ಸಂವಿಧಾನವೇ ರಾಚಯ್ಯ-ಕಾನೂನೇ ಕೊಡಲಿಯೆಂಬ ರೂಪಕ ಲ್ಯಾಂಡ್ ಲಾರ್ಡ್ ಸಿನೆಮಾ
PC: x.com/bunny_boy_Raghu
ಲ್ಯಾಂಡ್‌ಲಾರ್ಡ್ ಸಿನೆಮಾದ ನಾಯಕ ರಾಚಯ್ಯ ಸಂವಿಧಾನದ ಸ್ವರೂಪವಾಗಿಯೂ, ಆತ ಬಳಸುವ ಕೊಡಲಿಯು ಸಂವಿಧಾನ ಜಾರಿ ಮಾಡುವ ಕಾನೂನಿನ ರೂಪಕವಾಗಿ ಕಲ್ಪಿಸಿಕೊಂಡರೆ, ಕತೆಯ ಗಾಂಭೀರ್ಯತೆ ನಮಗೆ ಅರ್ಥವಾಗುತ್ತಾ ಹೋಗುತ್ತದೆ.
ಸಿನೆಮಾದಲ್ಲಿ ಪಾಳೆಗಾರ ಸಣ್ಣಧಣಿಯ ಮಾತಿನಿಂದ ಹೊರಡುವ ಕಾನೂನುಗಳು ಬದಲಾದರೂ ಕಟ್ಟಳೆಗಳು ಬದಲಾಗುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಿರಬಹುದು. ಆದರೆ, ನಮ್ಮ ಗ್ರಾಮಕ್ಕಲ್ಲ. ಕೂಲಿಗೆ ಕಾಳು ಮಾತ್ರವೇ. ಆಳು ಆಳಾಗಿಯೇ ಇರಬೇಕೆಂದು ಧ್ವನಿಸುವ ಮಾತುಗಳು ಪಾಳೇಗಾರಿಕೆಯ ಜಡ್ಡುಗಟ್ಟಿದ ಮನಃಸ್ಥಿತಿ ಸುಲಭವಾಗಿ ಹೋಗುವಂತಹದ್ದಲ್ಲ. ಸಂವಿಧಾನ ಜಾರಿ ಮಾಡುವವರು ಕಾನೂನಿನಡಿ ತಪ್ಪೆಂದು ಕಂಡರೂ ಸೌಮ್ಯವಾದಿಗಳಾಗಿದ್ದರೆ, ಮೌನಿಗಳಾಗಿದ್ದರೆ ಶತಮಾನಗಳಿಂದ ಕಟ್ಟಿರುವ ಜಾತಿಯ, ಮೇಲು-ಕೀಳು, ಅಸ್ಪೃಶ್ಯತೆಯ ಜಿಡ್ಡು ಹೋಗಲಾರದು. ಅದಕ್ಕೆ ಸಂವಿಧಾನದಡಿಯಲ್ಲಿ ಕಠಿಣವಾದ ಶಿಕ್ಷೆ ನೀಡಿದರೆ ಮಾತ್ರವೇ ಅಂತಹ ಜಿಡ್ಡು ಕರಗಲು ಸಾಧ್ಯ ಎಂಬುದನ್ನು ನಾಯಕನೆಂಬ ಸಂವಿಧಾನವು ಕೊಡಲಿಯೆಂಬ ಕಠಿಣವಾದ ಕಾನೂನಿನ ಅಸ್ತ್ರವಾಗಿ ಝಳಪಿಸಲಾಗಿದೆ.
