ಮೈಸೂರು ರಾಜ ಮನೆತನದ ಹಿರಿಯರೂ ಆಗಿರುವ ಪ್ರಮೋದಾದೇವಿಯವರ ಹೇಳಿಕೆ ಕೇವಲ ಸರಕಾರಕ್ಕಷ್ಟೇ ಸೀಮಿತವಾಗಿದ್ದರೆ ಇಷ್ಟೊಂದು ವಾದ-ವಿವಾದಗಳು ಉದ್ಭವಿಸುತ್ತಲೇ ಇರಲಿಲ್ಲ. ಆ ಪತ್ರದಲ್ಲಿ ಪ್ರಮೋದಾದೇವಿಯವರು ತಾವು ಈ ವಿಷಯದಲ್ಲಿ ಸಾರ್ವಜನಿಕರ ಸಹಕಾರವನ್ನೂ ಬಯಸುವುದಾಗಿ ಹೇಳಿರುವುದು ಸಹಾನುಭೂತಿ ಗಳಿಕೆಯ ಮತ್ತೊಂದು ಮಜಲಷ್ಟೇ ಆಗಿ ಕಾಣಿಸಿಕೊಂಡಿದೆ. ದಸರೆಯನ್ನು ಹೇಗೆ ನಡೆಸಬೇಕು, ಯಾರು ನಡೆಸಬೇಕು, ಎಷ್ಟು ದಿನ ನಡೆಸಬೇಕು ಎಂಬ ತೀರ್ಮಾನದ ಹಕ್ಕು ರಾಜ್ಯ ಸರಕಾರದ್ದೇ ಹೊರತು, ಯಾವುದೋ ಒಂದು ಕಾಲದಲ್ಲಿ ಅಧಿಕಾರ ನಡೆಸಿದ ರಾಜ ಮನೆತನದ್ದಂತೂ ಖಂಡಿತಾ ಅಲ್ಲ, ಅದು ಆಗಲೂ ಕೂಡದು.

ಅರಮನೆಯ ಕಾರಣಕ್ಕಾಗಿ ಮೈಸೂರು ಮತ್ತೆ ಮುನ್ನೆಲೆಗೆ ಬಂದಿದೆ. ರಾಜ ಮನೆತನದ ವಾರಸುದಾರರು ಸುದ್ದಿ ಮನೆಗಳಲ್ಲಿ ದೊಡ್ಡ ಸದ್ದು ಮಾಡುತ್ತಿದ್ದಾರೆ.

ದಸರೆಯನ್ನು ಆಚರಿಸಬೇಕಾದ ಬಗೆ ಮತ್ತು ವಿಧಿ-ವಿಧಾನಗಳನ್ನು ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿಕೊಡುವ ದೊಡ್ಡ ಕೆಲಸಕ್ಕೆ ಶ್ರೀಕಂಠದತ್ತ ಒಡೆಯರ್ ಅವರ ಧರ್ಮಪತ್ನಿ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಕೈ ಇಕ್ಕಿದ್ದಾರೆ.

ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಆನೆ ಯಾವುದು ಎಂಬುದನ್ನು ತಮಗೆ ತಿಳಿಸಲಿಲ್ಲ ಎಂಬ ಸಣ್ಣದೊಂದು ವಿಚಾರವನ್ನು ನೆಪವಾಗಿಟ್ಟುಕೊಂಡು, ಹಲವು ವರ್ಷಗಳಿಂದ ಒಳಗೇ ಉಳಿದಿದ್ದ ಬೇಗುದಿಗಳನ್ನೆಲ್ಲ ತಣ್ಣಗೆ ಹೊರ ಹಾಕಿರುವ ಶ್ರೀಮತಿ ಪ್ರಮೋದಾದೇವಿಯವರು, ಹತ್ತು ದಿನಗಳ ವಿಜಯದಶಮಿಯನ್ನು ಸರಕಾರಕ್ಕೆ ಏಳು ದಿನ ಹಾಗೂ ಅರಮನೆಯ ಪರಿವಾರಕ್ಕೆ ಮೂರು ದಿನ ಎಂದು ವಿಂಗಡಿಸಿ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಸಲಹೆ ನೀಡಿದ್ದಾರೆ.

