×
Ad

ಬೀದರ್ ಹಿಂ.ವ. ಕಲ್ಯಾಣ ಇಲಾಖೆಯಲ್ಲಿ ಆದೇಶ ಉಲ್ಲಂಘನೆ

ಸರಕಾರ ಆದೇಶದ ವಿರುದ್ಧ ಹೊರಗುತ್ತಿಗೆ ನೌಕರರ ನಿಯೋಜನೆ

Update: 2026-05-30 15:18 IST

ಬೀದರ್: ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಅವರ ಮೂಲ ಕೆಲಸ ಬಿಟ್ಟು ಕಚೇರಿ ಕೆಲಸಗಳಿಗೆ ನಿಯೋಜನೆ ಮಾಡಬಾರದು ಎನ್ನುವ ಸರಕಾರದ ಆದೇಶದ ವಿರುದ್ಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹೊರಗುತ್ತಿಗೆ ನೌಕರರನ್ನು ಕಚೇರಿ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ.

ಅಡುಗೆ ಸಹಾಯಕ, ಅಡುಗೆಯವರು ಎಂದು ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು, ಅವರ ಮೂಲ ಹುದ್ದೆಯಲ್ಲಿ ಉಳಿಯಲು ಬಿಡದೆ ಕಂಪ್ಯೂಟರ್ ಆಪರೇಟರ್ ಅಥವಾ ಬೇರೆ ಬೇರೆ ಕೆಲಸಗಳಿಗೆ ನಿಯೋಜನೆ ಮಾಡಿ ಸರಕಾರದ ಆದೇಶ ಉಲ್ಲಂಘಿಸಿರುವ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇಲಾಖೆಯ ಜಿಲ್ಲಾಮಟ್ಟದ ಮೂಲಗಳ ಪ್ರಕಾರ ಬಸವಕಲ್ಯಾಣದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿನಿಲಯದಲ್ಲಿ ಶ್ರೀದೇವಿ ಅವರನ್ನು ಹೊರಗುತ್ತಿಗೆಯಡಿ ಅಡುಗೆಯವರು ಎಂದು ನೇಮಕ ಮಾಡಿಕೊಳ್ಳಲಾಗಿದೆೆ. ಆದರೆ ಶ್ರೀದೇವಿ ಯಾರು ಎಂಬುದೇ ನನಗೆ ಗೊತ್ತಿಲ್ಲ ಎಂದು ಆ ವಸತಿ ನಿಲಯದ ಮೇಲ್ವಿಚಾರಕಿ ತಿಳಿಸಿದ್ದಾರೆ. ಆದರೆ ಶ್ರೀದೇವಿ ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ!

ಮಂಠಾಳ್ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ನೇಮಕಗೊಂಡ ಹೊರಗುತ್ತಿಗೆ ಸಿಬ್ಬಂದಿಯಾಗಿದ್ದ ಅಡುಗೆ ಸಹಾಯಕ ಶರಣಪ್ಪ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಗ್ರೂಪ್ ಡಿ ಸಿಬ್ಬಂದಿಯಾಗಿ ಸರಕಾರದ ಆದೇಶದ ವಿರುದ್ಧ ನಿಯೋಜನೆ ಮಾಡಲಾಗಿದೆ. ಅಲ್ಲದೆ ಶರಣಪ್ಪ ಅವರನ್ನು ಬಹುತೇಕ ಎರಡು ವರ್ಷಕ್ಕಿಂತಲೂ ಹೆಚ್ಚು ಜಿಲ್ಲಾ ಕಚೇರಿಯಲ್ಲಿಯೇ ಕೆಲಸ ನೀಡಲಾಗಿದೆ.

