ರಾಜ್ಯದಲ್ಲೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಿದ್ಧತೆ ಆರಂಭ
ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು ದೇಶದ ವಿವಿಧ ರಾಜ್ಯಗಳಲ್ಲಿ ಆರಂಭಿಸಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಕರ್ನಾಟಕದಲ್ಲಿಯೂ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಿದ್ಧತೆ ಆರಂಭಿಸಿದೆ.
ಕರ್ನಾಟಕದಲ್ಲಿ 2002ರಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ನಡೆದಿತ್ತು. ಇದೀಗ 23 ವರ್ಷಗಳ ಬಳಿಕ ಪುನಃ ಎಸ್‌ಐಆರ್ ನಡೆಸಲು ಉದ್ದೇಶಿಸಲಾಗಿದೆ. 2002ರಲ್ಲಿ ರಾಜ್ಯದಲ್ಲಿ 3.40 ಕೋಟಿ ಮತದಾರರಿದ್ದರು. 2024ರ ಲೋಕಸಭಾ ಚುನಾವಣೆ ಸಂದರ್ಭದ ಮತದಾರರ ಪಟ್ಟಿಯಂತೆ ಈಗ 5.40 ಕೋಟಿ ಮತದಾರರಿದ್ದಾರೆ.
58 ಸಾವಿರ ಮತಗಟ್ಟೆಗಳಿದ್ದು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನು ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಒ) ಗಳನ್ನಾಗಿ ಬಳಸಿಕೊಂಡು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ನಡೆಸಲಿದೆ. ಈಗಾಗಲೇ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಬೂತ್ ಮಟ್ಟದ ಅಧಿಕಾರಿಗಳಿಗೆ ಎಸ್‌ಐಆರ್ ಪ್ರಕ್ರಿಯೆ ಕುರಿತು ತರಬೇತಿ ನೀಡಿದೆ.
ಸಾರ್ವಜನಿಕ ಮಾಹಿತಿಗಾಗಿ ಮುಖ್ಯ ಚುನಾವಣಾಧಿಕಾರಿಯ ವೆಬ್‌ಸೈಟ್ https://ceo.karnataka.gov.in/voter ನಲ್ಲಿ 2002ನೇ ಸಾಲಿನ ಮತದಾರರ ಪಟ್ಟಿಯನ್ನು ಹಾಕಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ರಾಜ್ಯದ ಪ್ರತಿಯೊಬ್ಬ ಮತದಾರರ ಮನೆಗೂ ಹೋಗಿ ಮತದಾರರ ಗುರುತಿನ ಚೀಟಿ ಪರಿಶೀಲಿಸಲಿದ್ದಾರೆ. 2002ರ ಮತದಾರರ ಪಟ್ಟಿಯಲ್ಲಿನ ವಿವರಗಳಿಗೂ, ಈಗಿರುವ ವಿವರಗಳ ನಡುವಿನ ವ್ಯತ್ಯಾಸಗಳನ್ನು ಪರಿಶೀಲಿಸಲಿದ್ದಾರೆ.
ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡಿದಾಗ ವಿಶೇಷ ಕ್ಯೂಆರ್ ಕೋಡ್ ಇರುವಂತಹ ಎರಡು ಅರ್ಜಿ ನಮೂನೆಗಳನ್ನು ಮತದಾರರಿಗೆ ನೀಡಿ ಅಗತ್ಯ ಮಾಹಿತಿ ಯನ್ನು ಕ್ರೋಡೀಕರಿಸಲಿದ್ದಾರೆ.
ಒಂದು ನಮೂನೆಯನ್ನು ಬಿಎಲ್‌ಒಗಳು ಸಹಿ ಮಾಡಿ ಮತದಾರರಿಗೆ ಹಿಂದಿರುಗಿಸಲಿದ್ದಾರೆ. ಮತ್ತೊಂದು ನಮೂನೆಯನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ತಲುಪಿಸಿ, ಅದನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗುವುದು.
ಬಿಎಲ್‌ಒಗಳ ಭೇಟಿ ವೇಳೆ ಮನೆಯಲ್ಲಿ ಯಾರೂ ಲಭ್ಯವಿರದಿದ್ದರೆ ಎರಡನೇ ಬಾರಿ ಭೇಟಿ ನೀಡುತ್ತಾರೆ. ಅಲ್ಲದೆ, ನೆರೆ ಹೊರೆಯವರ ಸಹಾಯದಿಂದ ಸಂಪರ್ಕ ಸಾಧಿಸಲಿದ್ದಾರೆ. ಆದರೂ, ಬಿಎಲ್‌ಒಗಳ ಸಂಪರ್ಕಕ್ಕೆ ಬರದಿದ್ದರೆ, ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಮತದಾರರ ಹೆಸರು ಒಂದಕ್ಕಿಂತ ಹೆಚ್ಚಿನ ಮತಗಟ್ಟೆಯಲ್ಲಿದ್ದರೆ ಫೋಟೋ ಸ್ಕ್ಯಾನಿಂಗ್ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು. ಮತದಾರರ ಗುರುತಿನ ಚೀಟಿಯಲ್ಲಿ ಭಾವಚಿತ್ರ ಸ್ಪಷ್ಟವಾಗಿ ಇರದಿದ್ದರೆ ಮತದಾರರು ಹೊಸ ಭಾವಚಿತ್ರ ನೀಡಬೇಕು.
ಪ್ರತಿಯೊಬ್ಬ ಮತದಾರರು ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲೆ ಗಳನ್ನು ಬಿಎಲ್‌ಒಗಳಿಗೆ ನೀಡಬೇಕು. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಂತರ ಮತದಾರರ ಹೆಸರು ಕೈ ಬಿಟ್ಟು ಹೋಗಿದ್ದರೆ, ಅಂತಹವರು ಬಿಎಲ್‌ಒಗಳು ಸಹಿ ಮಾಡಿ ನೀಡಿರುವ ಅರ್ಜಿ ನಮೂನೆ ಮೂಲಕ ಚುನಾವಣಾ ಆಯೋಗಕ್ಕೆ ಪ್ರಶ್ನಿಸಬಹುದು. ಬಿಎಲ್‌ಒಗಳಿಗೆ ತಪ್ಪು ಮಾಹಿತಿ ಒದಗಿಸುವಂತಹ ಮತದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಅವಕಾಶವಿದೆ.
ರಾಜ್ಯದಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತಂತೆ ಇತ್ತೀಚೆಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರನ್ನು ಕರೆಸಿ ಅವರಿಗೆ ವಿವರ ನೀಡಲಾಗಿದೆ. ಪ್ರತಿಯೊಂದು ಮತಗಟ್ಟೆಗೂ ಏಜೆಂಟ್‌ಗಳನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳ ನಾಯಕರಿಗೆ ಸೂಚಿಸಲಾಗಿದೆ. ಎಸ್‌ಐಆರ್ ಯಾವಾಗ ಮಾಡಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಇನ್ನೂ ಯಾವುದೇ ಸೂಚನೆ ನೀಡಿಲ್ಲ. ಅವರಿಂದ ನಮಗೆ ಸೂಚನೆ ಬಂದ ಕೂಡಲೇ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮಗ್ರ ಮಾಹಿತಿಯನ್ನು ರಾಜ್ಯದ ಜನತೆಗೆ ತಿಳಿಸಲಾಗುವುದು. ಅಲ್ಲದೆ, ಮೂರು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಿದ್ದೇವೆ.
-ವಿ.ಅನ್ಬುಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