ಜನಗಣತಿ: ನಿಖರ ಜಾತಿ ದತ್ತಾಂಶಕ್ಕಾಗಿ ಸುಪ್ರೀಂ ಮೊರೆ
ಭಾರತದಲ್ಲಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಜಾತಿಪಟ್ಟಿಗಳು ಮತ್ತು ಅವುಗಳ ಬಳಕೆ ಎಲ್ಲಾ ಸಂದರ್ಭಗಳಲ್ಲೂ ಒಂದೇ ರೀತಿ ಇರುವುದಿಲ್ಲ. ಕೇಂದ್ರ ಸರಕಾರದ ಉದ್ದೇಶಗಳಿಗೆ ಅನ್ವಯಿಸುವ ಒಬಿಸಿ ಪಟ್ಟಿ ಮತ್ತು ರಾಜ್ಯ ಸರಕಾರದ ಮೀಸಲಾತಿ ಪಟ್ಟಿಗಳ ನಡುವೆ ವ್ಯತ್ಯಾಸಗಳಿರುವ ಸಾಧ್ಯತೆಗಳು ಇವೆ. ಆದ್ದರಿಂದ ಜನಗಣತಿಯ ಡಿಜಿಟಲ್ ವ್ಯವಸ್ಥೆಯಲ್ಲಿ ಯಾವ ಪಟ್ಟಿಯನ್ನು ಬಳಸಬೇಕು? ರಾಜ್ಯವಾರು ಪಟ್ಟಿಗಳನ್ನು ಹೇಗೆ ನಿರ್ವಹಿಸಬೇಕು? ಪರ್ಯಾಯ ಹೆಸರುಗಳು ಮತ್ತು ಉಪಜಾತಿಗಳನ್ನು ಹೇಗೆ ಗುರುತಿಸಬೇಕು? ಎಂಬುದಕ್ಕೆ ಸ್ಪಷ್ಟ ಮಾರ್ಗಸೂಚಿಗಳ ಅಗತ್ಯವಿದೆ.
ಕೇಂದ್ರ ಸರಕಾರ 2027ರಲ್ಲಿ ಮಾಡಹೊರಟ ಜನಗಣತಿಯಲ್ಲಿ ನಿಖರವಾದ ಜಾತಿ ದತ್ತಾಂಶವನ್ನು ದಾಖಲಿಸಬೇಕು ಎಂಬುದರ ಕುರಿತು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ನಮ್ಮ ಕರ್ನಾಟಕದ ಮಡಿವಾಳ ಸಮುದಾಯದ ಎಂಜೀರಪ್ಪ ಎನ್ನುವವರೇ ರಾಷ್ಟ್ರೀಯ ಅಧ್ಯಕ್ಷರಾಗಿರುವ ಒಬಿಸಿ ಫೆಡರೇಷನ್ ಆಫ್ ಇಂಡಿಯಾ ಎಂಬ ಸಂಘಟನೆ ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಿದೆ. ತನ್ನ 106 ಪುಟಗಳ ರಿಟ್ ಅರ್ಜಿಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ನಿಖರವಾದ ದತ್ತಾಂಶ ಅತ್ಯಂತ ಮಹತ್ವದ್ದಾಗಿದೆ ಎಂಬುದನ್ನು ಒತ್ತಿ ಹೇಳಿದೆ.
ಭಾರತೀಯ ಸಮಾಜದಲ್ಲಿ ಜಾತಿ ಎನ್ನುವುದು ಕೇವಲ ಸಾಮಾಜಿಕ ಗುರುತಿನ ಸಂಕೇತವಲ್ಲ, ಅದು ವ್ಯಕ್ತಿಯ ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಾನಮಾನ, ಆರ್ಥಿಕ ಅವಕಾಶಗಳು ಮತ್ತು ಅಧಿಕಾರದ ಪ್ರಾತಿನಿಧ್ಯದ ಮೇಲೂ ಪ್ರಭಾವ ಬೀರುವ ಒಂದು ಪ್ರಮುಖ ಸಾಮಾಜಿಕ ವಾಸ್ತವವಾಗಿದೆ. ಈ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ‘ಒಬಿಸಿ ಫೆಡರೇಶನ್ ಆಫ್ ಇಂಡಿಯಾ’ ತನ್ನ ರಿಟ್ ಅರ್ಜಿಯಲ್ಲಿ ಜಾತಿ ಮಹತ್ವವನ್ನು ದಾಖಲಿಸುವ ಅಗತ್ಯವನ್ನು ಒತ್ತಿ ಹೇಳುತ್ತಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟಿರುವ ಒಬಿಸಿ ಜಾತಿಗಳ ಪಟ್ಟಿಗಳನ್ನು ಜನಗಣತಿಯ ಡಿಜಿಟಲ್ ವ್ಯವಸ್ಥೆಯಲ್ಲಿ ಮುಂಚಿತವಾಗಿ ಅಳವಡಿಸಬೇಕು ಎಂಬುದು ರಿಟ್ ಅರ್ಜಿಯ ಪ್ರಮುಖ ಅಂಶವಾಗಿದೆ.