ಪೊಲೀಸರ ಉದ್ಧಟತನ, ದಾರ್ಷ್ಟ್ಯ ಮತ್ತು ಉಡಾಡಿತನಗಳಿಂದಾಗಿ ಈ ಬಾರಿಯ ದಸರೆಯಲ್ಲಿ ಅನೇಕನೇಕ ಅವಾಂತರಗಳೇ ನಡೆದುಹೋದವು. ಮಾಧ್ಯಮ ಪ್ರತಿನಿಧಿಗಳನ್ನಷ್ಟೇ ಅಲ್ಲ , ಕ್ಯಾಬಿನೆಟ್ ದರ್ಜೆಯ ಸಚಿವರನ್ನೇ ಕೈ ಅಡ್ಡ ಇಟ್ಟು ತಡೆವ ಅಹಂಕಾರ ಪ್ರದರ್ಶಿಸಿದ ಪೊಲೀಸ್ ಅಧಿಕಾರಿಗಳು, ಅರಮನೆಯ ಮಟ್ಟಿಯಲ್ಲಿ ಪರಂಪರಾಗತವಾಗಿ ನಡೆದುಬಂದಿದ್ದ ಜಟ್ಟಿ ಕಾಳಗಕ್ಕೂ ಅಡ್ಡಿ ಪಡಿಸಿದ್ದು ಈಗ ಮುಗಿದುಹೋದ ಅಧ್ಯಾಯ. ಇದು ಮಾತ್ರವಲ್ಲ, ಜಟ್ಟಿಯೊಬ್ಬರಿಂದ ಪಡೆದುಕೊಂಡಿದ್ದ ಒಂದು ಸಾವಿರ ರೂಪಾಯಿ ಲಂಚ ಮರಳಿಸಿ ಉದಾರತೆ ತೋರಿದ ಪೊಲೀಸರದ್ದೂ ಈಗ ಭೂತದ ಸಂಗತಿ.

ಕರ್ನಾಟಕ ರಾಜ್ಯ ಸರಕಾರ ಕೇವಲ ಏಳು ದಿನಗಳು ಮಾತ್ರ ದಸರೆಯನ್ನು ಆಚರಿಸಬೇಕು. ಆಯುಧ ಪೂಜೆ ಹಾಗೂ ವಿಜಯದಶಮಿಯ ದಿನ ಅರಮನೆಯನ್ನು ಅವರ ಸಂತತಿಯ ಉಪಯೋಗಕ್ಕೆ ಸಂಪೂರ್ಣವಾಗಿ ಬಿಟ್ಟುಕೊಡಬೇಕು. ಚಾಮುಂಡೇಶ್ವರಿಯ ರಥೋತ್ಸವದ ದಿನವೇ ನಾಡದೇವತೆಗೆ ತಕ್ಕುದಾದ ಗೌರವ ಹಾಗೂ ವೈಭವಯುತವಾದ ಮೆರವಣಿಗೆಯನ್ನು ನಡೆಸಲು ಮುಂದಾಗಬೇಕು ಎಂಬ ಸಲಹೆಯನ್ನು ಪ್ರಮೋದಾದೇವಿ ನೀಡಿದ್ದಾರೆ.

ಮೂರು ಪುಟಗಳ ಸುದೀರ್ಘ ಪತ್ರದಲ್ಲಿ ಸರಕಾರ ಮತ್ತು ಅರಮನೆಯ ನಡುವಿನ ಹೊಂದಾಣಿಕೆಯ ಕೊರತೆಯನ್ನು ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು , ಅಂಬಾರಿ ಪಡೆದ ನಂತರ ಸುರಕ್ಷಿತವಾಗಿ ಮರಳಿಸುವ ಹೊಣೆಗಾರಿಕೆಯನ್ನು ಒಪ್ಪಿದ್ದ ಮೈಸೂರು ನಗರ ಪೊಲೀಸ್ ಆಯುಕ್ತರು, ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಖುಲ್ಲಂಖುಲ್ಲಾ ವಿಫಲರಾಗಿದ್ದಾರೆ ಎಂಬ ಸಂಗತಿಯನ್ನು ಹೇಳಲಾಗಿದೆಯಲ್ಲದೆ, ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ನಡೆದುಕೊಂಡ ರೀತಿಯನ್ನು ಖಂಡಿಸಲಾಗಿದೆ.