ಲ್ಯಾಂಡ್ ಲಾರ್ಡ್ ಸಿನೆಮಾ ದೃಶ್ಯಗಳು 50-60ವರ್ಷದ ಹಿಂದಿನ ಕತೆಯಂತೆ ಭಾಸವಾಗಬಹುದು. ಆದರೆ, ಮಾನಸಿಕವಾಗಿ ನಮ್ಮ ಚಿಂತನೆಗಳು, ಆಲೋಚನೆಗಳು ಗತಕಾಲದ್ದೆ ಎಂಬುದನ್ನು ರಾಚಯ್ಯನ ಮಗಳು ನೆಲಕ್ಕೆ ಬಿದ್ದ ದೇವರ ವಸ್ತ್ರವನ್ನು ಎತ್ತಿ ಕೊಟ್ಟಿದ್ದಕ್ಕೆ ಮೈಲಿಗೆಯೆಂದು ಕಂಬಕ್ಕೆ ಕಟ್ಟಿಹಾಕಿ ಹೊಡೆಯುವಂತಹ ದೃಶ್ಯ, ನಮ್ಮ ಬಹುತೇಕ ಹಳ್ಳಿಗಳಲ್ಲಿ ಇವತ್ತಿಗೂ ಹೊಲೆಯ, ಮಾದಿಗರು ದೇವಸ್ಥಾನಕ್ಕೆ ಒಳಕ್ಕೆ ಪ್ರವೇಶಿದರೆ ದಂಡ ವಿಧಿಸುವಂತಹ ಶಿಕ್ಷೆಯಿದೆ ಎಂಬುದನ್ನು ಸಿನೆಮಾ ವೀಕ್ಷಕರ ಮನಸ್ಸಿಗೆ ನಾಟಿಸುವಲ್ಲಿ ಯಶಸ್ವಿಯಾಗಿದೆ.
ಶೋಷಕರು ಯಾವತ್ತೂ ಅಲ್ಪಸಂಖ್ಯಾತರಾಗಿಯೇ ಇರುತ್ತಾರೆ. ಆದರೆ, ಅಧಿಕಾರ ಹಾಗೂ ಮನುವಾದಿ ಕಟ್ಟಳೆಗಳಿಂದ ಇಡೀ ಸಮುದಾಯವನ್ನು ಬೆದರಿಸುವಂತಹ, ಪ್ರಶ್ನಿಸುವವರನ್ನು ಇಲ್ಲವಾಗಿಸುವಂತಹ ಸಾವಿರಾರು ವರ್ಷಗಳಿಂದ ಇಂದಿಗೂ ನಡೆದುಕೊಂಡು ಬರುತ್ತಿರುವ ಅನೈತಿಕತೆಯನ್ನು ಚಿತ್ರದಲ್ಲಿ ಯಶಸ್ವಿಯಾಗಿ ಕಟ್ಟಿಕೊಡಲಾಗಿದೆ. ಸಣ್ಣಧಣಿಗಳ ಪಾಳೆಗಾರಿಕೆ, ಅವರನ್ನು ಬೆಂಬಲಿಸುವ ಒಂದಷ್ಟು ಶ್ರೀಮಂತ ಕುಟುಂಬಗಳು ಮಾತ್ರ ಇರುತ್ತವೆ. ಆದರೆ, ದುಡಿಯುವ, ಜೀತಗಾರಿಕೆಯ ಕಾರ್ಮಿಕ ವರ್ಗ ದೊಡ್ಡ ಸಂಖ್ಯೆಯಲ್ಲಿರುತ್ತದೆ. ಹಾಗೆಯೇ ಪೊಲೀಸ್ ಠಾಣೆಯಲ್ಲಿ ಇನ್ ಸ್ಪೆಕ್ಟರ್ ಹೊರತುಪಡಿಸಿ ಉಳಿದ ಕಾನ್ ಸ್ಟೇಬಲ್ ಹಾಗೂ ಪೊಲೀಸರು ಜನಪರವಾಗಿಯೇ ಇರುತ್ತಾರೆ. ಅಂದರೆ, ಸಿನೆಮಾದಲ್ಲಿ ಸಣ್ಣಧಣಿ ಹೇಳಿದಂತೆಯೇ ಕಾನೂನುಗಳು ಬದಲಾವಣೆಯಾದರೂ ಪಂಚಾಯತಿಯ ಕಟ್ಟಳೆಗಳು ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಬಹುಪಾಲನ್ನು ಪಡೆಯುವವರಾಗಿಯೂ, ಬಹುಸಂಖ್ಯಾತ ಶ್ರಮಿಕರು ಒಪ್ಪತ್ತಿನ ಊಟಕ್ಕೂ ಮತ್ತೊಬ್ಬರ ಮುಂದೆ ಕೈಚಾಚುವವರಾಗಿ ಇವತ್ತಿಗೂ ಮುಂದುವರೆದುಕೊಂಡು ಬರಲಾಗುತ್ತಿದೆ.
