×
Ad

Koppal | 40 ವರ್ಷಗಳಿಂದ ಸ್ವಂತ ಸೂರಿಲ್ಲದೆ ಜೀವನ : ಮಳೆಯಲ್ಲೇ ನೆನೆದು ತಾಯಿ–ಮಗಳ ಬದುಕು

ಮುರಿದ ತಗಡಿನ ಆಸರೆಯಲ್ಲೇ ಜೀವನ ಸಾಗಿಸುತ್ತಿರುವ ಕುಟುಂಬಕ್ಕೆ ಶಾಶ್ವತ ಮನೆ ಕಲ್ಪಿಸುವಂತೆ ಸಾರ್ವಜನಿಕರ ಒತ್ತಾಯ

Update: 2026-07-16 23:09 IST

ಕೊಪ್ಪಳ: ಗುರುವಾರ ನಗರದಲ್ಲಿ ಉತ್ತಮ ಮಳೆಯಾಗಿದ್ದು ರೈತರಲ್ಲಿ ಸಂತಸ ಮೂಡಿಸಿದರೂ, ಆಶ್ರಯ ಲೇಔಟ್‌ನಲ್ಲಿ ಕಂಡುಬಂದ ಒಂದು ದೃಶ್ಯ ಜನರ ಮನ ಕಲಕುವಂತಿತ್ತು.

ಮನೆಯೊಳಗೆ ಮಳೆ ನೀರು ಸೋರಿಕೆಯಾಗುತ್ತಿದ್ದ ಕಾರಣ ಸಾಮಾನುಗಳನ್ನು ನೆನೆಯದಂತೆ ಮುಚ್ಚಿಟ್ಟು, ಒಳಗೆ ನಿಲ್ಲಲು ಜಾಗವಿಲ್ಲದೆ ತಾಯಿ ಮತ್ತು ಮಗಳು ಮಳೆಯಲ್ಲೇ ನೆನೆಯುತ್ತ ನಿಂತಿರುವ ದೃಶ್ಯ ಸ್ಥಳೀಯರ ಕಣ್ಣೀರನ್ನು ತರಿಸಿತು.

ನಿರ್ಮಿತಿ ಕೇಂದ್ರದ ಸಮೀಪದ ಆಶ್ರಯ ಲೇಔಟ್‌ನಲ್ಲಿ ವಾಸಿಸುತ್ತಿರುವ ಭರಮವ್ವ ಹಾಗೂ ಅವರ ಮಗಳು ಕಳೆದ 40 ವರ್ಷಗಳಿಂದ ಸ್ವಂತ ಸೂರಿಲ್ಲದೆ ಮುರಿದ ತಗಡಿನ ಆಸರೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇಬ್ಬರು ಮಲಗಲು ಸಾಕಾಗುವಷ್ಟು ಮಾತ್ರ ಜಾಗವಿರುವ ಈ ಗುಡಿಸಲಿನಲ್ಲಿ ಮಳೆ ಬಂದಾಗ ತಗಡಿನ ರಂಧ್ರಗಳ ಮೂಲಕ ನೀರು ಸೋರಿಕೆಯಾಗುವುದರಿಂದ ಪುಸ್ತಕಗಳು ಹಾಗೂ ಅಗತ್ಯ ವಸ್ತುಗಳನ್ನು ರಕ್ಷಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ.

ಸರ್ಕಾರದಿಂದ ಆಶ್ರಯ ಮನೆಗಳ ಯೋಜನೆಗಳಿದ್ದರೂ, ಇಂತಹ ನಿಜವಾದ ಅರ್ಹರಿಗೆ ಮನೆ ದೊರೆಯದೇ ಇರುವುದು ವಿಷಾದನೀಯವಾಗಿದೆ. ಬಡವರಿಗೆ ಸಿಗಬೇಕಾದ ಆಶ್ರಯ ಮನೆಗಳು ಅರ್ಹರಲ್ಲದವರ ಪಾಲಾಗುತ್ತಿವೆ ಎಂಬ ಆರೋಪವೂ ಕೇಳಿಬರುತ್ತಿದೆ.

ಭರಮವ್ವ ಕುಟುಂಬಕ್ಕೆ ಶಾಶ್ವತ ವಸತಿ ಕಲ್ಪಿಸುವಂತೆ ಹಾಗೂ ಇಂತಹ ನಿರ್ಗತಿಕ ಕುಟುಂಬಗಳ ಸಮಸ್ಯೆಗಳತ್ತ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಡಿ ಅಖೀಲ್ ಉಡೇವು

contributor

Similar News