ಮೈಸೂರು ರಾಜ ಮನೆತನದ ಹಿರಿಯರೂ ಆಗಿರುವ ಪ್ರಮೋದಾದೇವಿಯವರ ಹೇಳಿಕೆ ಕೇವಲ ಸರಕಾರಕ್ಕಷ್ಟೇ ಸೀಮಿತವಾಗಿದ್ದರೆ ಇಷ್ಟೊಂದು ವಾದ-ವಿವಾದಗಳು ಉದ್ಭವಿಸುತ್ತಲೇ ಇರಲಿಲ್ಲ. ಆ ಪತ್ರದಲ್ಲಿ ಪ್ರಮೋದಾದೇವಿಯವರು ತಾವು ಈ ವಿಷಯದಲ್ಲಿ ಸಾರ್ವಜನಿಕರ ಸಹಕಾರವನ್ನೂ ಬಯಸುವುದಾಗಿ ಹೇಳಿರುವುದು ಸಹಾನುಭೂತಿ ಗಳಿಕೆಯ ಮತ್ತೊಂದು ಮಜಲಷ್ಟೇ ಆಗಿ ಕಾಣಿಸಿಕೊಂಡಿದೆ.

ದಸರೆಯನ್ನು ಹೇಗೆ ನಡೆಸಬೇಕು, ಯಾರು ನಡೆಸಬೇಕು, ಎಷ್ಟು ದಿನ ನಡೆಸಬೇಕು ಎಂಬ ತೀರ್ಮಾನದ ಹಕ್ಕು ರಾಜ್ಯ ಸರಕಾರದ್ದೇ ಹೊರತು, ಯಾವುದೋ ಒಂದು ಕಾಲದಲ್ಲಿ ಅಧಿಕಾರ ನಡೆಸಿದ ರಾಜ ಮನೆತನದ್ದಂತೂ ಖಂಡಿತಾ ಅಲ್ಲ, ಅದು ಆಗಲೂ ಕೂಡದು.

ಅರಮನೆ ಯಾರದ್ದು ..?

ರಾಜ ಪ್ರಭುತ್ವ ಅಳಿದು ಪ್ರಜಾ ಪ್ರಭುತ್ವ ಜಾರಿಗೊಂಡ ನಂತರ, ನವ ಭಾರತದಲ್ಲಿನ ರಾಜ ಮನೆತನಗಳನ್ನು ಗೌರವ-ಘನತೆಗಳಿಂದ ನಡೆದುಕೊಳ್ಳುವ ಠರಾವುಗಳನ್ನು

ಅಂಗೀಕರಿಸಿ, 1950ರಲ್ಲಿ ಒಂದಷ್ಟು ನಿರ್ಣಯಗಳನ್ನು ಜಾರಿಗೆ ತರಲಾಯಿತು. ಇದರಂತೆ ಮೈಸೂರು ರಾಜ ಮನೆತನದ ಪರವಾಗಿ ಅಂದಿನ ದೊರೆಗಳಾಗಿದ್ದ ಜಯ ಚಾಮರಾಜೇಂದ್ರ ಒಡೆಯರ್ ಅವರು, ಭಾರತ ಸರಕಾರದೊಂದಿಗೆ ಮಾಡಿಕೊಂಡ ಒಡಂಬಡಿಕೆಯ ಭಾಗವಾಗಿ ಮೈಸೂರಿನ ಅರಮನೆ, ಅಂಬಾ ವಿಲಾಸವನ್ನೂ ಸಹ ಒಡೆಯರ ಸ್ವಂತ ಆಸ್ತಿ ಎಂದು ಘೋಷಿಸಲಾಯಿತು. ಇದಲ್ಲದೆ ಮೈಸೂರು, ಬೆಂಗಳೂರು, ಊಟಿ, ಶ್ರೀರಂಗಪಟ್ಟಣ ಸೇರಿದಂತೆ ಅನೇಕ ಕಡೆಗಳಲ್ಲಿ ಸಾವಿರಾರು ಎಕರೆ ಭೂಮಿಯನ್ನೂ ಇವರ ಹೆಸರಿಗೆ ಮಾಡಿಕೊಡಲಾಯಿತು. ಇದು ಬೇರೆ ಮಾತು.