ದುಡಿಯುವ ವರ್ಗಗಳ ಜೀವನ ಪ್ರೀತಿ, ಪರಸ್ಪರರ ನಡುವಿನ ಬಾಂಧವ್ಯದ ನೈಜತೆ ಕಾಣ್ತುಂಬಿ ಬರುವಂತಹದಾಗಿದೆ. ಧಣಿಗಳು ಒಡ್ಡುವ ಸವಾಲಿಗೆ ಹತ್ತು ಏಟಿನ ಬದಲಾಗಿ ಒಂದೇ ಏಟಿಗೆ ಭದ್ರವಾಗಿ ನೆಟ್ಟಿದ್ದ ಬಲಿಷ್ಟವಾದ ಮರದ ಕಂಬದ ತುಂಡನ್ನು ಕತ್ತರಿಸುವ ದೃಶ್ಯದಲ್ಲಿ ನಾಯಕನ ನಟನಾಗಿ ರಾಚಯ್ಯ, ತಾಯಿಯ ಪಾತ್ರದಲ್ಲಿ ಉಮಾಶ್ರೀಯ ಕೆಚ್ಚು, ಆರ್ಭಟ ನೋಡಿ ಕಣ್ತುಂಬಿಸಿಕೊಳ್ಳುವಂತಹ ಅನನ್ಯವಾದ ದೃಶ್ಯಗಳಾಗಿವೆ.
ಧಣಿಗಳು ಒಡ್ಡಿದ ಸವಾಲಿನಲ್ಲಿ ಎರಡು ಎಕರೆ ಗೆದ್ದ ರಾಚಯ್ಯ ಹೊಲದಲ್ಲಿ ಆಳೆತ್ತರಕ್ಕೆ ಬೆಳೆ ಬೆಳೆದಿರುತ್ತಾನೆ. ಇದನ್ನು ಕಂಡ ರಾಚಯ್ಯ ತಾಯಿ ಪಡುವ ಸಂತೋಷ ನಿಜಕ್ಕೂ ಪಾಳೇಗಾರಿಕೆಯ ಮನಸುಗಳನ್ನು ಕರಗಿಸುವಂತಹದ್ದಾಗಿದೆ. ಆದರೆ, ಸಿನೆಮಾದ ಪಾಳೆಗಾರ ಧಣಿಗೆ ಮನಸು ಕರಗುವುದಿಲ್ಲ; ಅಸೂಯೆಯಿಂದ ನರಳಾಡುತ್ತಾನೆ. ಆ ಅಸೂಯೆಗೆ ಪುರೋಹಿತರು, ಆಳು ಆಳಾಗಿರಬೇಕೆ ಹೊರತು ಒಡೆಯನಾಗಬಾರದು. ಇದು ಕೇಡಿನ ಮುನ್ಸೂಚನೆಯೆಂಬ ಮನುವಾದಿ ಚಿಂತನೆಗಳು ಭಿತ್ತುತ್ತಾರೆ. ಧಣಿಯ ಪಾಳೆಗಾರಿಕೆ ಮನಃಸ್ಥಿತಿಯಿಂದ ರಾಚಯ್ಯನ ಹೊಲಕ್ಕೆ ದನಗಳನ್ನು ಬಿಟ್ಟು ಹಾಳು ಮಾಡುತ್ತಾನೆ. ಇಲ್ಲಿ ಧಣಿಗಳು ಹಾಗೂ ಪೂಜಾರಿಗಳ ಕೂತು ತಿನ್ನುವ ಮನಸ್ಥಿತಿ ಯಾವ ರೀತಿ ಆಲೋಚಿಸುತ್ತದೆ ಹಾಗೂ ದುಡಿದವರ ಜೀವನ ಪ್ರೀತಿ ಎಂತಹದ್ದು ಎಂಬುದನ್ನು ಸಿನೆಮಾ ದಲ್ಲಿ ಉಮಾಶ್ರೀ ಅವರ ಮನೋಜ್ಞ ಅಭಿನಯ, ಹಚ್ಚ ಹಸಿರಿನಿಂದ ಕಂಗೊಳಿಸುವ ಹೊಲಗಳು, ದುಡಿಮೆಯೇ ದೇವರೆಂದು ಬದುಕುವ ರಾಚಯ್ಯ, ಆತನ ಮುಗ್ಧತೆ, ಆ ಮುಗ್ಧತೆಯಲ್ಲಿ ಅಡಗಿರುವ ರೋಷ, ಕಿಚ್ಚಿ, ಸ್ವಾಭಿಮಾನವನ್ನು ಸಿನೆಮಾವನ್ನು ನೋಡಿಯೇ ಮನಸಿನಾಳಕ್ಕೆ ಬಿಟ್ಟುಕೊಳ್ಳಬೇಕು.
