×
Ad

ಮಳೆ ಕೊರತೆ: ಕಲ್ಯಾಣ ಕರ್ನಾಟಕ ಕೃಷಿಗೆ ಭಾರೀ ಹೊಡೆತ

ಹೆಚ್ಚುತ್ತಿರುವ ಸಾಲದ ಹೊರೆ; ಬದುಕಿನ ಹೋರಾಟದಲ್ಲಿ ರೈತರು

Update: 2026-07-16 09:02 IST

ಕಲಬುರಗಿ: ಆಕಾಶದತ್ತ ಕಣ್ಣಿಟ್ಟು ಮಳೆಯ ನಿರೀಕ್ಷೆಯಲ್ಲಿದ್ದ ಕಲ್ಯಾಣ ಕರ್ನಾಟಕದ ರೈತರ ಕನಸುಗಳು ಮತ್ತೆ ಭಗ್ನವಾಗುತ್ತಿವೆ. ಮುಂಗಾರು ಮಳೆ ಕೈಕೊಟ್ಟ ಪರಿಣಾಮ, ಈ ಭಾಗದ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಹೊಲಗಳಲ್ಲಿ ಹಸಿರಾಗಬೇಕಿದ್ದ ಬೆಳೆಗಳು ಒಣಗತೊಡಗಿವೆ. ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದಿದ್ದರೂ ಮಳೆ ಕೊರತೆಯಿಂದ ಬೆಳೆಗಳು ಬಾಡುತ್ತಿದ್ದು, ರೈತರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಕಳೆದ ವರ್ಷಕ್ಕೆ (2025) ಹೋಲಿಸಿದರೆ ಈ ಬಾರಿ ಮುಂಗಾರು ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಬಹುತೇಕ ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಮಳೆ ಆಧಾರಿತ ಕೃಷಿಯನ್ನೇ ನಂಬಿರುವ ಲಕ್ಷಾಂತರ ರೈತ ಕುಟುಂಬಗಳ ಬದುಕು ಅತಂತ್ರವಾಗಿದ್ದು, ಕೃಷಿ ವೆಚ್ಚಕ್ಕೆ ಮಾಡಿದ ಸಾಲ, ದುಬಾರಿ ಬೀಜ, ರಸಗೊಬ್ಬರ ಹಾಗೂ ಕೂಲಿ ವೆಚ್ಚಗಳು ರೈತರ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ತಂದಿವೆ.

ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ಬೀದರ್ ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ತೊಗರಿ, ಉದ್ದು, ಹೆಸರು, ಹತ್ತಿ, ಸೋಯಾಬಿನ್, ಮೆಕ್ಕೆಜೋಳ ಸೇರಿದಂತೆ ಪ್ರಮುಖ ಬೆಳೆಗಳು ಮಳೆಯ ಕೊರತೆಯಿಂದ ನಾಶವಾಗುವ ಹಂತಕ್ಕೆ ತಲುಪಿವೆ. ಅನೇಕ ಗ್ರಾಮಗಳಲ್ಲಿ ರೈತರು ಮರುಬಿತ್ತನೆ ಮಾಡುವ ಅನಿವಾರ್ಯತೆ ಎದುರಿಸುತ್ತಿದ್ದು, ಮತ್ತೊಮ್ಮೆ ಬೀಜ ಹಾಗೂ ಗೊಬ್ಬರ ಖರೀದಿಸಲು ಹಣದ ಕೊರತೆಯಿಂದ ಕಂಗಾಲಾಗಿದ್ದಾರೆ.

ಕಲಬುರಗಿಯಲ್ಲಿ ತೀವ್ರ ಪರಿಣಾಮ:

ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿರುವುದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜೋಳ, ತೊಗರಿ ಹಾಗೂ ಹತ್ತಿ ಬೆಳೆಗಳು ನೀರಿನ ಕೊರತೆಯಿಂದ ಒಣಗತೊಡಗಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಮಳೆಯನ್ನೇ ಅವಲಂಬಿಸಿವೆ.

ಇತರೆ ಜಿಲ್ಲೆಗಳಲ್ಲೂ ಇದೇ ಚಿತ್ರಣ:

ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ ಹಾಗೂ ಗುರುಮಠಕಲ್ ಭಾಗಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳು ಇದೆ ರೀತಿಯ ಭೀತಿ ಎದುರಾಗಿದೆ.ರಾಯಚೂರಿನ ದೇವದುರ್ಗ, ಲಿಂಗಸುಗೂರು, ಮಾನ್ವಿ ಹಾಗೂ ಸಿಂಧನೂರು ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಹಲವೆಡೆ ರೈತರು ಹತ್ತಿ, ತೊಗರಿ, ಸಜ್ಜೆ, ಸೂರ್ಯಕಾಂತಿ ಬೆಳೆದಿದ್ದಾರೆ. ಬಿತ್ತನೆ ಮಾಡಿ ಮಳೆ ಬಾರದಿದ್ದಾಗ ಬೆಳೆ ನಾಶ ಪಡಿಸಿಕೊಂಡಿದ್ದಾರೆ. ಕೆಲ ರೈತರು ಸಾಲ ಮಾಡಿ ಬಿತ್ತನೆ ಮಾಡಿ ಎಕರೆಗೆ ಅಂದಾಜು 30 ಸಾವಿರ ರೂ. ಖರ್ಚು ಮಾಡಿದ್ದಾರೆ. ಅನೇಕರು ಮುಂಗಾರು ಪೂರ್ವದಲ್ಲೇ ಬಿತ್ತಿ ಕೈ ಸುಟ್ಟುಕೊಂಡಿದ್ದಾರೆ.

