×
Ad

ಬಳ್ಳಾರಿ: ಅಗ್ನಿಶಾಮಕ ವಾಹನ ಕೊರತೆ; ಸಂಕಷ್ಟದಲ್ಲಿ ಕುರಗೋಡು ಪಟ್ಟಣದ ನಾಗರಿಕರು

Update: 2026-05-30 15:27 IST

ಬಳ್ಳಾರಿ: ಕುರುಗೋಡು ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಪ್ರಸ್ತುತ ಒಂದೇ ಅಗ್ನಿ ಶಾಮಕ ವಾಹನ ಲಭ್ಯವಿರುವುದರಿಂದ, ಏಕಕಾಲಕ್ಕೆ ಹಲವು ಕಡೆ ಅಗ್ನಿ ಅವಘಡಗಳು ಸಂಭವಿಸಿದರೆ ಸಿಬ್ಬಂದಿ ಪರದಾಡುವಂತಾಗಿದೆ.

ಈ ಹಿಂದೆ ಠಾಣೆಯಲ್ಲಿ ಎರಡು ವಾಹನಗಳಿದ್ದವು. ಆದರೆ, ಒಂದು ವಾಹನವು 15 ವರ್ಷಗಳ ಸೇವೆ ಪೂರ್ಣಗೊಳಿಸಿದ್ದರಿಂದ ಎರಡು ವರ್ಷಗಳ ಹಿಂದೆಯೇ ಅದರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಕುರುಗೋಡು ತಾಲೂಕಿನ 33 ಹಳ್ಳಿಗಳು, 25 ಕ್ಯಾಂಪ್‌ಗಳು ಸೇರಿದಂತೆ ನೆರೆಯ ಸಿರಿಗೇರಿ,ಕಂಪ್ಲಿ, ಎಮ್ಮಿಗನೂರು ಹಾಗೂ ಬಳ್ಳಾಪುರ ಭಾಗದ ಗ್ರಾಮಗಳು ಅಗ್ನಿ ಅವಘಡದ ಸಂದರ್ಭಗಳಲ್ಲಿ ಇದೇ ಠಾಣೆಯನ್ನು ಅವಲಂಬಿಸಿವೆ.

ಅನಾಹುತಕ್ಕೆ ಆಹ್ವಾನ: ಬೇಸಿಗೆಯ ತೀವ್ರತೆಯಿಂದಾಗಿ ಈ ಭಾಗದಲ್ಲಿ ಗುಡಿಸಲು, ಹುಲ್ಲಿನ ಬಣವೆ ಹಾಗೂ ಇತರ ಅಗ್ನಿ ಅವಡಗಳ ಪ್ರಮಾಣ ಹೆಚ್ಚುತ್ತಿದೆ. ಒಂದೇ ದಿನ ಎರಡು ಕಡೆ ಬೆಂಕಿ ಕಾಣಿಸಿಕೊಂಡರೆ ಸಕಾಲದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಕಷ್ಟಸಾಧ್ಯವಾಗಿದೆ.

ಇಂತಹ ಸಂದರ್ಭದಲ್ಲಿ 30 ರಿಂದ 50 ಕಿ.ಮೀ. ದೂರದಲ್ಲಿರುವ ಬಳ್ಳಾರಿ ಅಥವಾ ಸಿರುಗುಪ್ಪದಿಂದ ಅಗ್ನಿಶಾಮಕ ವಾಹನಗಳು ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಆಸ್ತಿಪಾಸ್ತಿಗಳು ಭಸ್ಮವಾಗುತ್ತಿವೆ.

ಹೆಚ್ಚುತ್ತಿರುವ ಅಗ್ನಿ ಅವಘಡಗಳು

ಇತ್ತೀಚೆಗೆ ಪಟ್ಟಣದ ಮನೆಯೊಂದರಲ್ಲಿ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಾಗ ಅಗ್ನಿಶಾಮಕ ವಾಹನ ಅಲ್ಲಿಗೆ ತೆರಳಿತ್ತು. ಅದೇ ಸಮಯದಲ್ಲಿ ಸೋಮಲಾಪುರ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿತ್ತು. ಒಂದೇ ವಾಹನವಿರುವುದರಿಂದ ಎರಡೂ ಕಡೆ ಸಕಾಲಕ್ಕೆ ಸ್ಪಂದಿಸಲು ಸಾಧ್ಯವಾಗಲಿಲ್ಲ.