ವಿಧಾನ ಸೌಧದಲ್ಲಿ ಕುಳಿತು ಆಳ್ವಿಕೆ ಮಾಡಿದ ಮಾತ್ರಕ್ಕೆ ಇಡೀ ರಾಜ್ಯದಲ್ಲಿರುವ ಎಲ್ಲ ಪ್ರಮುಖ ಕಟ್ಟಡಗಳು, ಜಮೀನುಗಳನ್ನೆಲ್ಲ ಸರಕಾರದ ಮುಖ್ಯಸ್ಥನಾದ ಮುಖ್ಯಮಂತ್ರಿ ತನ್ನದು ಎಂದು ಹೇಳುವುದಕ್ಕೆ, ಘೋಷಿಸಿಕೊಳ್ಳುವುದಕ್ಕೆ ಹೇಗೆ ಅವಕಾಶವಿಲ್ಲವೋ , ಹಾಗೆಯೇ ಮೈಸೂರು ಅರಮನೆಯನ್ನೂ ಸಹ ರಾಜ ಪರಿವಾರದ ಆಸ್ತಿ ಎಂದು ಒಪ್ಪಲು ಸಾಧ್ಯವಿಲ್ಲ ಎಂಬ ವಾದದ ಹಿನ್ನೆಲೆಯನ್ನಿಟ್ಟುಕೊಂಡು, 1998ರ ಜೆ.ಎಚ್.ಪಟೇಲರ ಮುಖ್ಯಮಂತ್ರಿ ಅವಧಿಯಲ್ಲಿ ಮೈಸೂರು ಅರಮನೆಯನ್ನು ಕಾಯ್ದೆಯ ಅಡಿಯಲ್ಲಿ ಸರಕಾರದ ಆಸ್ತಿಯನ್ನಾಗಿ ಪಡೆದುಕೊಳ್ಳಲಾಯಿತು.

ಅರಮನೆಯ ಒಂದು ಪಾರ್ಶ್ವದಲ್ಲಿ ಒಡೆಯರ ಕುಟುಂಬ ವಾಸಿಸಲು ಹಾಗೂ ನ್ಯಾಯಾಲಯದ ನಿರ್ದೇಶನದಂತೆ ಖಾಸಗಿ ಮ್ಯೂಸಿಯಂ ನಡೆಸಲು ಅನುಮತಿಯನ್ನೂ ನೀಡಲಾಯಿತು. ಸರಕಾರದ ಈ ನಿರ್ಣಯವನ್ನು ಪ್ರಶ್ನಿಸಿ ರಾಜ ಮನೆತನ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ಸಂಗತಿ ಅಂದಿನಿಂದ ಇಂದಿನವರೆಗೂ ವಿವಾದವಾಗಿಯೇ ಉಳಿದಿದ್ದು, ದೇಶದ ಸರ್ವೋನ್ನತ ನ್ಯಾಯಪೀಠದಲ್ಲಿ ಹಾಗೆಯೇ ಉಳಿದುಕೊಂಡಿದೆ.

