ಸುರಪುರ  ನಗರದ ಅನೇಕ ಕಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ. ನಗರದ ಮಹಾತ್ಮ ಗಾಂಧಿ ವೃತ್ತ ರಂಗಂಪೇಟೆಯ ದೊಡ್ಡಬಜಾರ ತಿಮ್ಮಾಪುರ ದೀವಳಗುಡ್ಡ ಇತರೆ ಕಡೆಗಳಲ್ಲಿ ಬೀದಿ ನಾಯಿಗಳು ಹಿಂಡು ಹಿಂಡಾಗಿ ರಸ್ತೆಯ ಮೇಲೆ ಓಡಾಡುವುದರಿಂದ ಸಾರ್ವಜನಿಕರು ಭಯ ಪಡುವಂತಾಗಿದೆ.

ಕಳೆದ ಮೂರು ದಿನಗಳ ಹಿಂದಷ್ಟೇ, ತಿಮ್ಮಾಪುರದ ಮುಖ್ಯ ರಸ್ತೆಯ ಮೇಲೆ ಬೀದಿ ನಾಯಿಗಳ ಹಿಂದು ಕಾದಾಡುವ ಸಂದರ್ಭದಲ್ಲಿ ಬೈಕ್ ಸವಾರರಿಗೆ ಗುದ್ದಿದ ಪರಿಣಾಮವಾಗಿ ಬೈಕ್ ಸವಾರ ಬಿದ್ದು ಗಾಯಗೊಂಡಿರುವ ಘಟನೆಯು ಕೂಡ ನಡೆದಿದೆ.

ಬೆಳಿಗ್ಗೆ ಮತ್ತು ಸಾಯಂಕಾಲ ವಾಯು ವಿಹಾರಗಳು ರಸ್ತೆಯಲ್ಲಿ ನಡೆದುಕೊಂಡು ಹೋಗಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಅನೇಕ ಬಾರಿ ಬೆಳ್ಳಂ ಬೆಳಗ್ಗೆ ರಸ್ತೆಯ ಮೇಲೆ ಓಡುವ ಸಂದರ್ಭದಲ್ಲಿ ನಾಯಿಗಳು ಹಿಂಡಾಗಿ ದಾಳಿ ಮಾಡಲು ಬರುತ್ತವೆ. ಶ್ವಾನಗಳ ಮಾಲೀಕರು ಅವುಗಳನ್ನು ಬೀದಿಗೆ ಬಿಡುವ ಬದಲು ತಮ್ಮ ಮನೆಗಳಲ್ಲಿ ಕಟ್ಟಿ ಹಾಕುವ ಕಾರ್ಯ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಬೀದಿ ನಾಯಿಗಳ ಹಾವಳಿಯಿಂದ ಈ ಹಿಂದೆ ಮಕ್ಕಳ, ವೃದ್ಧರ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆಗಳು ಕೂಡ ವರದಿಯಾಗಿದ್ದವು. ಈ ಹಿಂದೆ ಒಂದು ಬಾರಿ ನಗರಸಭೆಯಿಂದ ಶ್ವಾನಗಳ ನಿಯಂತ್ರಣಕ್ಕೆ ಸಂತಾನ ಹರಣ ಚಿಕಿತ್ಸೆ ಕ್ರಮ ವಹಿಸಿದ್ದರು ಸಂಪೂರ್ಣವಾಗಿ ನಿಯಂತ್ರಣಗೊಂಡಿಲ್ಲ. ಈಗ ಮತ್ತಷ್ಟು ನಾಯಿಗಳು ರಸ್ತೆಯಲ್ಲಿ ಓಡಾಡುವುದರಿಂದ ಸಾರ್ವಜನಿಕರು ಭಯದಲಿಯೇ ತಿರುಗಾಡುವಂತಾಗುತ್ತಿದೆ. ಹಿಂದೆ ನಾಯಿಗಳನ್ನು ಹಿಡಿದು ವಾಹನಗಳಲ್ಲಿ ತುಂಬಿಕೊಂಡು ಹೋಗಿ ಅವುಗಳನ್ನು ಸಾಯಿಸಲಾಗಿದೆ ಎನ್ನುವ ಆರೋಪವು ಕೇಳಿಬಂದಿತ್ತು. ಇದರ ಕುರಿತು ಶ್ವಾನ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಸಾರ್ವಜನಿಕರಿಗೆ ತೊಂದರೆ ಆಗದಂತೆ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ನಗರಸಭೆ ಮುಂದಾಗಬೇಕು. ಆದರೆ ಯಾವುದೇ ಕಾರಣಕ್ಕೂ ಶ್ವಾನಗಳನ್ನು ಹತ್ಯೆ ಮಾಡುವುದಾಗಲಿ, ಅವುಗಳ ಮೇಲೆ ಹಲ್ಲೆ ನಡೆಸುವಂತಹ ಕೃತ್ಯಕ್ಕೆ ಮುಂದಾಗದೆ, ಅವುಗಳ ಸಂತಾನ ಹರಣ ಚಿಕಿತ್ಸೆಯ ಮೂಲಕ ನಿಯಂತ್ರಣ ಮಾಡಬೇಕು ಮತ್ತು ಶ್ವಾನಗಳ ಮಾಲೀಕರು ತಮ್ಮ ಮನೆಗಳಲ್ಲಿ ಶ್ವಾನಗಳನ್ನು ಕಟ್ಟಿಕೊಳ್ಳಲು ನಗರಸಭೆಯಿಂದ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಪ್ರಾಣಿಪ್ರಿಯರು ಆಗ್ರಹಿಸುತ್ತಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor