ಮುಂಗಾರು ಮುನ್ನವೇ ಬಿತ್ತನೆಗೆ ಸಜ್ಜಾದ ರೈತರು
ನಕಲಿ ಬೀಜ ಮಾರಾಟ ಮಾಡಿದ 10 ಕಂಪೆನಿಗಳ ಪರವಾನಿಗೆ ರದ್ದು
ರಾಯಚೂರು: ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳ ಹಿಂದೆ ಸುರಿದ ಅಲ್ಪ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ವಾರದ ಹಿಂದೆ ಸರಾಸರಿ 25.1 ಮಿ.ಮೀ. ಮಳೆಯಾಗಿದ್ದು, ವಾಡಿಕೆಯ 16 ಮಿ.ಮೀ. ಮಳೆಗಿಂತ ಹೆಚ್ಚು ದಾಖಲಾಗಿದೆ. ಆದಾಗ್ಯೂ, ಸಿಂಧನೂರು ಹಾಗೂ ದೇವದುರ್ಗ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹೀಗಾಗಿ ಎಲ್ಲೆಡೆ ಸಮರ್ಪಕ ತೇವಾಂಶ ಲಭ್ಯವಾಗಿಲ್ಲ ಎನ್ನುವುದು ಕೃಷಿ ಇಲಾಖೆಯ ಅಭಿಪ್ರಾಯವಾಗಿದೆ.
ಕೆಲ ರೈತರು ಮುಂಗಾರು ಪೂರ್ವದಲ್ಲಿಯೇ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆಯ ಆರಂಭಿಕ ಮೊಳಕೆಯ ನಂತರ ಮಳೆಯ ಕೊರತೆ ಉಂಟಾದರೆ ಬೆಳೆಗಳ ಬೆಳವಣಿಗೆ ಕುಂಠಿತವಾಗುವ ಅಪಾಯವಿದೆ. ವಿಶೇಷವಾಗಿ ರಾಯಚೂರು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕಪ್ಪು ಮಣ್ಣು ಹೆಚ್ಚಿರುವುದರಿಂದ ಭೂಮಿ ಸಂಪೂರ್ಣ ತಂಪಾದ ನಂತರವೇ ಬಿತ್ತನೆ ಕೈಗೊಳ್ಳುವುದು ಅಗತ್ಯ ಎಂದು ತಜ್ಞರು ಸೂಚಿಸಿದ್ದಾರೆ.
ಇದೇ ವೇಳೆ ರೈತರು ಮುಂಗಾರು ಕೃಷಿಗೆ ಅಗತ್ಯವಿರುವ ರಸಗೊಬ್ಬರ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ರಸಗೊಬ್ಬರಗಳ ಅಕ್ರಮ ಸಂಗ್ರಹಣೆ ಹಾಗೂ ಕೃತಕ ಅಭಾವ ತಡೆಯುವ ಉದ್ದೇಶದಿಂದ ಸರಕಾರ ಫ್ರೂಟ್ಸ್ ನೋಂದಣಿ ಮತ್ತು ಎಫ್‌ಐಡಿ ಆಧಾರದಲ್ಲಿ ರೈತರಿಗೆ ರಸಗೊಬ್ಬರ ವಿತರಣೆ ವ್ಯವಸ್ಥೆ ಜಾರಿಗೊಳಿಸಿದೆ.
ಇದರಿಂದ ನಿಜವಾದ ರೈತರಿಗೆ ಅವರ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಗೊಬ್ಬರ ಲಭ್ಯವಾಗಲಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಪ್ರಸ್ತುತ ಬೇಡಿಕೆಗೆ ಅನುಗುಣವಾದ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ರೈತರಿಗೆ ಯಾವುದೇ ಕೊರತೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಯೂರಿಯಾ, ರಸಗೊಬ್ಬರ ಅಕ್ರಮ ಮಾರಾಟ:
ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಅಕ್ರಮ ಮಾರಾಟ, ನಕಲಿ ಕೀಟನಾಶಕ ಹಾವಳಿ ಮತ್ತು ಅನಧಿಕೃತ ಬೀಜ ಮಾರಾಟ ಪ್ರಕರಣ ಬೆಳಕಿಗೆ ಬಂದಿವೆ. ನಿಯಮ ಉಲ್ಲಂಘಿಸಿದ 10 ರಸಗೊಬ್ಬರ ಮಾರಾಟ ಮಳಿಗೆ ಪರವಾನಗಿ ರದ್ದು ಪಡಿಸಿದೆ.
ಮುಂಗಾರು ಪೂರ್ವದಲ್ಲಿ ಯಾವುದೇ ಬೀಜ, ಕ್ರಿಮಿನಾಶಕ ಮಾರಾಟ ಮಾಡಬಾರದು ಎಂದು ಕೃಷಿ ಇಲಾಖೆಯ ನಿಯವಿದ್ದರೂ ಬೀಜ, ಕ್ರಿಮಿನಾಶಕ ಮಾರಾಟ ಮಾಡಿ ಕಾನೂನು ಉಲ್ಲಂಘನೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಈ ಬಾರಿ ಶೇ.35ರಷ್ಟು ಯೂರಿಯಾ ಕೊರತೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು ಯೂರಿಯಾ ಖರೀದಿಸಿ ಸಂಗ್ರಹಿಸುತ್ತಿರುವುದು ಕಂಡು ಬಂದಿದೆ.