ಜಾತಿ ದತ್ತಾಂಶದ ನಿಖರತೆ ಏಕೆ ಅಗತ್ಯ? ಎಂಬ ಪ್ರಶ್ನೆಗೆ ರಿಟ್ ಅರ್ಜಿಯಲ್ಲಿ ಉತ್ತರವಾಗಿ ನಮೂದಿಸಿರುವಂತೆ ಭಾರತದಲ್ಲಿ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸುವಾಗ ಹಿಂದುಳಿದ ವರ್ಗಗಳ ಬದುಕಿನ ನೈಜ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಯಾವ ಯಾವ ಸಮುದಾಯಗಳು ಶಿಕ್ಷಣದಲ್ಲಿ ಹಿಂದುಳಿದಿವೆ, ಯಾವ ವರ್ಗಕ್ಕೆ ಉದ್ಯೋಗಾವಕಾಶಗಳು ಕಡಿಮೆ ಲಭ್ಯವಾಗಿವೆ, ಯಾವ ಸಮುದಾಯಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಂಚಿನಲ್ಲಿವೆ ಎಂಬುದನ್ನು ಅರಿಯಲು ವಿಶ್ವಾಸಾರ್ಹ ದತ್ತಾಂಶ ನೆರವಾಗುತ್ತದೆ. ಮೀಸಲಾತಿ, ವಿದ್ಯಾರ್ಥಿವೇತನ, ವಸತಿ ಸೌಲಭ್ಯಗಳು, ಕೌಶಲ್ಯಾಭಿವೃದ್ದಿ ಕಾರ್ಯಕ್ರಮಗಳು ಮತ್ತು ಇತರ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಸಮುದಾಯಗಳ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಬೇಕಾಗುತ್ತದೆ. ಆದರೆ ಮಾಹಿತಿ ಸಂಗ್ರಹಿಸುವ ವಿಧಾನಗಳಲ್ಲಿಯೇ ದೋಷವಿದ್ದರೆ, ಸದರಿ ಮಾಹಿತಿಯ ಆಧಾರದ ಮೇಲೆ ರೂಪಿಸುವ ನೀತಿಗಳೂ ಸಹಜವಾಗಿಯೇ ದೋಷಪೂರಿತವಾಗಿರುತ್ತವೆ. ಈ ಕಾರಣಕ್ಕೆ ಜಾತಿ ದತ್ತಾಂಶಗಳನ್ನು ಸಂಗ್ರಹಿಸುವುದು ಮಾತ್ರವಲ್ಲದೆ ಅದನ್ನು ಸಮರ್ಪಕವಾಗಿ ವರ್ಗೀಕರಿಸುವುದು, ದಾಖಲಿಸುವುದೂ ಕೂಡ ಅಷ್ಟೇ ಮುಖ್ಯವಾಗುತ್ತದೆ.