ಭಾಲ್ಕಿ, ಹುಲಸೂರ್ ಹಾಗೂ ಚಿಟಗುಪ್ಪಾ ಸೇರಿಜಿಲ್ಲೆಯ ಬಹುತೇಕ ಕಡೆ ಹಿಂದುಳಿದ ವರ್ಗಗಳ ಕಲ್ಯಾಣ ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ ಸಿಬ್ಬಂದಿಯನ್ನು ತಮ್ಮ ಮೂಲ ಹುದ್ದೆ ಬಿಟ್ಟು ಬೇರೆ ಕಡೆಗೆ ಕೆಲಸಕ್ಕೆ ನಿಯೋಜನೆಗೊಳಿಸಲಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದವರನ್ನು ಅವರ ಮೂಲ ಕೆಲಸ ಬಿಟ್ಟು ಬೇರೆ ಕಡೆಗೆ ನಿಯೋಜನೆ ಮಾಡಬಾರದು ಎನ್ನುವ ಸರಕಾರದ ಆದೇಶವನ್ನು ಸಂಪೂರ್ಣವಾಗಿ ಧಿಕ್ಕರಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗಿಯಾದ ಸಿಬ್ಬಂದಿ ಮರು ನೇಮಕ: ಬಸವಕಲ್ಯಾಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಪ್ರಮೋದ ಕುಮಾರ್‌ರನ್ನು ಹೊರಗುತ್ತಿಗೆ ಅಡುಗೆ ಸಹಾಯಕರಾಗಿ ನೇಮಕಾತಿ ಮಾಡಲಾಗಿತ್ತು. ಆದರೆ ಅವರು ನೇಮಕಗೊಂಡ ಕೆಲಸದಲ್ಲಿ ಒಂದು ದಿನ ಕೂಡ ಕೆಲಸ ಮಾಡದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಚೇರಿಯಲ್ಲಿಯೇ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ ಎಂದು 2025ರ ಅ. 21ರಂದು ಕೆಲಸದಿಂದ ಬಿಡುಗಡೆಗೊಳಿಸಲಾಗಿತ್ತು. ಆದರೆ, ಮತ್ತೆ ಅವರನ್ನು ಅಡುಗೆ ಸಹಾಯಕರಾಗಿ ನೇಮಕ ಮಾಡಲಾಗಿದ್ದು, ಸದ್ಯಕ್ಕೆ ಅವರು ತಾಲೂಕು ಕಚೇರಿಯಲ್ಲಿಯೇ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಡುಗೆ ಸಹಾಯಕ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಅವರು ತಾಲೂಕು ಕಚೇರಿಯಲ್ಲಿ ಯಾವ ಅರ್ಹತೆ ಮೇಲೆ ಕಂಪ್ಯೂಟರ್‌ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದ್ದು, ಅಧಿಕಾರಿಗಳು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಹೊರಗುತ್ತಿಗೆ ಆಧಾರದ ಮೇಲೆ ತುಂಬಾ ಜನ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ನೇಮಕಗೊಂಡ ಕೆಲಸವರಿಗೆ ಏನಾದರೂ ಸಮಸ್ಯೆಗಳಿದ್ದರೆ ಬೇರೆ ಕಡೆಗೆ ನಿಯೋಜನೆ ಮಾಡಿರಬಹುದು. ಅದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ.

-ಸುನೀತಾ ಪಟ್ವಾದಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ, ಬೀದರ್ ಇಲಾಖೆಯ ಜಿಲ್ಲಾಧಿಕಾರಿ, ಬೀದರ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಲವಾರು ವಸತಿನಿಲಯಗಳಲ್ಲಿ ಹೊರಗುತ್ತಿಗೆ ನೌಕರರು ಮೂಲ ಹುದ್ದೆಯಲ್ಲಿ ಕೆಲಸ ಮಾಡುತ್ತಿಲ್ಲ. ಅವರು ಕೆಲಸ ಮಾಡುವ ಸ್ಥಳದ ಬಗ್ಗೆಯೂ ಮಾಹಿತಿ ಇಲ್ಲ. ಆದರೆ ವೇತನ ಮಾತ್ರ ಪಡೆಯುತ್ತಿದ್ದಾರೆ. ಇದರ ಬಗ್ಗೆ ಕಮಿಷನರ್ ಹಾಗೂ ಕಾರ್ಯದರ್ಶಿಗೆ ಮನವಿ ನೀಡಲಾಗಿದ್ದು, ತನಿಖೆಗೆ ಆದೇಶಿಸಿದ್ದಾರೆ. ಆದರೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇನ್ನೂ ತನಿಖೆ ಪ್ರಾರಂಭ ಮಾಡಿಲ್ಲ. ಹಾಗಾಗಿ ತಕ್ಷಣವೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಹಾಗೂ ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಹಾಗೆಯೇ ಇಲ್ಲಿವರೆಗೆ ಬೋಗಸ್ ವೇತನ ಪಡೆದದ್ದನ್ನು ವಸೂಲಿ ಮಾಡಿ ಸರಕಾರಕ್ಕೆ ಮರಳಿಸಬೇಕು.

-ಗಗನ್,ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ

contributor

Similar News