ಕಂಪ್ಲಿ-ಕೋಟೆ ಸಮೀಪ ಕಿರು ಸೇತುವೆಗೆ ಮುಕ್ತಿ
ಭರದಿಂದ ಸಾಗುತ್ತಿದೆ ಸೇತುವೆ ಪುನರ್ ನಿರ್ಮಾಣ ಕಾಮಗಾರಿ
ಬಳ್ಳಾರಿ / ಕಂಪ್ಲಿ: ಪಟ್ಟಣದ ಹೊರವಲಯದ ಕಂಪ್ಲಿ-ಗಂಗಾವತಿ ರಾಜ್ಯ ಹೆದ್ದಾರಿ-29ರಲ್ಲಿನ ಕೋಟೆ ಹತ್ತಿರದ ದರ್ಗಾದ ತಿರುವು ರಸ್ತೆಯಲ್ಲಿ ವರ್ಷಗಳಿಂದ ಅಪಘಾತಗಳಿಗೆ ಕಾರಣವಾಗಿದ್ದ ಕಿರು ಸೇತುವೆಗೆ ಕೊನೆಗೂ ಮುಕ್ತಿ ದೊರೆತಿದೆ. ಸಿದ್ದಿವಿನಾಯಕ ದೇವಸ್ಥಾನದ ಸಮೀಪ ವಿಜಯನಗರ ಉಪಕಾಲುವೆ ಮೇಲೆ ನಿರ್ಮಿಸಲಾಗಿದ್ದ ಈ ಸೇತುವೆಯ ಪುನರ್‌ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಭರದಿಂದ ಕೈಗೊಂಡಿದೆ.
ಈ ಸೇತುವೆಯ ಎರಡು ಬದಿಗಳ ರಕ್ಷಣಾ ಗೋಡೆಗಳು ಕುಸಿದುಹೋಗಿದ್ದರೆ, ಇನ್ನೊಂದೆಡೆ ರಸ್ತೆಯಲ್ಲಿ ದೊಡ್ಡ ಬೊಂಗ ಬಿದ್ದು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿತ್ತು. ಈ ಕಾರಣದಿಂದ ಅನೇಕ ಬಾರಿ ಅಪಘಾತಗಳು ಸಂಭವಿಸಿದ್ದವು. ಸಮಸ್ಯೆಯ ಕುರಿತು ಮಾಧ್ಯಮಗಳಲ್ಲಿ ಸಚಿತ್ರ ವರದಿಗಳು ಪ್ರಕಟವಾಗಿದ್ದರೂ, ಸೇತುವೆ ದುರಸ್ತಿ ಕಾರ್ಯ ಯಾರ ಜವಾಬ್ದಾರಿ ಎಂಬ ಗೊಂದಲದಿಂದ ಕಾಮಗಾರಿ ವಿಳಂಬವಾಗಿತ್ತು.
ರಸ್ತೆ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದರೆ, ರಸ್ತೆಯ ಕೆಳಗೆ ಹರಿಯುವ ಉಪಕಾಲುವೆ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಗೆ ಸೇರಿರುವುದರಿಂದ ಸೇತುವೆ ದುರಸ್ತಿ ವಿಚಾರದಲ್ಲಿ ಸ್ಪಷ್ಟತೆ ಇರಲಿಲ್ಲ. ಆದರೆ ಇದೀಗ ಲೋಕೋಪಯೋಗಿ ಇಲಾಖೆ ಮುಂದಾಳತ್ವ ವಹಿಸಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಿದೆ.
ಲೋಕೋಪಯೋಗಿ ಇಲಾಖೆಯು ಕಂಪ್ಲಿ ಕೋಟೆಯ ಸಮೀಪ ತುಂಗಭದ್ರಾ ನದಿಯಿಂದ ಸುಮಾರು 2 ಕಿ.ಮೀ. ರಸ್ತೆ ಆಧುನೀಕರಣ, ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿಯನ್ನು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು,ಇದೇ ಯೋಜನೆಯ ಭಾಗವಾಗಿ ಅಪಾಯಕಾರಿಯಾಗಿದ್ದ ಈ ಕಿರು ಸೇತುವೆಯನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸಲಾಗುತ್ತಿದೆ.
ಪರ್ಯಾಯ ಸಂಚಾರ ವ್ಯವಸ್ಥೆ
ಸೇತುವೆ ಕಾಮಗಾರಿ ನಡೆಯುವ ಅವಧಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದ್ದು, ತಾತ್ಕಾಲಿಕವಾಗಿ ಮಣ್ಣಿನ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಿಂದ ಎದ್ದುಬರುವ ಧೂಳಿನಿಂದ ಸುತ್ತಮುತ್ತಲ ಜಮೀನಿನ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಮಣ್ಣಿನ ರಸ್ತೆಗೆ ಪ್ರತಿದಿನ ನೀರು ಹಾಕಬೇಕೆಂದು ಸ್ಥಳೀಯ ರೈತರು ಲೋಕೋಪಯೋಗಿ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಅಂತು ಇಂತು, ಅಪಘಾತಗಳ ಭೀತಿಯಿಂದ ನಲುಗುತ್ತಿದ್ದ ಕಂಪ್ಲಿ ಕೋಟೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಇದೀಗ ನನಸಾಗುತ್ತಿದ್ದು, ಸೇತುವೆ ಕಾಮಗಾರಿ ಪೂರ್ಣಗೊಂಡ ಬಳಿಕ ಸಂಚಾರ ಮತ್ತಷ್ಟು ಸುರಕ್ಷಿತವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಕಂಪ್ಲಿ ಕೋಟೆ ಸಮೀಪದ ಸೇತುವೆ ಕಿರಿದಾಗಿದ್ದು, ಎರಡೂ ಬದಿಯ ರಕ್ಷಣಾ ಗೋಡೆಗಳು ಕುಸಿದಿದ್ದರಿಂದ ಅಪಘಾತಗಳು ಸಂಭವಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ 2 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ಸೇತುವೆಯನ್ನು ಪುನರ್ ನಿರ್ಮಿಸಲಾಗುತ್ತಿದೆ.
-ಆನಂದ ಪಮ್ಮಾರ್, ಸಹಾಯಕ ಎಂಜಿನಿಯರ್