2011ರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಜಾತಿ ಜನಗಣತಿಯಲ್ಲಿ ಸಂಗ್ರಹಿಸಲಾದ ಜಾತಿ ಮಾಹಿತಿಯ ವಿಶ್ವಾಸಾರ್ಹತೆಯ ಕುರಿತು ಎದ್ದಿದ್ದ ಪ್ರಶ್ನೆಗಳನ್ನು ಅರ್ಜಿದಾರರು ನ್ಯಾಯಾಲಯದ ಮುಂದೆ ತಂದಿದ್ದಾರೆ. ಅದರ ಪ್ರಕಾರ ಒಂದೇ ಜಾತಿಯ ಹೆಸರನ್ನು ವಿವಿಧ ರೀತಿಯಲ್ಲಿ ದಾಖಲಿಸುವುದು, ಒಂದೇ ಹೆಸರಿನ ಪುನರಾವರ್ತನೆ, ಒಂದೇ ರೀತಿಯ ಹೆಸರುಗಳುಳ್ಳ ವಿಭಿನ್ನ ಸಮುದಾಯಗಳ ತಪ್ಪು ವರ್ಗೀಕರಣ ಮತ್ತು ಲಭ್ಯ ದಾಖಲೆಗಳು ಅಪೂರ್ಣವಾಗಿರುವುದೇ ಮುಂತಾದ ಅಂಶಗಳ ಕುರಿತು ಗಮನ ಸೆಳೆದಿದ್ದಾರೆ. ಉದಾಹರಣೆಗೆ 1931ರ ಜನಗಣತಿಯಲ್ಲಿ 4,147 ಜಾತಿಗಳು ದಾಖಲಾಗಿದ್ದವು, ಈಚಿನ 2011ರ ಗಣತಿಯಲ್ಲಿ 46 ಲಕ್ಷಕ್ಕೂ ಹೆಚ್ಚು ವಿಭಿನ್ನ ನಮೂದುಗಳು ಕಂಡುಬಂದಿವೆ! ಸ್ಟೇಟ್ ಆಫ್ ಮಹಾರಾಷ್ಟ್ರ, ಯೂನಿಯನ್ ಆಫ್ ಇಂಡಿಯಾ ಪ್ರಕರಣವನ್ನು ಉದಾಹರಿಸಿರುವ ಅರ್ಜಿದಾರರು 2011ರ ಜಾತಿ ದತ್ತಾಂಶಗಳಲ್ಲಿ ದೋಷಗಳಿದ್ದು ಅವು ಮೀಸಲಾತಿಗೆ ಸಂಬಂಧಿಸಿದ ಉದ್ದೇಶಗಳಿಗೆ ಈ ದತ್ತಾಂಶಗಳನ್ನು ಬಳಸಲು ಸರಕಾರವೇ ಆಕ್ಷೇಪ ವ್ಯಕ್ತಪಡಿಸಿದ ಬಗ್ಗೆ ರಿಟ್ ಅರ್ಜಿಯಲ್ಲಿ ಹೇಳಲಾಗಿದೆ. ಜಾತಿ ಮಾಹಿತಿಯನ್ನು ಸಂಗ್ರಹಿಸುವಾಗ ಸ್ಪಷ್ಟವಾದ ವರ್ಗೀಕರಣ ಮತ್ತು ದತ್ತಾಂಶದ ಗುಣಮಟ್ಟವನ್ನು ಕಾಪಾಡುವ ಕ್ರಮಗಳು ಅತಿಮುಖ್ಯ ಎಂಬುದು ಇಲ್ಲಿನ ಸಾರಾಂಶವಷ್ಟೆ.
ಪ್ರತೀ ಜಾತಿಯ ಹೆಸರನ್ನು ಸಂಗ್ರಹಿಸುವಾಗ ಗಣತಿದಾರರು ಅಥವಾ ಮಾಹಿತಿ ನೀಡುವವರು ಪ್ರತ್ಯೇಕವಾಗಿ ಜಾತಿಯನ್ನು ನಮೂದಿಸುವ ವ್ಯವಸ್ಥೆಯಲ್ಲಿ ಒಂದೇ ಹೆಸರಿನ ಹಲವು ಕಾಗುಣಿತಗಳು ಮತ್ತು ಪರ್ಯಾಯ ಹೆಸರುಗಳು ದಾಖಲಾಗುವ ಸಾದ್ಯತೆಯಿದೆ. ಉದಾಹರಣೆಗೆ ಕರ್ನಾಟಕದಲ್ಲಿ ‘ಮಾಲೇರು’ ಮತ್ತು ‘ಮಲೇರು’ ಸಮುದಾಯದ ಗೊಂದಲವನ್ನು ಪರಿಶೀಲಿಸಬಹುದು. ‘ಮಾಲೇರು’ ಸಮುದಾಯ ಬ್ರಾಹ್ಮಣ ಸಮುದಾಯವಾಗಿದ್ದು ಅದು ಸಹಜವಾಗಿಯೇ ಸಾಮಾನ್ಯ ವರ್ಗಗಳ ಪಟ್ಟಿಯಲ್ಲಿದೆ. ‘ಮಲೇರು’ ಎಸ್ಸಿ ಪಟ್ಟಿಯಲ್ಲಿದ್ದಾರೆ. ಇಂಗ್ಲಿಷ್ನಲ್ಲಿ ಈ ಎರಡೂ ಸಮುದಾಯಗಳ ಸ್ಪೆಲ್ಲಿಂಗ್ ‘maleru’ ಎಂದು. ಈ
ಇಂಗ್ಲಿಷ್ ಸ್ಪೆಲ್ಲಿಂಗ್ ಎರಡಕ್ಕೂ ಅನ್ವಯಿಸುತ್ತದೆ. ಅನೇಕ ವರ್ಷಗಳಿಂದ ಈ ಸಮಸ್ಯೆಯನ್ನು ಪರಿಹರಿಸಲು ಯಾವ ಸರಕಾರಗಳಿಗೂ ಆಗಿಲ್ಲ, ಯಾವುದೇ ಆಯೋಗಗಳೂ ಇದನ್ನು ಗಮನಿಸಿಲ್ಲ. ಅನೇಕ ಸಾಮಾನ್ಯ ವರ್ಗದವರು ಇಂಗ್ಲಿಷ್ ಸ್ಪೆಲ್ಲಿಂಗ್ ಬಳಸಿ ಎಸ್ಸಿ ಸಮುದಾಯದ ಮೀಸಲಾತಿ ಪಡೆದಿರುವ ಪ್ರಕರಣಗಳಿವೆ.
ಇದೇ ರೀತಿ ಒಂದೇ ಜಾತಿಗೆ ಹಲವಾರು ಹೆಸರುಗಳಿದ್ದು ಒಂದು ಹೆಸರಿನವರು ಒಬಿಸಿ ಪಟ್ಟಿಯಲ್ಲಿದ್ದರೆ, ಮತ್ತೊಂದು ಹೆಸರಿನವರು ಎಸ್ಸಿ ಪಟ್ಟಿಯಲ್ಲಿದ್ದಾರೆ. ಉದಾಹರಣೆಗೆ ಕರ್ನಾಟಕದಲ್ಲಿ ದೊಂಬಿದಾಸ ಒಬಿಸಿ ಪಟ್ಟಿಯಲ್ಲಿದ್ದರೆ ಚೆನ್ನದಾಸ ಎಸ್ಸಿ ಪಟ್ಟಿಯಲ್ಲಿದೆ. ಇದೇ ಗೊಂದಲ ಶಿಳ್ಳೇಕ್ಯಾತ ಮತ್ತು ಕಿಳ್ಳೀಕ್ಯಾತ ನಡುವೆಯೂ ಇದೆ. ಇಂತಹ ಗೊಂದಲಗಳು ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಅನೇಕ ಜಾತಿವರ್ಗಗಳಲ್ಲಿ ಇವೆ.
