×
Ad

ರೈತ ಭವನವೀಗ ಅನೈತಿಕ ಚಟುವಟಿಕೆಗಳ ತಾಣ

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

Update: 2026-01-03 14:39 IST

ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಗಮಿಸುವ ರೈತರಿಗೆ ತಂಗುದಾಣ ವಾಗಬೇಕಿದ್ದ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ‘ರೈತ ಭವನ’ವು ನಿರ್ವಹಣೆ ಕೊರತೆಯಿಂದಾಗಿ ದುಸ್ಥಿತಿಗೆ ತಲುಪಿದೆ.

ಎಪಿಎಂಸಿಗೆ ಧಾನ್ಯ ಮಾರಾಟ, ಖರೀದಿ, ವಾರದ ಸಂತೆಗೆ ಸೇರಿ ವಿವಿಧ ಕೆಲಸಗಳಿಗೆ ಬರುವ ಸುಮಾರು 52 ಹಳ್ಳಿಗಳ ರೈತರ ವಿಶ್ರಾಂತಿಗೆಂದು 2013-14ನೇ ಸಾಲಿನ ಕ್ರಿಯಾ ಯೋಜನೆಯಡಿ ಅಂದಾಜು 24 ಲಕ್ಷ ರೂ. ವೆಚ್ಚದಲ್ಲಿ ರೈತ ಭವನ, ಧಾನ್ಯ ಒಣಗಿಸುವ ಕಟ್ಟೆ ಹಾಗೂ ರೈತರ ಉಪಾಹಾರ ಗೃಹ ನಿರ್ಮಿಸಲಾಗಿದೆ.

ಪ್ರತಿ ಸೋಮವಾರ ಕುರಿಗಳ ಸಂತೆಯೂ ನಡೆಯುತ್ತಿದ್ದರೂ, ನಿರ್ವಹಣೆ ಇಲ್ಲದ ಕಾರಣದಿಂದ ಕಟ್ಟಡ ಬಳಕೆಯಿಲ್ಲದೆ ಪಾಳುಬಿದ್ದ ಸ್ಥಿತಿಯಲ್ಲಿದೆ. ಕೋಣೆಗಳು ಸ್ವಚ್ಛತೆ ಮತ್ತು ನಿರ್ವಹಣೆ ಇಲ್ಲದೆ ಭವನ ಹಾಳು ಕೊಂಪೆಯಾಗಿ ಪರಿಣಮಿಸಿದೆ.

ಶೌಚಾಲಯವಾದ ಉಪಹಾರ ಗೃಹ:

ಎಪಿಎಂಸಿ ಆವರಣದಲ್ಲಿರುವ ರೈತರ ಉಪಾಹಾರ ಗೃಹ ಸಂಜೆಯಾಗುತ್ತಿದ್ದಂತೆ ಸಾರ್ವಜನಿಕ ಶೌಚಾಲಯದ ರೂಪ ಪಡೆದುಕೊಳ್ಳುತ್ತದೆ. ಬೀಗ ಹಾಕುವ ಪದ್ಧತಿ ಇಲ್ಲದಿರುವುದೇ ದುರ್ಬಳಕೆಗೆ ಕಾರಣ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ. ರೈತ ಭವನದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಸುತ್ತಮುತ್ತ ಸ್ವಚ್ಛತೆ ಕಾಪಾಡದೆ ಇರುವುದರಿಂದ ಜನರು ಬಹಿರ್ದೆಸೆಗೆ ಬರುತ್ತಿದ್ದಾರೆ. ವಿದ್ಯುತ್ ಸಂಪರ್ಕದ ತಂತಿಗಳು ಹಾಗೂ ಸ್ವಿಚ್ ಬೋರ್ಡುಗಳು ಹಲವೆಡೆ ಕಿತ್ತು ಹೋಗಿವೆ.

ಅನೈತಿಕ ಚಟುವಟಿಕೆಗಳಿಗೆ ಆಶ್ರಯ:

ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ರೈತ ಭವನ ಅನೈತಿಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಪುಂಡರ ಕಿರಿಕಿರಿ ಹೆಚ್ಚಿದ್ದು, ಹಲವು ಬಾರಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ನಾಗರಿಕರು ದೂರಿದ್ದಾರೆ.

ಗ್ರಾಮೀಣ ಭಾಗದಿಂದ ಬರುವ ರೈತರಿಗೆ ಕಡಿಮೆ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರಕಾರ ಈ ರೈತ ಭವನ ನಿರ್ಮಾಣಕ್ಕೆ ಒತ್ತು ನೀಡಿತ್ತು. ಆದರೆ ಕಟ್ಟಡ ಇದ್ದರೂ ಎರಡು-ಮೂರು ವರ್ಷಗಳಿಂದ ರೈತರು ಇಲ್ಲಿ ತಂಗಿರುವ ದಾಖಲೆಗಳಿಲ್ಲ. ಭವನದ ಪರಿಸ್ಥಿತಿ ಕಂಡು ವಾಸ್ತವ್ಯಕ್ಕೆ ಭಯ ಹುಟ್ಟುವ ವಾತಾವರಣ ನಿರ್ಮಾಣವಾಗಿದೆ. ಸ್ವಂತ ಅಥವಾ ಖಾಸಗಿ ವಾಹನ ಸೌಲಭ್ಯ ಹೊಂದಿರುವ ರೈತರು ರಾತ್ರಿಯಾದರೂ ಮನೆಗೆ ಹಿಂದಿರುಗುತ್ತಿದ್ದಾರೆ. ಇಲ್ಲಿಯೇ ಉಳಿಯುವ ಅಗತ್ಯವಿದ್ದರೂ ಅನಾನುಕೂಲಗಳ ಕಾರಣ ರೈತರು ಭವನದತ್ತ ಮುಖ ಮಾಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕಟ್ಟಡದ ನಿರ್ವಹಣೆ ಕೈಗೆತ್ತಿಕೊಂಡು, ಅನೈತಿಕ ಚಟುವಟಿಕೆ ತಡೆಯಲು ಮುಂದಾಗಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.

‘‘ಇಲ್ಲಿ ಹೆಸರಿಗಷ್ಟೇ ರೈತ ಭವನವಿದೆ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಸ್ವಚ್ಛತೆ ಕಾಪಾಡಿಲ್ಲ. ನಿರ್ವಹಣೆ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಸುತ್ತಮುತ್ತ ಕಾಂಪೌಂಡ್ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಕೂಡಲೇ ದುರಸ್ತಿ ಕಾರ್ಯ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಬೇಕು.’’

-ಯಮನೂರು ಮಡಿವಾಳರ, ಅಧ್ಯಕ್ಷರು, ರೈತ ಸಂಘ, ಹನುಮಸಾಗರ ಗ್ರಾಮ ಘಟಕ

‘‘ಸುತ್ತಮುತ್ತಲಿನ ಗ್ರಾಮೀಣ ರೈತರಿಗೆ ಅನುಕೂಲವಾಗಲೆಂದು ರೈತ ಭವನ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದ್ದೇನೆ. ಆದರೆ ಇಂದು ಅದು ಶೌಚಾಲಯವಾಗಿ ಮಾರ್ಪಟ್ಟಿರುವ ದುಸ್ಥಿತಿ ಕಂಡಾಗ ತುಂಬ ನೋವಾಗುತ್ತದೆ. ಸದ್ಯಕ್ಕೆ ಸರಕಾರ ಈ ಕಟ್ಟಡವನ್ನು ಯಾವುದೇ ಇಲಾಖೆ ಅಥವಾ ಶಿಕ್ಷಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯವಾಗಿ ಬಳಸಿದರೆ, ಮುಂದಿನ ದಿನಗಳಲ್ಲಿ ಕನಿಷ್ಠ ಸ್ವಚ್ಛತೆ ಮತ್ತು ಸಂರಕ್ಷಣೆ ಉಳಿಯುತ್ತದೆ’’

-ಮಹಮ್ಮದ್ ನಜೀರ್ ಸಾಬ್ ಮೂಲಿಮನಿ,

ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಿ.ಎಂ. ಕಲಾಲಬಂಡಿ

contributor

Similar News