216 ಡೀಲರ್‌ಗಳಿಗೆ ಎಚ್ಚರಿಕೆ ನೋಟಿಸ್: ಜಿಲ್ಲೆಯಲ್ಲಿ ಪರವಾನಗಿ ಪಡೆದ 662 ರಸಗೊಬ್ಬರ ಡೀಲರ್ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಮಾರಾಟ ಮಾಡುವ 246 ಡೀಲರ್‌ಗಳನ್ನು ಗುರುತಿಸಿದ ಕೃಷಿ ಇಲಾಖೆ ಮುಂಗಾರು ಬಿತ್ತನೆಗೂ ಮುನ್ನ ಯೂರಿಯಾ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದೆ.
ಎಪ್ರಿಲ್ 1ರಿಂದ ಮೇ 25ರವರೆಗೆ ರಾಯಚೂರು ತಾಲೂಕಿನ 20, ಮಾನ್ವಿ 64, ದೇವದುರ್ಗ ಮತ್ತು ಲಿಂಗಸುಗೂರು ತಲಾ 27 ಹಾಗೂ ಸಿಂಧನೂರು ತಾಲೂಕಿನ 78 ಸೇರಿ ಒಟ್ಟು 216 ಡೀಲರ್‌ಗಳಿಗೆ ಕೃಷಿ ಇಲಾಖೆ ನೋಟಿಸ್ ಜಾರಿ ಮಾಡಿದ್ದರೂ ಕೆಲವು ಡೀಲರ್‌ಗಳು ಇಲಾಖೆ ಆದೇಶ ಧಿಕ್ಕರಿಸಿ ಮಾರಾಟ ಮಾಡುವುದು ತಪಾಸಣೆ ವೇಳೆ ಕಂಡು ಬಂದಿದೆ.
20 ಡೀಲರ್‌ಗಳಿಗೆ ಶೋಕಾಸ್ ನೋಟಿಸ್: ನಿಯಮ ಉಲ್ಲಂಘಿಸಿ ಯೂರಿಯಾ ಮಾರಾಟ ಮಾಡಿದ ರಾಯಚೂರು ತಾಲೂಕಿನ 10, ಮಾನ್ವಿ 5, ಲಿಂಗಸುಗೂರು 3 ಹಾಗೂ ಸಿಂಧನೂರಿನ 2 ಡೀಲರ್ ಸೇರಿ ಒಟ್ಟು 20 ಡೀಲರ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇಲಾಖೆಯ ಕಠಿಣ ಕ್ರಮದ ನಡುವೆಯೂ ಅಕ್ರಮ ಮಾರಾಟ ಮುಂದುವರೆದಿರುವುದು ಮೇಲ್ವಿಚಾರಣಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲದೆ, ನೋಟಿಸ್ ನೀಡಿದ್ದರೂ ಯೂರಿಯಾ ಮಾರಾಟ ಮಾಡಿದ ರಾಯಚೂರಿನ 2, ಮಾನ್ವಿ 5 ಮತ್ತು ದೇವದುರ್ಗ 3 ಸೇರಿ 10 ಡೀಲರ್ ಗಳ ಪರವಾನಗಿಯನ್ನು ಕೃಷಿ ಇಲಾಖೆ ರದ್ದುಗೊಳಿಸಿದೆ.
ಪರವಾನಗಿ ಪಡೆಯದೆ ಬಿಟಿ ಹತ್ತಿ ಬೀಜ ಮಾರಾಟಮಾಡಿದ ಆರೋಪದಡಿ ಮಾನ್ವಿಯ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಜಾಗೃತ ದಳ ಅಧಿಕಾರಿಗಳು ದಾಳಿ ನಡೆಸಿದ್ದು ಅಂದಾಜು 10.69 ಲಕ್ಷ ರೂ. ಮೌಲ್ಯದ 11,070 ಬಿಟಿ ಹತ್ತಿ ಬಿತ್ತನೆ ಬೀಜ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿದ್ದಾರೆ.
ರಾಯಚೂರು ತಾಲೂಕಿನ ಬಹುತೇಕ ಗ್ರಾಮಗಳು ನೆರೆ ರಾಜ್ಯಗಳಿಗೆ ಸಂಪರ್ಕಿಸುವುದರಿಂದ ಇಲ್ಲಿನ ರಸಗೊಬ್ಬರ ಬೇರೆ ರಾಜ್ಯಗಳಿಗೆ ಹೋಗುತ್ತದೆ. ಇದರಿಂದ ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಹೆಚ್ಚುತ್ತದೆ. ಆದ್ದರಿಂದ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಸರಿಯಾಗಿ ತಪಾಸಣೆ ನಡೆಸಬೇಕೆಂದು.
-ಬಸನಗೌಡ ದದ್ದಲ್
ರಾಯಚೂರು ಗ್ರಾಮೀಣ ಶಾಸಕ
ಜಿಲ್ಲೆಯಲ್ಲಿ 5.72 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ:
2026ರ ಮುಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಒಟ್ಟು 5.72 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಹತ್ತಿ (3.14 ಲಕ್ಷ ಹೆಕ್ಟೇರ್), ತೊಗರಿ (1.95 ಲಕ್ಷ ಹೆಕ್ಟೇರ್), ಭತ್ತ (1.93 ಲಕ್ಷ ಹೆಕ್ಟೇರ್), ಇತರೆ ಬೆಳೆಗಳು; ಸೂರ್ಯಕಾಂತಿ, ಶೇಂಗಾ, ಹೆಸರು, ಸಜ್ಜೆ, ಎಳ್ಳು ಸೇರಿದಂತೆ ವಿವಿಧ ಬೆಳೆಗಳು. ಇವುಗಳಲ್ಲಿ ಖುಷ್ಕಿ ಪ್ರದೇಶ 2.62 ಲಕ್ಷ ಹೆಕ್ಟೇರ್ ಹಾಗೂ ನೀರಾವರಿ ಪ್ರದೇಶ 5.72 ಲಕ್ಷ ಹೆಕ್ಟೇರ್ ಒಳಗೊಂಡಿದೆ.