ಭಾರತದಲ್ಲಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಜಾತಿಪಟ್ಟಿಗಳು ಮತ್ತು ಅವುಗಳ ಬಳಕೆ ಎಲ್ಲಾ ಸಂದರ್ಭಗಳಲ್ಲೂ ಒಂದೇ ರೀತಿ ಇರುವುದಿಲ್ಲ. ಕೇಂದ್ರ ಸರಕಾರದ ಉದ್ದೇಶಗಳಿಗೆ ಅನ್ವಯಿಸುವ ಒಬಿಸಿ ಪಟ್ಟಿ ಮತ್ತು ರಾಜ್ಯ ಸರಕಾರದ ಮೀಸಲಾತಿ ಪಟ್ಟಿಗಳ ನಡುವೆ ವ್ಯತ್ಯಾಸಗಳಿರುವ ಸಾಧ್ಯತೆಗಳು ಇವೆ. ಆದ್ದರಿಂದ ಜನಗಣತಿಯ ಡಿಜಿಟಲ್ ವ್ಯವಸ್ಥೆಯಲ್ಲಿ ಯಾವ ಪಟ್ಟಿಯನ್ನು ಬಳಸಬೇಕು? ರಾಜ್ಯವಾರು ಪಟ್ಟಿಗಳನ್ನು ಹೇಗೆ ನಿರ್ವಹಿಸಬೇಕು? ಪರ್ಯಾಯ ಹೆಸರುಗಳು ಮತ್ತು ಉಪಜಾತಿಗಳನ್ನು ಹೇಗೆ ಗುರುತಿಸಬೇಕು? ಎಂಬುದಕ್ಕೆ ಸ್ಪಷ್ಟ ಮಾರ್ಗಸೂಚಿಗಳ ಅಗತ್ಯವಿದೆ. ಸಮುದಾಯವೊಂದರ ಹೆಸರನ್ನು ತಪ್ಪಾಗಿ ದಾಖಲಿಸುವುದು ಅಥವಾ ಅದರ ಗುರುತನ್ನು ಬೇರೆ ಸಮುದಾಯದೊಂದಿಗೆ ಬೆರೆಸುವುದು ದತ್ತಾಂಶದ ಗುಣಮಟ್ಟವನ್ನು ಹಾಳುಮಾಡಬಹುದು. ಅದೇ ರೀತಿ ಅಧಿಕೃತ ಪಟ್ಟಿಯಲ್ಲಿರುವ ಹೆಸರುಗಳನ್ನು ಸಮರ್ಪಕವಾಗಿ ಸೇರಿಸದಿದ್ದರೆ ಕೆಲವು ಸಮುದಾಯಗಳ ಮಾಹಿತಿ ಸರಿಯಾಗಿ ದಾಖಲಾಗದ ಅಪಾಯವೂ ಇರುತ್ತದೆ. ಹೀಗಿರುವಾಗ ಡಿಜಿಟಲ್ ಆಯ್ಕೆ ಪಟ್ಟಿಯನ್ನು ರೂಪಿಸುವಾಗ ಸಂಬಂಧಪಟ್ಟ ರಾಜ್ಯ ಸರಕಾರಗಳು ಹಿಂದುಳಿದ ವರ್ಗಗಳ ಆಯೋಗಗಳು ಮತ್ತು ಜನಗಣತಿ ಅಧಿಕಾರಿಗಳ ನಡುವೆ ಸಮನ್ವಯ ಅಗತ್ಯವಾಗಿ ಇರಬೇಕಾಗುತ್ತದೆ. ಒಬಿಸಿ ಫೆಡರೇಶನ್ ಆಫ್ ಇಂಡಿಯಾ ಅರ್ಜಿಯು ಭಾರತ ಸಂವಿಧಾನದ ಅನುಚ್ಛೇದ 14,15,16 ಮತ್ತು 32 ರ ಆಧಾರದ ಮೇಲೆ ರೂಪಿತವಾಗಿದೆ. ಸಂವಿಧಾನದ ಆಶಯಗಳ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ತಿಳಿಯಲು ನಿಖರವಾದ ದತ್ತಾಂಶವು ನೀತಿ ನಿರೂಪಣೆಗೆ ನೆರವಾಗಬಹುದು. ಅಂತೆಯೇ ಜನಗಣತಿಯಲ್ಲಿ ಜಾತಿಯ ಹೆಸರನ್ನು ದಾಖಲಿಸುವುದರಿಂದ ಮಾತ್ರ ಯಾವುದೇ ಜಾತಿ ಸಮುದಾಯಕ್ಕೆ ಮೀಸಲಾತಿಯ ಕಾನೂನುಬದ್ಧ ಅರ್ಹತೆ ಸ್ವಯಂಚಾಲಿತವಾಗಿ ದೊರೆಯುವುದಿಲ್ಲ. ಮೀಸಲಾತಿಗೆ ಸಂಬಂಧಿಸಿದ ಅರ್ಹತೆ ಮತ್ತು ಹಕ್ಕುಗಳು ಅನ್ವಯಿಸುವ ಕಾನೂನುಗಳು, ಅಧಿಕೃತ ಪಟ್ಟಿಗಳು ಮತ್ತು ನ್ಯಾಯಾಂಗ ನಿರ್ಧಾರಗಳಿಗೆ ಒಳಪಟ್ಟಿರುತ್ತವೆ. ಹಿಂದುಳಿದ ವರ್ಗಗಳ ಕುರಿತು ವಿಶ್ವಾಸಾರ್ಹ ದತ್ತಾಂಶ ಲಭ್ಯವಿದ್ದರೆ, ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಹೆಚ್ಚು ವ್ಯವಸ್ಥಿತ ಆಧಾರ ದೊರೆಯಬಹುದು.