ಇವತ್ತಿಗೂ ಪಾಳೇಗಾರಿಕೆ ಮನಃಸ್ಥಿತಿ ಹೊಂದಿರುವವರಿಗೆ ಕಣ್ತೆರಿಸುವಂತಹ ದೃಶ್ಯಗಳನ್ನು ಸಿನೆಮಾದಲ್ಲಿ ಅಂಧ ಹುಡುಗಿಯ(ಕಣ್ಣಿಲ್ಲದ) ಪಾತ್ರದಲ್ಲಿ ನಿರ್ದೇಶಕರು ಚಿತ್ರಿಸಿದ್ದಾರೆ. ವೈದ್ಯರು ನಿಮ್ಮ ಮಗಳಿಗೆ ಕಣ್ಣ ಬರಲ್ಲ ಅಂದಾಗ, ತನ್ನಪ್ಪ ಮಗಳನ್ನು ಹೆಗಲ ಮೇಲೆ ಹೊತ್ತು ಕಣ್ಣೀರಿಡುತ್ತಾ ಬರುವಾಗ, ಮಗಳು ಯಾಕಪ್ಪ ಅಳ್ತೀಯಾ, ನಂಗೆ ಎರಡು ಕಣ್ಣಿಲ್ಲದೇ ಇರಬಹುದು. ನಿನ್ನದು, ನಿಂಗವ್ವದು, ಭಾಗ್ಯಕ್ಕದು ಎಲ್ಲರ ಕಣ್ಣುಗಳು ನನ್ನವೇ ತಾನೆ ಅಪ್ಪ ಅನ್ನುವ ಮಾತು ಹಾಗೂ ಧನಿಗಳ ಕಡೆಯವರು ನಡೆಸಿದ ಅಪಘಾತದಲ್ಲಿ ತನ್ನ ಅಪ್ಪ ಆಸ್ಪತ್ರೆಯಲ್ಲಿ ಸತ್ತು ಮಲಗಿರುವಾಗ, ಆ ಬಗ್ಗೆ ತಿಳಿಯದ ಕಣ್ಣುಕಾಣದ ಮಗಳು ತನ್ನ ಅಪ್ಪನನ್ನು ಮುಟ್ಟಿ ರಕ್ತವನ್ನು ಸ್ಪರ್ಶಿಸಿ ಎಲ್ಲಿ ಬಿದ್ದು ಗಲೀಜು ಮಾಡಿಕೊಂಡಿದ್ದೀಯಾ ಅಪ್ಪ. ಅದ್ಕೆ ಹೆಚ್ಚು ಕುಡಿಬೇಡ ಎನ್ನುವುದು, ತನ್ನಪ್ಪ ಎಬ್ಬಿಸಿದರೂ ಎದ್ದೇಳದೆ ಇದ್ದಾಗ ನಿದ್ದೆ ಮಾಡ್ತಿದ್ದೀಯಾ. ಆದರೂ ನನ್ನ ಒಂದು ಮಾತಿಗೆ ಎದ್ದೇಳ್ತಿದ್ದೆ. ಓ ತುಂಬಾ ನಿದ್ದೆ ಬಂದಿದಿಯಾ ಮಲ್ಕೋ ಎನ್ನುವ ಮಾತಿನ ದೃಶ್ಯಗಳು ಎಂತಹ ಕಲ್ಲು ಹೃದಯದ ಮನಸನ್ನು ಕರಗಿಸುವಂತಹದ್ದಾಗಿದೆ.
ಲ್ಯಾಂಡ್ ಲಾರ್ಡ್ ಸಿನೆಮಾ ಎಲ್ಲ ಜಾತಿಯ, ವರ್ಗದ, ಸ್ಥರದ, ವೃತ್ತಿಯ ಜನರು ತಮ್ಮ ಜೀವನಾನುಭವ, ತಿಳುವಳಿಕೆಗೆ ತಕ್ಕ ಹಾಗೆ ಕನೆಕ್ಟ್ ಮಾಡಿಕೊಳ್ಳಬಹುದು. ಪರಸ್ಪರರ ನಡುವೆ ಜೀವನ ಪ್ರೀತಿಯಿದ್ದರೆ ಮಾತ್ರ ಮನಸು ಅರಳಲು ಸಾಧ್ಯ ಎಂಬುದನ್ನು ರಾಚಯ್ಯನ ಹೆಂಡತಿ ನಿಂಗವ್ವನ ಪಾತ್ರವು ಮುದನೀಡುತ್ತದೆ. ಮನಸಿಗೆ ಹೊಸವಿಚಾರ, ಮಾನವೀಯ ಮೌಲ್ಯಗಳು ತಾಕದಿದ್ದರೆ, ಯಂತ್ರಗಳಾಗಿರುತ್ತೇವೆಯೇ ವಿನಃ ಮನುಷ್ಯರಾಗಿರುವುದಿಲ್ಲವೆಂದು ಸಣ್ಣಧಣಿ ಹಾಗೂ ಅವರ ಮನೆಯ ಹೆಂಗಸರ ಮುಖಭಾವ ಸಿನೆಮಾದಲ್ಲಿ ವಸ್ತುನಿಷ್ಟವಾಗಿ ವ್ಯಕ್ತವಾಗಿದೆ.
ಸಮಾಜವು ಆಧುನಿಕ, ಮಾಹಿತಿ ತಂತ್ರಜ್ಞಾನದಿಂದ ಮೇಲ್ನೋಟಕ್ಕೆ ಎಷ್ಟೇ ಕಂಗೊಳಿಸಿದರೂ ಆಂತರ್ಯದಲ್ಲಿ ಅಸ್ಪೃಶ್ಯತೆಯನ್ನು ಬೆಂಬಲಿಸುವ, ಅಸೂಯೆ ಮನಸ್ಥಿತಿಯನ್ನು ಹೊಂದಿರುವ ಸಮುದಾಯ ಇರುವವರಿಗೆ ಚಲನೆಯಿಲ್ಲದೆ ಯಥಾಸ್ಥಿತಿಯಲ್ಲಿದ್ದು, ಕೊಳೆತು ನಾರುತ್ತಿರುತ್ತದೆ. ಇದಕ್ಕಿರುವ ಒಂದೇ ಔಷಧಿಯೆಂದರೆ ದೇಶದ ಪ್ರತಿಯೊಬ್ಬರು ಸಂವಿಧಾನದಡಿ ಬದುಕನ್ನು ಸಾಗಿಸುವುದೊಂದೆ ಪರಿಹಾರವೆಂದು ಲ್ಯಾಂಡ್ ಲಾರ್ಡ್ ಗಟ್ಟಿದನಿಯಲ್ಲಿ ಹೇಳಲು ಹೊರಟಿದೆ.
ಅಂತಿಮವಾಗಿ ಲ್ಯಾಂಡ್ ಲಾರ್ಡ್ ಸಿನೆಮಾ ಕುರಿತು ಹೇಳುವುದಾದರೆ, ಹತ್ತಾರು ಸಿನೆಮಾಗೆ ಆಗುವಷ್ಟು ಕತೆಯ ಹಂದರವನ್ನು ಒಂದೇ ಸಿನೆಮಾದಲ್ಲಿ ಹೇಳಿಬಿಡಬೇಕೆಂಬ ಕಾತುರ, ಆತುರ ನಿರ್ದೇಶಕ ಜಡೇಶ್ ಅವರಿಗೆ ಯಾಕೆ ಬಂತೋ ಎಂಬುದನ್ನು ಅವರೇ ಹೇಳಬೇಕು. ಇನ್ನು ಸಂಭಾಷಣೆ ಮಾಸ್ತಿ ಸರ್ ಅವರ ತಂಡದ ಮಾನವೀಯ ಸೃಜನಶೀಲತೆಯನ್ನು ಸಿನೆಮಾ ನೋಡುವ ಮೂಲಕ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಎಲ್ಲ ಪಾತ್ರಗಳು ಪರಕಾಯ ಪ್ರವೇಶ ಮಾಡಿಕೊಂಡಂತೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ.