ಹಣ ತೋಳ್ಬಲ ಸಂಘರ್ಷಕ್ಕೆ ನಲುಗಿದ ಬಳ್ಳಾರಿ!
ಇದು ಯುದ್ಧ (ಚುನಾವಣೆ) ಕಾಲವಲ್ಲ; ಶಾಂತಿ ಕಾಲ. ರಾಜ್ಯ ವಿಧಾನಸಭೆ ಚುನಾವಣೆ ಮುಗಿದು 32 ತಿಂಗಳು ಕಳೆಯುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಇನ್ನೂ ಎರಡುಕಾಲು ವರ್ಷವಿದೆ. ಆದರೂ ಬಳ್ಳಾರಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್ರೆಸ್ ಬಳ್ಳಾರಿ ಶಾಸಕ ನಾ.ರಾ.ಭರತ್ ರೆಡ್ಡಿ, ಬಿಜೆಪಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಯಾರೋ ಹಾರಿಸಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿದ್ದಾನೆ. ವೈಯಕ್ತಿಕ ದ್ವೇಷ ಮತ್ತು ಪ್ರತಿಷ್ಠೆ ಕಾರಣಕ್ಕೆ ಗಲಾಟೆ ಆಗಿದೆ.
ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಇಬ್ಬರೂ ರೆಡ್ಡಿ ಸಮುದಾಯಕ್ಕೆ ಸೇರಿದವರು. ಬಳ್ಳಾರಿ ಜಿಲ್ಲೆಯಲ್ಲಿ ರೆಡ್ಡಿ ಸಮಾಜದ ಸಂಖ್ಯೆ ಹೆಚ್ಚಿಲ್ಲ
ದಿದ್ದರೂ ಆರ್ಥಿಕವಾಗಿ ಸದೃಢವಾಗಿದೆ. ಕಮ್ಮಾ ಸಮಾಜದ ಸಂಖ್ಯೆಯೂ ಕಡಿಮೆ. ಅದೂ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಜಾತಿ. ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರ ಸಂಖ್ಯೆಯೇ ಅತೀ ಹೆಚ್ಚು. ಎರಡನೇ ಸ್ಥಾನದಲ್ಲಿ ವಾಲ್ಮೀಕಿ ಸಮುದಾಯವಿದೆ. ಲಿಂಗಾಯತರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯದ ಮೇಲೆ ಪ್ರಾಬಲ್ಯ ಸಾಧಿಸಲು ರೆಡ್ಡಿಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ.
ಭರತ್ ರೆಡ್ಡಿ ತಮ್ಮ ಖರ್ಚಿನಲ್ಲಿ ವಾಲ್ಮೀಕಿ ಮಹರ್ಷಿ ಪ್ರತಿಮೆ ಮಾಡಿಸಿ ಎಸ್.ಪಿ.ಸರ್ಕಲ್‌ನಲ್ಲಿ ನಿಲ್ಲಿಸಲು ಹೊರಟಿದ್ದಾರೆ. ಅಧಿಕೃತವಾಗಿ ಜ.3ರಂದು ಶನಿವಾರ ಕಾರ್ಯಕ್ರಮ ಇತ್ತು. ಅದಕ್ಕೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಅವಂಬಾವಿ ರಸ್ತೆಯಲ್ಲಿರುವ ಜನಾರ್ದನ ರೆಡ್ಡಿಯ ಮನೆ ಮುಂಭಾಗ ಹಾಕಲಾಗಿತ್ತು. ರೆಡ್ಡಿ ಬೆಂಬಲಿಗರು ಇದಕ್ಕೆ ಆಕ್ಷೇಪಿಸಿದರು. ಗಲಾಟೆ ಆರಂಭ ಅಲ್ಲಿಂದಲೇ. ಇಬ್ಬರೂ ಶಾಸಕರ ನಡುವಿನ ದ್ವೇಷ- ಪ್ರತಿಷ್ಠೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ. ಹಲವು ವರ್ಷಗಳ ಇತಿಹಾಸವಿದೆ. ಭರತ್ ರೆಡ್ಡಿ ಅವರ ಅಪ್ಪ, ಮಾಜಿ ಶಾಸಕ ನಾರಾಯಣ ರೆಡ್ಡಿ ಅವರೊಂದಿಗೂ ಜನಾರ್ದನರೆಡ್ಡಿಗೆ ದ್ವೇಷವಿದೆ. ಅದು ಮಗನ ಕಾಲದಲ್ಲಿ ಸ್ಫೋಟಗೊಂಡಿದೆ ಅಷ್ಟೇ.
