ಇಂಡಿ ತಾಲೂಕಿನಲ್ಲಿ ಅನಧಿಕೃತ ಇಟ್ಟಂಗಿ ಭಟ್ಟಿಗಳ ಹಾವಳಿ?
ಅಕ್ರಮ ಮಣ್ಣು ಸಾಗಾಟದ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಇಂಡಿ: ತಾಲೂಕಿನ ವಿವಿಧ ಭಾಗಗಳಲ್ಲಿ ಅನಧಿಕೃತ ಇಟ್ಟಂಗಿ ಭಟ್ಟಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇವುಗಳಿಗೆ ಪರವಾನಗಿ ಇಲ್ಲದೆ ಮಣ್ಣು ಸಾಗಾಟ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಹಗಲು-ರಾತ್ರಿ ಎನ್ನದೆ ಭಾರೀ ವಾಹನಗಳ ಮೂಲಕ ಮಣ್ಣು ಸಾಗಾಟ ನಡೆಯುತ್ತಿದ್ದರೂ ಸಂಬಂಧಿತ ಇಲಾಖೆಗಳು ಮತ್ತು ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಇಂಡಿ ನಗರ ಸೇರಿದಂತೆ ಇಂಗಳಗಿ, ಅಗರಖೇಡ, ಗುಬ್ಬೇವಾಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಒಟ್ಟು 39ಕ್ಕೂ ಹೆಚ್ಚು ಇಟ್ಟಂಗಿ ಭಟ್ಟಿಗಳು ಕಾರ್ಯನಿರ್ವಹಿಸುತ್ತಿವೆ ಎನ್ನಲಾಗುತ್ತಿದೆ. ಕೆಲವು ಭಟ್ಟಿ ಮಾಲೀಕರಿಗೆ ಮತ್ತು ಜಮೀನು ಮಾಲೀಕರಿಗೆ ಮಾತ್ರ ನೋಟಿಸ್ ಜಾರಿಯಾಗಿದ್ದು, ಉಳಿದವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಪ್ರಶ್ನೆಗೆ ಕಾರಣವಾಗಿದೆ.
ಇಂಡಿನಗರದಲ್ಲಿ ಆರು ಇಟ್ಟಂಗಿ ಭಟ್ಟಿ ಮಾಲೀಕರಿಗೆ ಹಾಗೂ ಆರು ಜಮೀನು ಮಾಲೀಕರಿಗೆ ನೊಟೀಸ್ ಜಾರಿಮಾಡಲಾಗಿದೆ. ಇನ್ನುಳಿದ ಮಾಲೀಕರಿಗೆ ಯಾಕೆ ನೊಟೀಸ್ ನೀಡಿಲ್ಲ ಎಂಬ ಪ್ರಶ್ನೆ ಮೂಡಿದೆ. ಗ್ರಾಮೀಣ ಭಾಗದಲ್ಲಿ ಯಾರಿಗೂ ಒಂದು ನೊಟೀಸ್ ಜಾರಿಯಾಗಿಲ್ಲ ಯಾಕೆ? ಎಂಬ ಪ್ರಶ್ನೆ ಕೂಡ ಉದ್ಭವವಾಗಿದೆ. ಒಂದು ವೇಳೆ ನೊಟೀಸ್ ಜಾರಿ ಮಾಡಿದ್ದರೆ ನೊಟೀಸ್ ತಲುಪಿದ 7ದಿನಗಳಲ್ಲಿ ಪ್ರತಿಕ್ರಿಯೆ ಬರದಿದ್ದರೆ ಕಂದಾಯ ಭೂ ಕಾಯ್ದೆ 1994ರ ಕಲಂ 96ರ ಅನ್ವಯ ಕ್ರಮ ಜರುಗಿಸಬಹುದಾಗಿತ್ತು. ಆದರೆ ಅದ್ಯಾವುದು ಇಲ್ಲಿ ಯಾಕೆ ನಡೆದಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡತೊಡಗಿದೆ.
ಭೂ ಪರಿವರ್ತನೆಗಾಗಿ ಅನೇಕ ಇಟ್ಟಂಗಿ ಭಟ್ಟಿ ಮಾಲೀಕರು ಹಾಗೂ ಜಮೀನು ಮಾಲಕರು ಕಂದಾಯ ಇಲಾಖೆಗೆ ಅರ್ಜಿಸಲ್ಲಿಸಿದ್ದರೂ, ಇದುವರೆಗೆ ಸ್ಪಷ್ಟ ನಿರ್ಧಾರ ಅಥವಾ ಅನುಮತಿ ದೊರೆತಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಭಟ್ಟಿಗಳ ನಿಯಮಬದ್ಧೀಕರಣ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಭೀಮಾ ನದಿಯ ದಡದಿಂದ ಕೃಷಿಗೆ ಯೋಗ್ಯವಾದ ಫಲವತ್ತಾದ ಮಣ್ಣನ್ನು ಅಗೆದು ಇಟ್ಟಂಗಿ ಭಟ್ಟಿಗಳಿಗೆ ಸಾಗಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ವಿಶೇಷವಾಗಿ ಅಗರಖೇಡ ಭಾಗದಲ್ಲಿ ಪೊಲೀಸ್ ಠಾಣೆಯ ಸಮೀಪದಿಂದಲೇ ಮಣ್ಣು ತುಂಬಿದ ವಾಹನಗಳು ಸಂಚರಿಸುತ್ತಿದ್ದರೂ, ನಿಯಂತ್ರಣ ಕ್ರಮಗಳು ಗೋಚರಿಸುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಲವು ಇಟ್ಟಂಗಿ ಭಟ್ಟಿಗಳು ನೋಂದಣಿಯಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ನೋಂದಣಿ ಪ್ರಕ್ರಿಯೆ ಕೈಗೊಳ್ಳದ ಭಟ್ಟಿಗಳ ವಿರುದ್ಧ ಸ್ಥಳೀಯ ಸಂಸ್ಥೆಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜನವಸತಿ ಪ್ರದೇಶಗಳ ಸಮೀಪದಲ್ಲಿರುವ ಇಟ್ಟಂಗಿ ಭಟ್ಟಿಗಳಲ್ಲಿ ಕಲ್ಲಿದ್ದಲು ಬಳಸಿ ಇಟ್ಟಿಗೆ ಸುಡುವುದರಿಂದ ಹೊಗೆ ಹಾಗೂ ದುರ್ವಾಸನೆ ಉಂಟಾಗಿ ವಾಯುಮಾಲಿನ್ಯ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದ್ದು, ಸಂಬಂಧಿತ ಇಲಾಖೆಗಳು ಶೀಘ್ರ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಕ್ರಮ ವಿಳಂಬವಾದರೆ ಹೋರಾಟದ ಮಾಡಬೇಕಾಗುತ್ತದೆ.
-ಸುನೀಲ ಗಾಯಕವಾಡ
ಅಗರಖೇಡ ಗ್ರಾಪಂ ಮಾಜಿ ಸದಸ್ಯ
ಇಟ್ಟಂಗಿ ಭಟ್ಟಿಗಳಿಗೆ ಅನಧಿಕೃತವಾಗಿ ಮಣ್ಣು ಅಥವಾ ಮುರುಂ ಸಾಗಾಟವಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಮಣ್ಣು ಅಥವಾಮುರುಂ ಸಾಗಾಟಕ್ಕೆ ಗಣಿಗಾರಿಕೆಇಲಾಖೆಯ ಅನುಮತಿ ಹಾಗೂ ಸರಕಾರದ ನಿಯಮಾನುಸಾರ ಚಲನ್ ಕಡ್ಡಾಯವಾಗಿದೆ. ಅಕ್ರಮ ಸಾಗಾಟ ಕಂಡುಬಂದರೆ ಡಿವೈಎಸ್ಪಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅನಧಿಕೃತ ಇಟ್ಟಂಗಿ ಭಟ್ಟಿಗಳ ಕುರಿತು ತಹಶೀಲ್ದಾರ್ ಅವರಿಗೆ ಅಗತ್ಯ ನಿರ್ದೇಶನ ನೀಡಲಾಗುವುದು.
-ಚಿದಾನಂದ ಗುರುಸ್ವಾಮಿ
ಕಂದಾಯ ಉಪ ವಿಭಾಗಾಧಿಕಾರಿ ಕಂದಾಯ ಉಪ ವಿಭಾಗಾಧಿಕಾರಿ