×
Ad

ಕುಸಿತದ ಭೀತಿಯಲ್ಲಿ 611 ಶಾಲಾ ಕೊಠಡಿಗಳು

ಅಪಾಯದ ನಡುವೆಯೇ ತರಗತಿಗಳು; ಶಿಕ್ಷಕರು, ವಿದ್ಯಾರ್ಥಿಗಳಿಗೆ ಸಂಕಷ್ಟ

Update: 2026-06-14 13:47 IST

ವಿಜಯಪುರ: ಬೇಸಿಗೆ ರಜೆ ಮುಗಿದು ಶಾಲೆಗಳೇನೋ ಆರಂಭವಾಗಿವೆ. ಮುಂಗಾರು ಮಳೆಯೂ ಮುಖ ಮಾಡಿದೆ. ಆದರೆ, ಜಿಲ್ಲೆಯ ಸರಕಾರಿ ಶಾಲೆಗಳ ದುಸ್ಥಿತಿ ಮಾತ್ರ ಹೆತ್ತವರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ಜಿಲ್ಲಾದ್ಯಂತ ಬರೋಬ್ಬರಿ 611 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡು, ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ಇದೆಯೆಂಬುದು ಬಹಿರಂಗವಾಗಿದೆ.

ಅಪಾಯದ ಹೆದರಿಕೆಯಿಂದಾಗಿ ಶಿಕ್ಷಕರು ಮಕ್ಕಳನ್ನು ಜರ್ಜರಿತ ಕಟ್ಟಡಗಳ ಒಳಗೆ ಕೂರಿಸಲಾಗದೆ, ಶಾಲಾ ಆವರಣದ ಹೊರಾಂಗಣದಲ್ಲಿ ಹಾಗೂ ಮರದ ನೆರಳಿನಲ್ಲಿ ತರಗತಿಗಳನ್ನು ನಡೆಸುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ.

ವಿಜಯಪುರ ಗ್ರಾಮೀಣದಲ್ಲಿ 250 ಶಿಥಿಲಗೊಂಡಿರುವ ಕೊಠಡಿಗಳು, ಬಸವನಬಾಗೇವಾಡಿ 130 ಶಿಥಿಲಗೊಂಡಿರುವ ಕೊಠಡಿಗಳು, ಮುದ್ದೇಬಿಹಾಳದಲ್ಲಿ 108 ಶಿಥಿಲಗೊಂಡಿರುವ ಕೊಠಡಿಗಳು, ವಿಜಯಪುರ ನಗರದಲ್ಲಿ 56 ಶಿಥಿಲಗೊಂಡಿರುವ ಕೊಠಡಿಗಳು, ಸಿಂದಗಿಯಲ್ಲಿ 38 ಶಿಥಿಲಗೊಂಡಿರುವ ಕೊಠಡಿಗಳು, ಚಡಚಣದಲ್ಲಿ 26 ಹಾಗೂ ಇಂಡಿಯಲ್ಲಿ 3 ಶಿಥಿಲಗೊಂಡಿರುವ ಕೊಠಡಿಗಳು ಇದೆ. ಹೀಗೆ ಜಿಲ್ಲೆಯಲ್ಲಿ ಒಟ್ಟು 611 ಶಿಥಿಲಗೊಂಡಿರುವ ಕೊಠಡಿಗಳು ಮಾಹಿತಿ ಇದೆ.

611 ಕೊಠಡಿಗಳು ಬಳಕೆಗೆ ಯೋಗ್ಯವಲ್ಲ ಎಂದು ಇಲಾಖೆಯೇ ಘೋಷಿಸಿದೆ. ಪರಿಣಾಮವಾಗಿ, ಕೊಠಡಿಗಳ ತೀವ್ರ ಕೊರತೆಯಿಂದಾಗಿ ಅನಿವಾರ್ಯವಾಗಿ ಎರಡು-ಮೂರು ತರಗತಿಗಳ ಮಕ್ಕಳನ್ನು ಒಂದೇ ಸಣ್ಣ ಕೋಣೆಯಲ್ಲಿ ಕುರಿಗಳಂತೆ ಕೂರಿಸಿ ಪಾಠ ಮಾಡಲಾಗುತ್ತಿದೆ ಎಂದು ಕೆಲವು ಶಾಲೆಯ ಮುಖ್ಯಗುರುಗಳು ಹೇಳುತ್ತಿದ್ದಾರೆ.

94 ಹೊಸ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಮಂಜೂರಾಗಿರುವ 94 ಕೊಠಡಿಗಳ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಆರಂಭಿಸುವ ಜೊತೆಗೆ, ಇನ್ನುಳಿದ 500ಕ್ಕೂ ಹೆಚ್ಚು ಶಿಥಿಲಾವಸ್ಥೆಯ ಕೊಠಡಿಗಳ ಮರುನಿರ್ಮಾಣಕ್ಕೂ ಸರಕಾರ ತಕ್ಷಣವೇ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಪಾಲಕರು ಹಾಗೂ ಸಾರ್ವಜನಿಕರು ತೀವ್ರ ಒತ್ತಾಯಿಸಿದ್ದಾರೆ.

ಮಳೆಗಾಲ ಆರಂಭವಾಗಿರುವುದರಿಂದ ಕೆಲವೆಡೆ ನೀರು ನೇರವಾಗಿ ಕೊಠಡಿಯೊಳಗೆ ಸೋರುತ್ತಿದ್ದು, ಇಡೀ ಶಾಲಾ ಆವರಣ ಕೆಸರುಗದ್ದೆಯಾಗುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಕ್ಕಳು ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳಬೇಕಾದ ದುಸ್ಥಿತಿ ಇದೆ.

ಮೂಲಸೌಕರ್ಯಗಳೇ ಇಲ್ಲ..!

ಶಾಲೆಗಳಲ್ಲಿ ಕೇವಲ ಕೊಠಡಿಗಳದ್ದಷ್ಟೇ ಸಮಸ್ಯೆಯಲ್ಲ, ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪ್ರೌಢಶಾಲೆಯ ಹೆಣ್ಣು ಮಕ್ಕಳು ಶೌಚಾಲಯಕ್ಕೆ ನೀರಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ನಳಗಳಿದ್ದರೂ ನೀರಿಲ್ಲದ ಈ ಬೇಜವಾಬ್ದಾರಿತನಕ್ಕೆ ಕೊನೆಯೇ ಇಲ್ಲವೇ ಎಂದು ಪಾಲಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಗಳು ಆಡಳಿತ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳು ಕೇವಲ ಸುತ್ತೋಲೆ ಹೊರಡಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ, ವಿನಃ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಮುಂಬರುವ ದಿನಗಳಲ್ಲಿ ಮಳೆ ತೀವ್ರಗೊಂಡಾಗ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ಸರಕಾರ ತಕ್ಷಣವೇ ಯುದ್ಧೋಪಾದಿಯಲ್ಲಿ ಅನುದಾನ ಬಿಡುಗಡೆ ಮಾಡಿ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗದಿದ್ದರೆ ಹೆತ್ತವರೊಂದಿಗೆ ಸೇರಿ ಉಗ್ರ ಹೋರಾಟ ಮಾಡಲಾಗುವುದು.

-ಸಂಗಮೇಶ ಸಗರ, ರೈತ ಮುಖಂಡರು, ವಿಜಯಪುರ

ಜಿಲ್ಲೆಯ 611 ಶಿಥಿಲಗೊಂಡ ಕೊಠಡಿಗಳ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. 94 ಕೊಠಡಿಗಳ ಮಂಜೂರು ಆಗಿವೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಕಟ್ಟಡಗಳಲ್ಲಿ ಪಾಠ ಮಾಡದಂತೆ ಸಂಬಂಧಪಟ್ಟ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.

-ವಿ.ವಿ.ಸಾಲಿಮಠ, ಡಿಡಿಪಿಐ, ವಿಜಯಪುರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor

Similar News