ರೆಡ್ಡಿಗಳ ಹಗೆತನಕ್ಕೆ ಕಾರಣ ಹುಡುಕುವ ಮುನ್ನ ಅಲ್ಲಿನ ರಾಜಕೀಯ ಇತಿಹಾಸ ಕೆದಕುವ ಅಗತ್ಯವಿದೆ. 1956ಕ್ಕೆ ಮುನ್ನ ಬಳ್ಳಾರಿ ‘ಮದರಾಸ್ ಪ್ರೆಸಿಡೆನ್ಸಿ’ ಭಾಗವಾಗಿತ್ತು. ಭಾಷಾವಾರು ರಾಜ್ಯ ರಚನೆ ವೇಳೆ ಈ ಪ್ರದೇಶ ಆಂಧ್ರಕ್ಕೆ ಹೋಗಬೇಕೋ, ಮೈಸೂರು ರಾಜ್ಯಕ್ಕೆ ಸೇರಬೇಕೋ ಎಂಬ ಜಿಜ್ಞಾಸೆ ಹುಟ್ಟಿಕೊಂಡಿತ್ತು. ಈ ವಿಷಯದಲ್ಲಿ ನಡೆದ ಜನಮತ ಗಣನೆಯಲ್ಲಿ ಬಳ್ಳಾರಿ ಮೈಸೂರಿಗೆ ಸೇರ್ಪಡೆಯಾಯಿತು. 1957ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಮುಂಡ್ಲೂರು ಗಂಗಪ್ಪ ಪಕ್ಷೇತರರಾಗಿ ಚುನಾಯಿತರಾದರು. ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾದರು. ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಿದ್ದವು. ಹರಪನಹಳ್ಳಿ ಮೀಸಲು ಕ್ಷೇತ್ರದಿಂದ ಜೋಡಿ ಸದಸ್ಯರು ಆಯ್ಕೆಯಾಗುತ್ತಿದ್ದರು.
ಆನಂತರದ ಒಂದೆರಡು ಚುನಾವಣೆಗಳಲ್ಲಿ ಅಲ್ಲಲ್ಲಿ ಪಿಎಸ್‌ಪಿ ಮತ್ತು ಸ್ವತಂತ್ರ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದರೂ, ಬಹುತೇಕ ಕಡೆ ಕಾಂಗ್ರೆಸ್ ಪಕ್ಷವೇ ಗೆಲ್ಲುತಿತ್ತು. ಕೆಲವು ವರ್ಷ ಹೀಗೇ ನಡೆಯಿತು. ಗಣಿ ನಾಡು ಕಾಂಗ್ರೆಸ್ ಭದ್ರಕೋಟೆ ಎಂಬಂತಾಯಿತು. ಜಿಲ್ಲೆಯ ರಾಜಕಾರಣಕ್ಕೆ ‘ಖದರ್’ ಬಂದಿದ್ದು 1999ರಲ್ಲಿ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಲೋಕಸಭೆ ಚುನಾವಣೆಯಲ್ಲಿ ಮುಖಾಮುಖಿಯಾದಾಗ. ಪ್ರಧಾನಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಆಗ ಬಹುಮತ ಸಾಬೀತುಪಡಿಸಲಾಗದೆ ಪ್ರಧಾನಿ ಹುದ್ದೆ ತ್ಯಜಿಸಿದ್ದರಿಂದ ಮತ್ತೆ ಚುನಾವಣೆ ನಡೆಯಬೇಕಾಯಿತು.
ಉತ್ತರ ಪ್ರದೇಶದ ರಾಯ್‌ಬರೇಲಿ ಜತೆ ಬಳ್ಳಾರಿಯಿಂದ ಸ್ಪರ್ಧಿಸಲು ಸೋನಿಯಾ ತೀರ್ಮಾನ ಮಾಡಿದ್ದರು. ಅವರೆದುರು ರಾಜ್ಯದವರೇ ಆದ ಜಾರ್ಜ್ ಫರ್ನಾಂಡಿಸ್ ಕಣಕ್ಕಿಳಿಯಬೇಕಿತ್ತು. ನಾಮಪತ್ರ ಸಲ್ಲಿಸುವ ಕೊನೇ ದಿನ ಅವರು ಈಶಾನ್ಯ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದರಿಂದ ಸಮಯಕ್ಕೆ ಬರಲಾಗಲಿಲ್ಲ. ಹೀಗಾಗಿ, ಸುಷ್ಮಾ ಅವರು ಕಣಕ್ಕಿಳಿದರು. ಬಳ್ಳಾರಿ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಯಿತು. ಸೋನಿಯಾ ಗೆದ್ದರು. ಮುಂದೆ ರಾಯ್‌ಬರೇಲಿ ಉಳಿಸಿಕೊಂಡು ಬಳ್ಳಾರಿ ಸಂಸದೆ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅದು ಬೇರೆ ಮಾತು. ಏಕಕಾಲಕ್ಕೆ ವಿಧಾನಸಭೆ ಚುನಾವಣೆ ನಡೆಯಿತು. ಸೋನಿಯಾ ಅಲೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಅವಿಭಜಿತ ಬಳ್ಳಾರಿ ಜಿಲ್ಲೆಯ ಎಲ್ಲ 10 ಕ್ಷೇತ್ರಗಳಲ್ಲೂ ಈ ಪಕ್ಷದ ಅಭ್ಯರ್ಥಿಗಳು ಗೆದ್ದರು. ಜನಾರ್ದನ ರೆಡ್ಡಿ ಬ್ರದರ್ಸ್, ಶ್ರೀರಾಮುಲು ಆಗಲೇ ಜನರಿಗೆ ಪರಿಚಿತರಾಗಿದ್ದು.
1994ರಲ್ಲಿ ನಗರಸಭೆ ಸದಸ್ಯರಾಗಿದ್ದ ಶ್ರೀರಾಮುಲು ಎರಡು ವರ್ಷದ ಬಳಿಕ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ರೆಡ್ಡಿ- ಶ್ರೀರಾಮುಲು ದೋಸ್ತಿಯಾಯಿತು. ‘ಎನೋಬಲ್ ಇಂಡಿಯಾ’ ಸಂಸ್ಥೆ ಹೆಸರಿನಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದ ರೆಡ್ಡಿ ಬ್ರದರ್ಸ್ 2000ನೇ ಇಸ್ವಿ ಸುಮಾರಿಗೆ ಗಣಿಗಾರಿಕೆಗೂ ಕೈಹಾಕಿದರು. ಚೀನಾದಲ್ಲಿ ಅದಿರಿಗೆ ಬೇಡಿಕೆ ಬಂದಿದ್ದರಿಂದ ಅದೃಷ್ಟವೂ ಖುಲಾಯಿಸಿತು. ಜನಾರ್ದನ ರೆಡ್ಡಿ ಮುಟ್ಟಿದ ಮಣ್ಣು ಚಿನ್ನವಾಯಿತು. ತಲೆ ತಿರುಗಿತು. ದೇವಸ್ಥಾನ ಒಡೆದರು. ಅಂತರ್‌ರಾಜ್ಯ ಗಡಿ ಒತ್ತುವರಿ ಮಾಡಿದರು. ಬೇರೆಯವರ ಗಣಿಗೂ ಕೈಹಾಕಿದರು. ‘ಕುರುಡು ಕಾಂಚಾಣ ಕುಣಿಯುತ್ತಲಿತ್ತು’ ಎಂಬ ಕಾವ್ಯದಂತೆ ಹಣದಿಂದಲೇ ಎಲ್ಲವನ್ನೂ, ಎಲ್ಲರನ್ನೂ ಮಾತಾಡಿಸಿದರು. ಹಣಬಲ ಹಾಗೂ ತೋಳ್ಬಲದಿಂದ ಸರಕಾರ ಕೆಡವಿದರು. ಸರಕಾರ ತಂದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು.
ಯಡಿಯೂರಪ್ಪ ಸಂಪುಟದಲ್ಲಿ ಜನಾರ್ದನರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ಸಚಿವರಾದರು. ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾದರು. ಇಂಥದ್ದು ಸಿನೆಮಾದಲ್ಲಿ ನೋಡಬಹುದು. ರಾಜ್ಯ ರಾಜಕಾರಣದಲ್ಲಿ ರೆಡ್ಡಿಗಳು ಇದನ್ನು ಸಾಧ್ಯವಾಗಿಸಿದರು. ಸರಕಾರವನ್ನೇ ನಿಯಂತ್ರಣದಲ್ಲಿ ಇಟ್ಟುಕೊಂಡರು. ಮೂವರು ರೆಡ್ಡಿ ಸಹೋದರರು ಶಾಸಕರಾಗಿದ್ದರು. ಜನಾರ್ದನ ರೆಡ್ಡಿ 2006ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದರು.
ಜನಾರ್ದನ ರೆಡ್ಡಿ ಮತ್ತು ನಾರಾಯಣ ರೆಡ್ಡಿ ಹಗೆತನಕ್ಕೆ ವಾಪಸ್ ಬರುವುದಾದರೆ, 90ರ ದಶಕದಲ್ಲಿ ರೈಲ್ವೆ ಬಾಬು ಕೊಲೆಯಾಯಿತು. ಕೊಲೆ ಮಾಡಿದ್ದು ಯಾರೋ? ಏನೋ? ಆದರೆ, ಅದರಲ್ಲಿ ಕೆಲವು ಪ್ರಮುಖರ ಹೆಸರು ತಳಕು ಹಾಕಿಕೊಂಡಿತು. ಪಾಲಿಕೆ ಸದಸ್ಯರಾಗಿದ್ದ ರೈಲ್ವೆ ಬಾಬು ಶ್ರೀರಾಮುಲು ಅವರ ಭಾವ (ಅಕ್ಕನ ಗಂಡ). ಈ ಘಟನೆ ನಾರಾಯಣ ರೆಡ್ಡಿ, ಮಾಜಿ ಸಚಿವ ದಿವಾಕರ ಬಾಬು ಅವರ ಜತೆ ಹಗೆತನ ಬೆಳೆಸಿಕೊಳ್ಳಲು ಕಾರಣವಾಯಿತು ಎಂದು ಬಳ್ಳಾರಿ ಜನ ಹೇಳುವುದುಂಟು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಭರತ್ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ. ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ. ರೆಡ್ಡಿ ಸಹೋದರ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಬಿಜೆಪಿ ಅಭ್ಯರ್ಥಿ. ಭರತ್ ರೆಡ್ಡಿ ಅತ್ಯಲ್ಪ ಮತಗಳ ಅಂತರದಲ್ಲಿ ಗೆದ್ದರು. ಅರುಣಾ ಲಕ್ಷ್ಮೀ ಮತ್ತು ಸೋಮಶೇಖರ ರೆಡ್ಡಿ ಮತಗಳು ವಿಭಜನೆಯಾದವು. ಬಿಜೆಪಿ ಸರಕಾರದಲ್ಲಿ ಜನಾರ್ದನ ರೆಡ್ಡಿ ಸಚಿವರಾಗಿದ್ದಾಗ ನಾರಾಯಣ ರೆಡ್ಡಿ ಭಯದಲ್ಲೇ ಇರುತ್ತಿದ್ದರು. ತಮ್ಮ ಬಂಗಲೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ 2011ರಲ್ಲಿ ಬಂಧಿತರಾದ ಬಳಿಕವಷ್ಟೇ ನಾರಾಯಣ ರೆಡ್ಡಿ ಮತ್ತಿತರರು ನಿಟ್ಟುಸಿರು ಬಿಡುವಂತಾಯಿತು. ಜಾಮೀನು ಪಡೆದು ಹೊರ ಬಂದ ನಂತರ ಬಳ್ಳಾರಿಗೆ ಬರದಂತೆ ನಿರ್ಬಂಧ ಹಾಕಲಾಗಿತ್ತು. ಪರಿಣಾಮವಾಗಿ ಬಿಜೆಪಿ ಟಿಕೆಟ್ ಪಡೆದು ಗಂಗಾವತಿಯಿಂದ ಆಯ್ಕೆಯಾದರು. ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ಅನುಮತಿ ಸಿಕ್ಕ ಬಳಿಕ ಭರತ್ ರೆಡ್ಡಿ ತೊಡೆ ತಟ್ಟಿದ್ದಾರೆ. ಬಳ್ಳಾರಿಯಲ್ಲಷ್ಟೇ ಅಲ್ಲ, ವಿಧಾನಸಭೆ ಒಳಗೂ ತೋಳೇರಿಸಿದ್ದಾರೆ.
ಆರೋಪ- ಪ್ರತ್ಯಾ ರೋಪ, ಬೈಗುಳಗಳ ಸುರಿಮಳೆ ಆಗಿದೆ. ಅಕ್ರಮ ಗಣಿಗಾರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭರತ್ ರೆಡ್ಡಿ ‘ನೀನು ಏನೇನು ಮಾಡಿದ್ದೀಯಾ ಗೊತ್ತಿದೆ. ಇದೇ ಸದನದಲ್ಲಿ ಬಿಚ್ಚಿಡುತ್ತೇನೆ’ ಎಂದು ಗುಡುಗಿದ್ದಾರೆ. ‘ನಿನ್ನಪ್ಪ ಇಪ್ಪತ್ತು ವರ್ಷಗಳಿಂದ ಮನೆಯಿಂದ ಹೊರಗೆ ಬಂದಿಲ್ಲ. ಕೈಕಟ್ಟಿಕೊಂಡು ಒಳಗೆ ಕುಳಿತಿದ್ದ. ಈಗ ಇವನು ಮಾತನಾಡುತ್ತಿದ್ದಾನೆ’ ಎಂದು ಜನಾರ್ದನ ರೆಡ್ಡಿ ತೊಡೆ ತಟ್ಟಿದ್ದಾರೆ. ಇಬ್ಬರೂ ಶಾಸಕರ ನಡುವೆ ದ್ವೇಷ- ಅಸೂಯೆ ಹಾಗೂ ಹಗೆತನ ಮುಂದುವರಿದಿರುವುದಕ್ಕೆ ಇದೊಂದು ಘಟನೆ ಉದಾಹರಣೆ ಸಾಕು.