ಅಂಬಾರಿ ಖಾಸಗಿ ಆಸ್ತಿ ಆದರೆ ರಾಯಧನ ಪಡೆಯಲಾಗುತ್ತದೆ

ಇನ್ನು ಸಿಂಹಾಸನ ಹಾಗೂ ಅಂಬಾರಿ ರಾಜ ಮನೆತನದ ಖಾಸಗಿ ಆಸ್ತಿ ಎಂದು ನ್ಯಾಯಾಲಯವೇ ಸ್ಪಷ್ಟವಾಗಿ ಆದೇಶಿಸಿದೆ. ದಸರೆಯ ಸಂದರ್ಭದಲ್ಲಿ ಆನೆಯ ಮೇಲೆ ತಾಯಿ ಚಾಮುಂಡೇಶ್ವರಿಯನ್ನು ವಿರಾಜಮಾನಳನ್ನಾಗಿಸುವ ಅಂಬಾರಿಯನ್ನು ಅರಮನೆ, ಪ್ರತಿವರ್ಷ ದಸರೆಯ ಸಂದರ್ಭದಲ್ಲಿ ಅವರದ್ದೇ ಆದ ಷರತ್ತುಗಳಿಗೊಳಪಟ್ಟು ನೀಡುತ್ತಾ ಬಂದಿದೆ.

ಅಂಬಾರಿಯ ರಾಯಧನವಾಗಿ ತೆರಿಗೆಯೂ ಸೇರಿ ಐವತ್ತು ಲಕ್ಷ ರೂಪಾಯಿಗಳನ್ನು ರಾಜ್ಯ ಸರಕಾರವೂ ಅರಮನೆಯ ಮಂದಿಗೆ ನೀಡುತ್ತಿದೆ. ಇದೂ ಒಂದು ಸಂಪ್ರದಾಯವೇ ಆಗಿದೆ.

ಪ್ರಮೋದಾದೇವಿ ಅವರ ಮಾತುಗಳಿಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೂ ಸಹ ಇದನ್ನೇ.

‘ಸರಕಾರ ಅಂಬಾರಿಯನ್ನು ಪುಕ್ಕಟೆ ಪಡೆಯುತ್ತಿಲ್ಲ. ನಾವು ಅವರಿಗೆ ರಾಯಧನ ನೀಡುತ್ತಿದ್ದೇವೆ. ಅರಮನೆಯೂ ಸಹ ಸರಕಾರದ್ದೇ ಆಗಿದೆ. ಅವರ ನಿವಾಸಕ್ಕೆಂದು ಸ್ವಲ್ಪ ಜಾಗವನ್ನು ಬಿಟ್ಟುಕೊಡಲಾಗಿದೆ’ ಎಂಬುದು ಯತೀಂದ್ರ ಅವರ ಸ್ಪಷ್ಟ ಮಾತು.

ಇದನ್ನು ಬಹಳಷ್ಟು ಜನ ರಾಜಮನೆತನದ ಕಟ್ಟಾಳುಗಳು ಯರ್ರಾಬಿರ್ರಿ ಖಂಡಿಸಿ, ಮೈಸೂರು ನಗರ ಮಾತ್ರವಲ್ಲ ; ಇಡೀ ರಾಜ್ಯವೇ ಮಹಾರಾಜರದ್ದು . ಇದನ್ನು ಹೇಳುವುದಕ್ಕೆ ಯತೀಂದ್ರ ಯಾರು ಎಂದೆಲ್ಲ ಪ್ರಶ್ನಿಸಿ, ಸೋಷಿಯಲ್ ಮೀಡಿಯಾಗಳಲ್ಲಿ ಮುಖ ತೋರಿಸಿಕೊಂಡು ಹಿರಿ-ಹಿರಿ ಹಿಗ್ಗುತ್ತಲೇ ಇದ್ದಾರೆ.

ದಸರೆಯ ವಿಚಾರದಲ್ಲಿ ಏನು ಮಾಡಬೇಕು, ಏನನ್ನು ಮಾಡಬಾರದು ಎಂಬ ಯುಕ್ತಾಯುಕ್ತ ವಿವೇಚನೆ ನಮಗಿದೆ ಎಂಬ ಮಾತನ್ನು ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ಹೇಳಿಯಾಗಿದೆ.

ರಾಜ್ಯ ಸರಕಾರದ ಶಕ್ತಿಸೌಧವಾದ ವಿಧಾನ ಸೌಧವನ್ನು ಕಟ್ಟಿಸಿದ್ದು ಸರಕಾರದ ಹಣದಲ್ಲಿ. ಹಾಗಾಗಿ ಅದು ಸಹಜವಾಗಿಯೇ ಸರಕಾರದ ಆಸ್ತಿ. ಅರ್ಥಾತ್ ಜನರ ಸ್ವತ್ತು. ಮಹಾರಾಜರು ಅರಮನೆಯನ್ನು ಕಟ್ಟಿಸಿದ್ದೂ ಸಹ ಜನರ ಹಣದಲ್ಲಿಯೇ ಹೊರತು, ಅವರ ದುಡಿಮೆಯಿಂದಲ್ಲ. ಹೀಗಾಗಿ ಅರಮನೆಯೂ ಸಹ ಜನ ಸಾಮಾನ್ಯರದ್ದೇ ಹೊರತು, ರಾಜಪರಿವಾರಕ್ಕೆ ಸೇರಿದ್ದಂತೂ ಖಂಡಿತಾ ಅಲ್ಲ.

ಮೈಸೂರು ರಾಜ ಮನೆತನಕ್ಕೆ ಸಾವಿರಾರು ಎಕರೆ ಭೂಮಿ ನೀಡಲಾಗಿದೆ. ಬೆಂಗಳೂರು ಅರಮನೆ ಅದರ ಸುತ್ತ-ಮುತ್ತಲಿನ ಎಕರೆಗಟ್ಟಲೆ ಜಾಗವೂ ಅವರಿಗೇ ಸೇರಿದೆ. ಊಟಿಯಲ್ಲಿ ,

ಶ್ರೀರಂಗಪಟ್ಟಣದಲ್ಲಿಯೂ ಒಡೆಯರ ಮನೆತನಕ್ಕೆ ಕೋಟಿಗಟ್ಟಲೆ ಮೌಲ್ಯದ ಆಸ್ತಿ-ಪಾಸ್ತಿಗಳಿವೆ. ಇದೆಲ್ಲದರ ಬಗ್ಗೆ ಯಾರೂ ಚಕಾರವನ್ನೂ ಎತ್ತುತ್ತಿಲ್ಲ. ಆದರೆ ಮೈಸೂರು ಅರಮನೆಯನ್ನು ಸರಕಾರ ಪಡೆದುಕೊಂಡ ಮೇಲೆ, ಅರಮನೆ ಮಂಡಳಿಯ ಮೂಲಕ ಅಧಿಕಾರ ನಡೆಸುತ್ತಿರುವಾಗ ಈ ಬಗ್ಗೆ ಅನಗತ್ಯ ಪ್ರಶ್ನೆಗಳನ್ನು ಹರಿಯಬಿಡುವುದು ಸರಿಯಾದ ಕ್ರಮವಲ್ಲ.

ಸುಪ್ರೀಂಕೋರ್ಟಿನಲ್ಲಿ ಇರುವ ವಿವಾದ ಮುಗಿದ ನಂತರ, ಯಾರ ಪಾಲು ಯಾರಿಗೆ ಎಂಬುದು ನಿಷ್ಕರ್ಷೆಯಾಗಿಯೇ ಆಗುತ್ತದೆ. ಅಲ್ಲಿಯವರೆಗೆ ರಾಜ ಪರಿವಾರದ ಹಿರಿಯಜ್ಜಿ ಯಾಗಿರುವ ಪ್ರಮೋದಾದೇವಿಯವರೂ ಸಹ ಮೌನಕ್ಕೆ ಶರಣಾಗುವುದು ವಿಹಿತ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಟಿ.ಗುರುರಾಜ್

contributor

ಪತ್ರಕರ್ತರು, ಲೇಖಕರು