ವಾರ್ಷಿಕವಾಗಿ ಸರಾಸರಿ 100ಕ್ಕೂ ಹೆಚ್ಚು ಅಗ್ನಿ ಅವಘಡಗಳು ಸಂಭವಿಸುತ್ತಿದ್ದರೂ ಇಲಾಖೆ ಮತ್ತೊಂದು ವಾಹನ ಒದಗಿಸದಿರುವುದು ಬೇಸರದ ಸಂಗತಿ ಎಂದು ರೈತ ಮುಖಂಡ ಗುರಳ್ಳಿ ರಾಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿ ಕೊರತೆ: ಠಾಣೆಯಲ್ಲಿ 26 ಸಿಬ್ಬಂದಿ ಇರಬೇಕಾದಲ್ಲಿ ಪ್ರಸ್ತುತ 21 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 5 ಹುದ್ದೆಗಳು ಖಾಲಿಯಿವೆ. ಜೊತೆಗೆ ಸಿಬ್ಬಂದಿಗೆ ವಸತಿ ಗೃಹ ನಿರ್ಮಿಸಲು ಈವರೆಗೂ ಸರಕಾರಿ ಜಾಗ ಗುರುತಿಸದಿರುವುದು ಸಿಬ್ಬಂದಿಯ ಸಂಕಷ್ಟಕ್ಕೆ ಕಾರಣವಾಗಿದೆ.

2005ರಲ್ಲಿ ಆರಂಭವಾದ ಅಗ್ನಿಶಾಮಕ ಠಾಣೆ: 2005ರಲ್ಲಿ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಕುರುಗೋಡು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಎಪಿಎಂಸಿ ಉಪ ಮಾರುಕಟ್ಟೆಯ ಶೆಡ್ನಲ್ಲಿ ಅಗ್ನಿಶಾಮಕ ಠಾಣೆ ಆರಂಭಗೊಂಡಿತ್ತು.

ನಂತರ 2010ರಲ್ಲಿ ಜಿ. ಜನಾರ್ಧನ ರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹಾಗೂ ಟಿ.ಎಚ್. ಸುರೇಶ್ ಬಾಬು ಶಾಸಕರಾಗಿದ್ದ ಅವಧಿಯಲ್ಲಿ ಬಳ್ಳಾರಿ ರಸ್ತೆಯಲ್ಲಿ ನಿರ್ಮಿಸಲಾದ ನೂತನ ಸುಸಜ್ಜಿತ ಕಟ್ಟಡಕ್ಕೆ ಠಾಣೆಯನ್ನು ಸ್ಥಳಾಂತರಿಸಲಾಯಿತು. ಠಾಣೆಗೆ ಸುಸಜ್ಜಿತ ಕಟ್ಟಡವಿದ್ದರೂ ಸಿಬ್ಬಂದಿಗೆ ವಸತಿ ಗೃಹಗಳಿಲ್ಲದಿರುವುದು ಸಮಸ್ಯೆಯಾಗಿದೆ.

ಡಿವಿಜನ್ ಹಾಗೂ ಜಿಲ್ಲಾ ಕಚೇರಿಗಳಿಗೆ ವಾಹನ ಮತ್ತು ಸಿಬ್ಬಂದಿ ಕೊರತೆ ಕುರಿತು ಮನವಿ ಸಲ್ಲಿಸಲಾಗಿದೆ. ಹಂತ ಹಂತವಾಗಿ ವಾಹನಗಳನ್ನು ನೀಡಲಾಗುವುದು ಹಾಗೂ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ.

-ಎಂ. ಮೈಲಾರಪ್ಪ,

ಅಗ್ನಿಶಾಮಕ ಠಾಣಾಧಿಕಾರಿ, ಕುರುಗೋಡು ಅಗ್ನಿಶಾಮಕ ಠಾಣಾಧಿಕಾರಿ, ಕುರುಗೋಡು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿಲಾನಸಾಬ್ ಬಡಿಗೇರ್

contributor

Similar News