ಗುರುವಾರದ ಘಟನೆಯೂ ಇದರ ಮುಂದುವರಿದ ಭಾಗ. ಜನಾರ್ದನ ರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ತಮ್ಮ ಎದುರಾಳಿಗಳ ಬಾಯಿ ಬಂದ್ ಮಾಡಿದ್ದರು. ಸಚಿವ ಸ್ಥಾನಮಾನದ ದರ್ಪ-ದೌಲತ್ತು ತೋರಿಸಿದ್ದರು. ಅಕ್ರಮ ಗಣಿಗಾರಿಕೆ ತನಿಖೆ ನಡೆಸಿದ್ದ ಆಗಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಜನಾರ್ದನ ರೆಡ್ಡಿ ಅವರ ದಬ್ಬಾಳಿಕೆ ನೋಡೇ ‘ರಿಪಬ್ಲಿಕ್ ಬಳ್ಳಾರಿ’ ಎಂದು ಕರೆದಿದ್ದು. ಅಂದರೆ, ಅವರು ಹೇಳಿದ್ದೇ ಕಾಯ್ದೆ-ಕಾನೂನು. ಅವರ ಎದುರು ಮಾತನಾಡುವ ತಾಕತ್ತು ಯಾರಿಗೂ ಇರಲಿಲ್ಲ.
ಈಗ ಅವರು ಮಾಡಿದ್ದೇ ಅವರಿಗೆ ತಿರುಗು ಬಾಣವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಭರತ್ ರೆಡ್ಡಿ ನಡೆಯುತ್ತಿದ್ದಾರೆ. ತಮ್ಮ ನಾಯಕನ ತಾಕತ್ತು ಪ್ರದರ್ಶಿಸುವ ಸಲುವಾಗಿಯೇ ಅವರ ಹಿಂಬಾಲಕರು ಗುರುವಾರ ಪೋಸ್ಟರ್ ಹಾಕಲು ಜನಾರ್ದನ ರೆಡ್ಡಿ ಮನೆ ಬಳಿಗೆ ಹೋಗಿದ್ದಾರೆ. ಪೋಸ್ಟರ್ ಹಾಕಿದ್ದಾರೆ. ಜನಾರ್ದನ ರೆಡ್ಡಿ ಬೆಂಬಲಿಗರು ಅದಕ್ಕೆ ಆಕ್ಷೇಪಿಸಿ, ಪ್ರತಿರೋಧ ತೋರಿದ್ದಾರೆ. ಉಭಯ ನಾಯಕರ ಖಾಸಗಿ ಗನ್ ಮ್ಯಾನ್‌ಗಳು ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ಒಂದು ಜೀವ ಹೋಗಿದೆ. ಈ ಜೀವಕ್ಕೆ ಹೊಣೆ ಯಾರು? ಅವರ ಕುಟುಂಬಕ್ಕೆ ದಿಕ್ಕುದೆಸೆ ಯಾರು?
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ 2011ರಲ್ಲಿ ಬಂಧಿತರಾದ ಬಳಿಕವಷ್ಟೇ ನಾರಾಯಣ ರೆಡ್ಡಿ ಮತ್ತಿತರರು ನಿಟ್ಟುಸಿರು ಬಿಡುವಂತಾಯಿತು. ಜಾಮೀನು ಪಡೆದು ಹೊರ ಬಂದ ನಂತರ ಬಳ್ಳಾರಿಗೆ ಬರದಂತೆ ನಿರ್ಬಂಧ ಹಾಕಲಾಗಿತ್ತು. ಪರಿಣಾಮವಾಗಿ ಬಿಜೆಪಿ ಟಿಕೆಟ್ ಪಡೆದು ಗಂಗಾವತಿಯಿಂದ ಆಯ್ಕೆಯಾದರು. ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ಅನುಮತಿ ಸಿಕ್ಕ ಬಳಿಕ ಅವರು ಭರತ್ ರೆಡ್ಡಿ ವಿರುದ್ಧ್ದ ತೊಡೆ ತಟ್ಟಿದ್ದಾರೆ. ಬಳ್ಳಾರಿಯಲ್ಲಷ್ಟೇ ಅಲ್ಲ, ವಿಧಾನಸಭೆ ಒಳಗೂ ತೋಳೇರಿಸಿದ್ದಾರೆ.