಕವಾಗಿ ಚರ್ಚೆಯಾಗುವಂತೆ ಮತ್ತು ‘ಹವಾ’ ಸೃಷ್ಟಿಯಾಗುವಂತೆ ನೋಡಿಕೊಳ್ಳಲಿದ್ದಾರೆ. ಮಾರ್ಚ್ 6 ಅಥವಾ 13ರಂದು ಮಂಡಿಸುವ ತಮ್ಮ ಬಜೆಟ್ ಮೂಲಕ ಅದನ್ನು ಜಾರಿ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಆಪ್ತ ವಲಯ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿದುಬಂದಿದೆ.

ರಾಹುಲ್-ಪ್ರಿಯಾಂಕಾಗೆ ಆಹ್ವಾನ: ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಪ್ರಕಟ ಮಾಡಿದ್ದರು. ಅದೇ ರೀತಿ ಈಗ ಬಜೆಟ್‌ನಲ್ಲಿ ಕೊಡಬೇಕೆಂದುಕೊಂಡಿರುವ ತಮ್ಮ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಕೂಡ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೇ ಘೋಷಣೆ ಮಾಡಬೇಕು ಎಂದು ಅವರನ್ನು ಹಾವೇರಿ ಸಮಾವೇಶಕ್ಕೆ ಆಹ್ವಾನಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಕೃತಜ್ಞತಾ ಸಮಾವೇಶ: ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಮೇಲೆ ಭರವಸೆ ಇಟ್ಟು ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ ಹಿನ್ನೆಲೆಯಲ್ಲಿ ಅಂದು ರಾಜ್ಯದ ಜನರಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಂದ ಕೃತಜ್ಞತೆ ಹೇಳಿಸುವ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದಂತೆ ಬಜೆಟ್‌ನಲ್ಲಿ ಘೋಷಣೆ ಮಾಡುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನೂ ಸಿದ್ದರಾಮಯ್ಯ ಯಶಸ್ವಿಯಾಗಿ ಜಾರಿ ಮಾಡಲಿದ್ದಾರೆ ಎಂದು ಹೇಳಿಸುವ ಪ್ರಯತ್ನ ನಡೆಸಲಿದ್ದಾರೆ. ಆ ಮೂಲಕ ತಮ್ಮ ಸ್ಥಾನ ಅಬಾಧಿತ ಎನ್ನುವುದನ್ನು ಹೈಕಮಾಂಡ್ ಮೂಲಕವೇ ಹೇಳಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹಿಂದೆಯೇ ಕೃತಜ್ಞತಾ ಸಮಾವೇಶ ಏರ್ಪಡಿಸಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದರು. ಸಂದರ್ಭ ಕೂಡಿಬಂದಿರಲಿಲ್ಲ ಮತ್ತು ಕೆಲವು ಅಡ್ಡಿ ಆತಂಕಗಳು ನಿರ್ಮಾಣವಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಈಗ ರಾಜ್ಯ ಸರಕಾರ ಸಾವಿರ ದಿನಗಳನ್ನು ಪೂರ್ಣಗೊಳಿಸುತ್ತಿರುವ ಹೊತ್ತಿನಲ್ಲಿ ಕಾರ್ಯರೂಪಕ್ಕೆ ತರಲು ತೀರ್ಮಾನಿಸಿದ್ದಾರೆ.

ಕೆಸಿವಿ ಜೊತೆ ಸಮಾಲೋಚನೆ: ಹಾವೇರಿಯಲ್ಲಿ ನಡೆಸಲು ಉದ್ದೇಶಿಸಿರುವ ಸಮಾವೇಶ ಹಾಗೂ ಅದರ ರೂಪುರೇಷೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಎಐಸಿಸಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೊತೆ ಸಮಾಲೋಚನೆ ನಡೆಸಿದ್ದಾರೆ. ಕೆ.ಸಿ. ವೇಣುಗೋಪಾಲ್ ಮೂಲಕ ರಾಹುಲ್ ಗಾಂಧಿ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಹೈಕಮಾಂಡ್ ಕಡೆಯಿಂದಲೂ ಹಸಿರು ನಿಶಾನೆ ಸಿಕ್ಕಿರುವುದರಿಂದ ಸಮಾವೇಶ ನಡೆಸಲು ಸನ್ನದ್ಧರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News