ಇಲ್ಲಿ ಜಾತಿಗಳ ಸಂಖ್ಯೆಯನ್ನು ದಾಖಲಿಸುವುದಷ್ಟೇ ಸಾಕಾಗುವುದಿಲ್ಲ. ಶಿಕ್ಷಣ, ಉದ್ಯೋಗ, ಆದಾಯ, ಭೂಮಿಯ ಮಾಲಕತ್ವ, ವಸತಿ, ಆರೋಗ್ಯ ಮತ್ತು ಸಾಮಾಜಿಕ ಪ್ರಾತಿನಿಧ್ಯದಂತಹ ಅಂಶಗಳನ್ನು ಸೂಕ್ತ ವಿಧಾನಗಳಲ್ಲಿ ಸೂಕ್ತ ರೀತಿಯಲ್ಕಿ ಅಧ್ಯಯನ ಮಾಡುವುದೂ ಅಗತ್ಯ. ಜನಗಣತಿಯ ದತ್ತಾಂಶಗಳನ್ನು ಇತರ ವಿಶ್ವಾಸಾರ್ಹ ಸಾಮಾಜಿಕ, ಆರ್ಥಿಕ ಮಾಹಿತಿಯೊಂದಿಗೆ ವಿಶ್ಲೇಷಿಸಿದಾಗ ಮಾತ್ರ ನೀತಿ ನಿರೂಪಣೆಗೆ ಹೆಚ್ಚು ಉಪಯುಕ್ತವಾದ ಚಿತ್ರಣ ದೊರೆಯಬಹುದು.
ಅರ್ಜಿಯಲ್ಲಿ ಇನ್ನಿತರ ಸೂಕ್ತ ಪರಿಹಾರಗಳನ್ನು ನೀಡುವಂತೆಯೂ ಕೋರಲಾಗಿದೆ. ಇದರ ಮೂಲ ಉದ್ದೇಶ ಜಾತಿ ಮಾಹಿತಿಯನ್ನು ಹೆಚ್ಚು ಏಕರೂಪವಾಗಿ ದಾಖಲಿಸುವುದು. ಪುನರಾವರ್ತಿತ ನಮೂದುಗಳನ್ನು ಆದಷ್ಟೂ ಕಡಿಮೆ ಮಾಡುವುದು ಮತ್ತು ಭವಿಷ್ಯದ ಸಾಮಾಜಿಕ ನ್ಯಾಯದ ನೀತಿಗಳಿಗೆ ಉಪಯುಕ್ತವಾಗುವ ದತ್ತಾಂಶದ ಗುಣಮಟ್ಟವನ್ನು ಸುದಾರಿಸುವುದೇ ಆಗಿದೆ.
ಒಬಿಸಿ ಫೆಡರೇಶನ್ ಆಫ್ ಇಂಡಿಯಾ ಅರ್ಜಿಯ ಮುಖ್ಯ ಬೇಡಿಕೆಯೆಂದರೆ 2017ರ ಜನಗಣತಿಯ ಡಿಜಿಟಲ್ ವ್ವವಸ್ಥೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕೃತ ಒಬಿಸಿ ಜಾತಿ ಪಟ್ಟಿಗಳನ್ನು ಮುಂಚಿತವಾಗಿ ಅಳವಡಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂಬುದಷ್ಟೇ.
ಈ ಪ್ರಕರಣ ಇಷ್ಟರಲ್ಲೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಬೆಂಚ್ ಮುಂದೆ ಬರುತ್ತಿದೆ. ಮಿಕ್ಕದ್ದನ್ನು ಕಾದು ನೋಡಬೇಕು.