ಮಳೆಗಾಲದಲ್ಲಿ ಬೇಸಿಗೆಯ ಪರಿಸ್ಥಿತಿ:

ಮಳೆಗಾಗಿ ಗ್ರಾಮೀಣ ಭಾಗದಲ್ಲಿ ದೇವರ ಮೊರೆ ಹೋಗಿದ್ದು ದೇವಸ್ಥಾನಗಳಲ್ಲಿ ಭಜನೆ, ಮಸೀದಿಗಳಲ್ಲಿ ಪ್ರಾರ್ಥಿಸಲಾಗುತ್ತಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಪರ್ಯಾಯ ಬೆಳೆ ಬೆಳೆಯಿರಿ ಅಂತ ಮಾತ್ರ ಹೇಳಿಕೆ ನೀಡುತ್ತಿದ್ದಾರೆ ಯಾವ ಬೆಳೆ ಬೆಳೆಯಬೇಕು ಎಂದು ರೈತರಲ್ಲಿ ಗೊಂದಲ ಉಂಟಾಗಿದೆ. ಒಟ್ಟಿನಲ್ಲಿ ಮಳೆ ಬಾರದ ಬೇಸಿಗೆಯ ಪರಿಸ್ಥಿತಿ ನಿರ್ಮಾಣವಾಗಿದ್ದು ಹೀಗೆ ಮುಂದುವರೆದರೆ ಮತ್ತಷ್ಟು ಗಂಭೀರ ಪರಿಸ್ಥಿತಿ ಎದುರಾಗಬಹುದು ಎಂದು ರೈತರಲ್ಲಿ ಆತಂಕ ಹೆಚ್ಚಾಗಿದೆ.

ಕುಡಿಯುವ ನೀರು,ಜಾನುವಾರುಗಳಿಗೆ ಮೇವು ಸಮಸ್ಯೆ:

ಬರದ ಪರಿಣಾಮ ಕೇವಲ ಕೃಷಿಗೆ ಮಾತ್ರ ಸೀಮಿತವಾಗಿಲ್ಲ. ಅನೇಕ ಗ್ರಾಮಗಳಲ್ಲಿ ಕೆರೆ-ಕಟ್ಟೆಗಳು ಬತ್ತುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಜಾನುವಾರುಗಳಿಗೆ ಮೇವು ಹಾಗೂ ನೀರಿನ ಕೊರತೆಯೂ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ. ರೈತರಿಗೆ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದ್ದು, ಈಗಾಗಲೇ ಸಾಲದ ಒತ್ತಡದಲ್ಲಿರುವ ಕುಟುಂಬಗಳ ಪರಿಸ್ಥಿತಿ ಇನ್ನಷ್ಟು ಹದಗೆಡುವ ಆತಂಕ ವ್ಯಕ್ತವಾಗಿದೆ.

ಬರದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಸರಕಾರ ತಕ್ಷಣ ಪರಿಣಾಮಕಾರಿ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ ಕಲ್ಯಾಣ ಕರ್ನಾಟಕದ ಕೃಷಿ ಆರ್ಥಿಕತೆಗೂ, ಲಕ್ಷಾಂತರ ರೈತ ಕುಟುಂಬಗಳ ಬದುಕಿಗೂ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ರೈತರ ಕಣ್ಣು ಈಗ ಮೋಡಗಳತ್ತ ನೆಟ್ಟಿದ್ದು, ಒಂದು ಉತ್ತಮ ಮಳೆಯೇ ನಮ್ಮ ಬದುಕನ್ನು ಉಳಿಸಬಹುದು ಎಂಬ ಆಶಾಭಾವನೆಯೊಂದಿಗೆ ಅವರು ದಿನಗಳನ್ನು ಎಣಿಸುತ್ತಿದ್ದಾರೆ.

ಸರಕಾರಕ್ಕೆ ರೈತ ಸಂಘಟನೆಗಳ ಒತ್ತಾಯ

ತಕ್ಷಣವೇ ಬೆಳೆ ಹಾನಿ ಸಮೀಕ್ಷೆ ನಡೆಸಿ, ಬರಪೀಡಿತ ಗ್ರಾಮಗಳನ್ನು ಘೋಷಿಸಬೇಕು. ಮರುಬಿತ್ತನೆಗೆ ಉಚಿತ ಬೀಜ ಮತ್ತು ರಸಗೊಬ್ಬರ ವಿತರಿಸಬೇಕು. ಬೆಳೆ ಸಾಲ ಮರುಪಾವತಿಗೆ ಅವಧಿ ವಿಸ್ತರಣೆ ಹಾಗೂ ಬಡ್ಡಿ ವಿನಾಯಿತಿ ನೀಡಬೇಕು. ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ರೈತ ಸಂಘಟನೆಗಳು ಸರಕಾರವನ್ನು ಆಗ್ರಹಿಸಿವೆ.

1972-73ರಲ್ಲಿ ಕಲ್ಯಾಣ ಕರ್ನಾಟಕ ಭಾಗ ತೀವ್ರ ಬರಗಾಲಕ್ಕೆ ತುತ್ತಾಗಿತ್ತು. ಇದೀಗ ಮುಂಗಾರು ಮಳೆಯ ತೀವ್ರ ಕೊರತೆಯಿಂದ ಮತ್ತೊಮ್ಮೆ ಅದೇ ಪರಿಸ್ಥಿತಿಯ ಛಾಯೆ ಮೂಡುತ್ತಿರುವುದು ಆತಂಕಕಾರಿ. ಮಳೆಯ ಅಭಾವ ಮುಂದುವರಿದರೆ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

-ಸಮದ್ ಪಟೇಲ್

ಜಂಟಿ ನಿರ್ದೇಶಕರು, ಕೃಷಿ ಇಲಾಖೆ,ಕಲಬುರಗಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ

contributor

Similar News