ಭೀಮಾ ನದಿ ಸೇತುವೆ ದುರಸ್ತಿ ಕಾರ್ಯ ವಿಳಂಬ

4 ಕಾರ್ಮಿಕರಿಂದ ಸೇತುವೆ ತಡೆಗೋಡೆ ನಿರ್ಮಾಣ!

Update: 2026-07-17 10:15 IST

ಆಲಮೇಲ: ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಔರಾದ್-ಸದಾಶಿವಗಡ ರಾಜ್ಯ ಹೆದ್ದಾರಿ 34ರ ದೇವಣಗಾಂವ ಗ್ರಾಮದ ಹತ್ತಿರದ ಭೀಮಾ ನದಿ ಸೇತುವೆ ದುರಸ್ತಿ ಕಾರ್ಯವು ನಿಗದಿತ ಅವಧಿ ಮುಗಿದರೂ ಮುಗಿಯದ ಕಾರಣ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಭರವಸೆ ಹುಸಿಗೊಳಿಸಿದ ಅಧಿಕಾರಿಗಳು: ಕಳೆದ ಏ.23ರಂದು ಎರಡು ತಿಂಗಳ ಅವಧಿಯಲ್ಲಿ ಸೇತುವೆ ದುರಸ್ತಿ ಕಾರ್ಯ ಪೂರ್ಣಗೊಳಿಸುವುದಾಗಿ ಭರವಸೆ ನೀಡಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ನಾಲ್ಕು ತಿಂಗಳು ಕಳೆದರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಸೇತುವೆಯ ಮೇಲ್ಭಾಗದ ಸಿಮೆಂಟ್ ರಸ್ತೆ ಕಾಮಗಾರಿಯನ್ನು 15 ದಿನಗಳಲ್ಲಿ ಮುಗಿಸಲಾಗಿದ್ದರೂ, ಎರಡೂ ಬದಿಯ ತಡೆಗೋಡೆ (ಪ್ಯಾರಾಪೆಟ್ ವಾಲ್)ನಿರ್ಮಾಣ ಕಾರ್ಯ ಮಾತ್ರ ನನೆಗುದಿಗೆ ಬಿದ್ದಿದೆ. ಇಷ್ಟು ದೊಡ್ಡ ಸೇತುವೆಯ ತಡೆಗೋಡೆ ನಿರ್ಮಾಣಕ್ಕೆ ಕೇವಲ 3-4 ಜನ ಕಾರ್ಮಿಕರನ್ನು ಬಳಸಿ ಕೆಲಸ ಮಾಡಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ದಿನನಿತ್ಯ ಪ್ರಯಾಣಿಕರಿಗೆ ತಪ್ಪದ ಕಿರಿಕಿರಿ:

ಸಿಂದಗಿ, ಆಲಮೇಲ, ಇಂಡಿ ಭಾಗದಿಂದ ಅಫಜಲಪುರಕ್ಕೆ ಹಾಗೂ ಅಲ್ಲಿಂದ ಈ ಭಾಗಕ್ಕೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಉದ್ಯೋಗಸ್ಥರು, ಮಹಿಳೆಯರು ಮತ್ತು ಕೂಲಿ ಕಾರ್ಮಿಕರು ಸಂಚರಿಸುತ್ತಾರೆ. ಬಸ್ ಸೌಲಭ್ಯವಿಲ್ಲದೆ ಅವರು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದ್ದು, ಹೆಚ್ಚಿನ ಹಣ ನೀಡಿ ಪ್ರಯಾಣಿಸುವಂತಾಗಿದೆ. ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಸೌಲಭ್ಯವಿದ್ದರೂ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಹಣ ನೀಡಿ ಖಾಸಗಿ ವಾಹನಗಳಲ್ಲಿ ಸಂಚರಿಸುವಅನಿವಾರ್ಯತೆ ಎದುರಾಗಿದೆ.

ಲೋಕೋಪಯೋಗಿ ಇಲಾಖೆ ಮತ್ತು ಗುತ್ತಿಗೆದಾರರು ಜನಸಾಮಾನ್ಯರ ಈ ಸಂಕಷ್ಟವನ್ನು ಅರಿತು, ತಕ್ಷಣವೇ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಮುಗಿಸಬೇಕಿದೆ. ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಮಧ್ಯಪ್ರವೇಶಿಸಿ ಸಾರಿಗೆ ಬಸ್‌ಗಳ ಪುನರಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಿ

ದೇವಣಗಾಂವ ಕಾಲೇಜು ವಿದ್ಯಾರ್ಥಿನಿ ಐಶ್ವರ್ಯ ಮಾತನಾಡಿ, ಕಾಲೇಜಿಗೆ ಹೋಗಲು ಬಸ್ ಇಲ್ಲದೆ ತುಂಬಾ ತೊಂದರೆಯಾಗುತ್ತಿದೆ. ಸೇತುವೆ ರಿಪೇರಿ ನೆಪದಲ್ಲಿ 4 ತಿಂಗಳಿಂದ ಬಸ್ ನಿಲ್ಲಿಸಿದ್ದಾರೆ. ಹೆಣ್ಣುಮಕ್ಕಳಿಗೆ ಉಚಿತ ಬಸ್ ಪಾಸ್ ಇದ್ದರೂ ಪ್ರಯೋಜನವಿಲ್ಲದಂತಾಗಿದೆ. ಬೇಗ ಕಾಮಗಾರಿ ಮುಗಿಸಬೇಕು. ಲೋಕೋಪಯೋಗಿ ಇಲಾಖೆ ತಕ್ಷಣ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ನಾನು ಪ್ರತಿದಿನ ಸಿಂದಗಿಯಿಂದ ಅಫಜಲಪುರ ಭಾಗಕ್ಕೆ ಕೆಲಸ ನಿಮಿತ್ತ ಸಂಚರಿಸಬೇಕು. ಸರಕಾರಿ ಬಸ್‌ಗಳು ಇಲ್ಲದಿರುವುದರಿಂದ ಖಾಸಗಿ ವಾಹನಗಳ ಚಾಲಕರು ಕೇಳಿದಷ್ಟು ಹಣ ಕೊಡಬೇಕಾಗಿದೆ. ಸೇತುವೆಯ ಮೇಲೆ ದೊಡ್ಡ ದೊಡ್ಡ ಲಾರಿಗಳು ಸಂಚರಿಸುವಂತೆ ಬಸ್‌ಗಳಿಗೂ ಅವಕಾಶ ಕಲ್ಪಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹೆಚ್ಚಿನ ಕಾರ್ಮಿಕರನ್ನು ನೇಮಿಸಿ ತಕ್ಷಣ ತಡೆಗೋಡೆ ಕೆಲಸ ಮುಗಿಸಬೇಕು.

-ಶಿವಾನಂದ, ಪ್ರಯಾಣಿಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಬ್ದುಲಘನಿ ಎಂ.ದೇವರಮನಿ

contributor

Similar News